Advertisement

ನೀರವ್‌ ಗಡೀಪಾರು : ಭಾರತಕ್ಕೆ ರಾಜತಾಂತ್ರಿಕ ಗೆಲುವು

12:48 AM Apr 17, 2021 | Team Udayavani |

ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ಗೆ 200 ಕೋಟಿ ಅಮೆರಿಕನ್‌ ಡಾಲರ್‌ಗಳಷ್ಟು ವಂಚಿಸಿದ ಪ್ರಕರಣದ ಆರೋಪಿಯಾಗಿರುವ ಭಾರತದ ವಜ್ರ ವ್ಯಾಪಾರಿ ನೀರವ್‌ ಮೋದಿಯನ್ನು ಭಾರತಕ್ಕೆ ಗಡೀಪಾರು ಮಾಡುವ ಪತ್ರಕ್ಕೆ ಬ್ರಿಟನ್‌ ಗೃಹ ಸಚಿವೆ ಪ್ರೀತಿ ಪಟೇಲ್‌ ಅಂಕಿತ ಹಾಕಿದ್ದಾರೆ. ಇದರೊಂದಿಗೆ ವಂಚಕ ನೀರವ್‌ ಮೋದಿಯನ್ನು ಭಾರತಕ್ಕೆ ವಾಪಸು ಕರೆತರುವ ವಿಚಾರದಲ್ಲಿ ಕೇಂದ್ರ ಸರಕಾರ ಕಳೆದ ಎರಡು ವರ್ಷಗಳಿಂದ ನಡೆಸುತ್ತಾ ಬಂದಿರುವ ಕಾನೂನು ಮತ್ತು ರಾಜತಾಂತ್ರಿಕ ಹೋರಾಟಕ್ಕೆ ಮಹತ್ವದ ಗೆಲುವು ಲಭಿಸಿದಂತಾಗಿದೆ.

Advertisement

ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಹಗರಣ ಬಯಲಾಗುತ್ತಿದ್ದಂತೆಯೇ ನೀರವ್‌ ಮೋದಿ 2018ರ ಜನವರಿ 1ರಂದು ದೇಶದಿಂದ ಪರಾರಿಯಾ  ಗಿದ್ದ. ಬ್ಯಾಂಕ್‌ ನೀಡಿದ ದೂರಿನಂತೆ 2018ರ ಜನವರಿ 31ರಂದು ಸಿಬಿಐ ನೀರವ್‌ ಮೋದಿ, ಮತ್ತಾತನ ಸಂಬಂಧಿ ಮೆಹುಲ್‌ ಚೋಕ್ಸಿ ಮತ್ತಿತರರ ವಿರುದ್ಧ ಬ್ಯಾಂಕ್‌ಗೆ ವಂಚಿಸಿದ ಸಂಬಂಧ ಕ್ರಿಮಿನಲ್‌ ಒಳಸಂಚಿನ ಪ್ರಕರಣ ದಾಖಲಿಸಿಕೊಂಡಿತ್ತು. 2019ರ ಡಿಸೆಂಬರ್‌ 20ರಂದು ಈ ಹಿಂದಿನ 25 ಮಂದಿಯ ಸಹಿತ ಒಟ್ಟಾರೆ 30 ಮಂದಿ ಆರೋಪಿಗಳ ವಿರುದ್ಧ ಎರಡನೇ ಆರೋಪಪಟ್ಟಿಯನ್ನು ದಾಖಲಿಸಿತ್ತು.

2019ರ ಮಾರ್ಚ್‌ನಲ್ಲಿ ಯುಕೆ ಪೊಲೀಸರು ನೀರವ್‌ ಮೋದಿಯನ್ನು ಬಂಧಿಸಿ ಲಂಡನ್‌ನ ವಾಂಡ್ಸ್‌ವರ್ತ್‌ ಜೈಲಿನಲ್ಲಿರಿಸಿದ್ದರು. ನೀರವ್‌ ಮೋದಿ ಇಲ್ಲಿನ ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮತ್ತು ಹೈಕೋರ್ಟ್ ನಲ್ಲಿ ಜಾಮೀನಿಗಾಗಿ ನಿರಂತರವಾಗಿ ಪ್ರಯತ್ನಿಸುತ್ತಲೇ ಬಂದಿದ್ದನಾದರೂ ಈ ಎಲ್ಲ ಅರ್ಜಿಗಳನ್ನು ನ್ಯಾಯಾಲಯಗಳು ತಿರಸ್ಕರಿಸಿದ್ದವು. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ನೀರವ್‌ ಮೋದಿಯ ಎಲ್ಲ ವಾದಗಳನ್ನು ತಳ್ಳಿಹಾಕಿ ಆತನ ಗಡೀಪಾರಿಗೆ ಸಂಬಂಧಿಸಿದಂತೆ ಗೃಹ ಸಚಿವರು ನಿರ್ಧಾರ ಕೈಗೊಳ್ಳಲಿರುವರು ಎಂದು ತಿಳಿಸಿತ್ತು. ಇದಾದ ಬಳಿಕ ಭಾರತ ಸರಕಾರ ನಿರಂತರವಾಗಿ ನೀರವ್‌ ಮೋದಿ ಗಡೀಪಾರಿಗೆ ಸಂಬಂಧಿಸಿದಂತೆ ಬ್ರಿಟನ್‌ ಸರಕಾರದ ಮೇಲೆ ರಾಜತಾಂತ್ರಿಕವಾಗಿ ಒತ್ತಡ ಹೇರುತ್ತಲೇ ಬಂದಿತ್ತು. ಅದರಂತೆ ಇದೀಗ ನೀರವ್‌ ಮೋದಿ ಗಡೀಪಾರಿಗೆ ಬ್ರಿಟನ್‌ ತನ್ನ ಒಪ್ಪಿಗೆಯನ್ನು ನೀಡಿದೆ.

ಬ್ರಿಟನ್‌ ಸರಕಾರದ ನಿರ್ಧಾರದ ವಿರುದ್ಧ ನೀರವ್‌ ಮೋದಿ ಅಲ್ಲಿನ ಹೈಕೋರ್ಟ್‌ಗೆ ಮೊರೆ ಹೋಗಲು ಅವಕಾಶವಿದೆ. ನೀರವ್‌ ಮೋದಿ ಪರ ವಕೀಲರು ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳು ಸ್ಪಷ್ಟವಾಗಿದ್ದರೂ ಇದರಲ್ಲಿ ಅವರಿಗೆ ಗೆಲುವು ಲಭಿಸುವ ಸಾಧ್ಯತೆ ತೀರಾ ವಿರಳ. ಕೊನೆಯ ಅಸ್ತ್ರವಾಗಿ ಬ್ರಿಟನ್‌ ಸರಕಾರದ ಆಶ್ರಯ ಕೋರುವ ಅವಕಾಶವೂ ನೀರವ್‌ಗೆ ಇದೆ. ಆದರೆ ಭಾರತ ಮತ್ತು ಬ್ರಿಟನ್‌ ನಡುವೆ ರಾಜತಾಂತ್ರಿಕ ಸಂಬಂಧ ಉತ್ತಮ  ವಾಗಿ  ರುವುದರಿಂದ ಹಾಗೂ ಆರೋಪಿಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಪರಸ್ಪರ ಅಂಕಿತ ಹಾಕಿರುವುದರಿಂದ ಇದರಲ್ಲೂ ನೀರವ್‌ ಮೋದಿಗೆ ರಕ್ಷಣೆ ದೊರೆಯುವುದು ಅಸಂಭವ. ಕಾನೂನು ಹೋರಾಟ ಪೂರ್ಣಗೊಂಡು ನೀರವ್‌ ಮೋದಿಯನ್ನು ಬ್ರಿಟನ್‌ ಸರಕಾರ ಭಾರತಕ್ಕೆ ಗಡೀಪಾರು ಮಾಡಿದ್ದೇ ಆದಲ್ಲಿ ಭಾರತ ಸರಕಾರಕ್ಕೆ ವಂಚಕರ ವಿರುದ್ಧದ ಹೋರಾಟದಲ್ಲಿ ಬಲುದೊಡ್ಡ ಯಶಸ್ಸು ಲಭಿಸಿದಂತಾಗಲಿದೆ. ವಂಚಕರು, ಭೂಗತ ಪಾತಕಿಗಳು, ಉಗ್ರರು ವಿದೇಶಗಳಲ್ಲಿ ನೆಲೆ ಕಂಡುಕೊಳ್ಳುವ ಮೂಲಕ ಭಾರತಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಲೇ ಬಂದಿದ್ದು ಅವರೆಲ್ಲರನ್ನೂ ವಿದೇಶಗಳಿಂದ ಭಾರತಕ್ಕೆ ಗಡೀಪಾರು ಮಾಡಲು ಭಾರತ ಸರಕಾರ ನಡೆಸುತ್ತಾ ಬಂದಿರುವ ಹೋರಾಟಕ್ಕೆ ಭೀಮಬಲ ತುಂಬಿದಂತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next