Advertisement

ನೀರವ್‌ ಖಜಾನೆ ಬಯಲು; 5100 ಕೋಟಿ ಮೌಲ್ಯದ ಆಭರಣ ಪತ್ತೆ

08:15 AM Feb 16, 2018 | Team Udayavani |

ಮುಂಬೈ/ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ನಡೆದಿರುವ 11 ಸಾವಿರ ಕೋಟಿ ರೂ. ಅಕ್ರಮಕ್ಕೆ ಸಂಬಂಧಿಸಿದಂತೆ  ಉದ್ಯಮಿ ನೀರವ್‌ ಮೋದಿಗೆ ಸಂಬಂಧಿಸಿದ ಮುಂಬೈ, ನವದೆಹಲಿ ಮತ್ತು ಗುಜರಾತ್‌ನಲ್ಲಿನ ಕಚೇರಿ ಹಾಗೂ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. 

Advertisement

ಈ ಸಂದರ್ಭದಲ್ಲಿ 5, 100 ಕೋಟಿ ರೂ. ಮೌಲ್ಯದ ವಜ್ರ, ಆಭರಣ ಮತ್ತು ಚಿನ್ನ ಲಭ್ಯವಾಗಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಅವರ ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ಬುಧವಾರ ಷೇರು ವಿನಿಮಯ ಕೇಂದ್ರ ಬಿಎಸ್‌ಇಗೆ ವರದಿ ನೀಡುತ್ತಿದ್ದಂತೆಯೇ, ದಾಳಿ ನಡೆಸಲಾಗಿದೆ. ನೀರವ್‌ ಮೋದಿ, ಪತ್ನಿ ಆಮಿ, ಸೋದರ ನಿಶಾಲ್‌ ಮತ್ತು ಮಾವ ಹಾಗೂ ಉದ್ಯಮಿ ಮೆಹುಲ್‌ ಚೋಕ್ಸಿ ವಿರುದ್ಧ 280 ಕೋಟಿ ರೂ. ಹಣದುರ್ಬಳಕೆ ಆರೋಪ ಮಾಡಲಾಗಿದೆ. ಮೋದಿ ಹಾಗೂ ಇತರರಿಗೆ ಸಂಬಂಧಿಸಿದ ಐದು ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಲ್ಲದೆ ಅವರ ಪಾಸ್‌ಪೋರ್ಟ್‌ ಮುಟ್ಟುಗೋಲು ಹಾಕಿಕೊಳ್ಳುವಂತೆ ಜಾರಿ ನಿರ್ದೇಶನಾ ಲಯವು ವಿದೇಶಾಂಗ ಸಚಿವಾಲಯವನ್ನು ಕೋರಲಿದೆ.  

ಗುರುವಾರ ಬೆಳಗ್ಗೆಯೇ ನೀರವ್‌ಗೆ ಸಂಬಂಧಿಸಿದ 10 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಮುಂಬೈನ ಕುರ್ಲಾ ದಲ್ಲಿರುವ ಮನೆ, ಕಾಲಾ ಘೋಡಾದಲ್ಲಿರುವ ಆಭರಣ ಅಂಗಡಿ, ಬಾಂಧಾ ಮತ್ತು ಲೋವರ್‌ ಪರೇಲ್‌ನಲ್ಲಿರುವ ಕಂಪನಿಯ ಮೂರು ಕಚೇರಿಗಳು, ಮತ್ತು ದಹಲಿಯ ಡಿಫೆನ್ಸ್‌ ಕಾಲನಿ ಮತ್ತು ಚಾಣಕ್ಯಪುರಿಯಲ್ಲಿರುವ ಶೋರೂಂಗಳ ಮೇಲೆ ದಾಳಿ ನಡೆಸಲಾಗಿದೆ. ದೇಶ ಬಿಟ್ಟ ನೀರವ್‌: ಇದೇ ವೇಳೆ ಸಿಬಿಐ ನೀಡಿದ ಮಾಹಿತಿ ಪ್ರಕಾರ ನೀರವ್‌ ಕುಟುಂಬ ಸಮೇತರಾಗಿ ಜ.1ರಂದೇ ಭಾರತ ತೊರೆದಿದ್ದಾರೆ. ಮೂಲಗಳ ಪ್ರಕಾರ ಅವರು ಸ್ವಿಜರ್ಲೆಂಡ್‌ನ‌ಲ್ಲಿದ್ದಾರೆ. 

ಪ್ರಧಾನಿ ಮೇಲೆ ಕಾಂಗ್ರೆಸ್‌ ಆರೋಪ: ಅವ್ಯವಹಾರ ತಡೆಯಲು ಪ್ರಧಾನಿ ನರೇಂದ್ರ ಮೋದಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್‌ ಆರೋಪಿಸಿದೆ. ಅಲ್ಲದೆ ಪ್ರಧಾನಿ ಮೋದಿ ಜತೆಗೆ ನೀರವ್‌ ಕಾಣಿಸಿಕೊಂಡಿರುವ ಫೋಟೋ, ಇತ್ತೀಚೆಗೆ ದಾವೋಸ್‌ನಲ್ಲಿ ನಡೆದ ವಿಶ್ವ ವಾಣಿಜ್ಯ ವೇದಿಕೆ ಸಮ್ಮೇಳನದಲ್ಲಿ ನೀರವ್‌ ಇದ್ದ ಪೋಸ್ಟರುಗಳನ್ನೂ  ಪ್ರದರ್ಶಿಸಿ “ಛೋಟಾ ಮೋದಿ’ ಎಂದು ಛೇಡಿಸಿದೆ.
  ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ “ಹಗರಣದಲ್ಲಿ ಯಾರೂ ಭಾಗಿಗಳಾಗಿಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದ್ದಾರೆ. 

ಘಟನೆ ನಡೆದಿದ್ದು ಹೇಗೆ?
ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ನಡೆದ ಅಕ್ರಮಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬ್ಯಾಂಕ್‌ ಗುರುವಾರ ವಿವರಿಸಿದೆ. ಈ ಬಗ್ಗೆ ಪಿಎನ್‌ಬಿ ಅಧ್ಯಕ್ಷ ಸುನಿಲ್‌ ಮೆಹ್ತಾ ಸುದ್ದಿಗೋಷ್ಠಿ ನಡೆಸಿ 2011ರಿಂದಲೇ ಅಕ್ರಮ ನಡೆಯುತ್ತಿತ್ತು. ಜ.3ರಂದೇ ಈ  ಪ್ರಕರಣ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ.  ಜ. 16 ರಂದು  ಕಂಪನಿಯ ಅಧಿಕಾರಿಗಳು  ಸಾಲ ನೀಡುವಂತೆ ವಿನಂತಿ ಮಾಡಿದರು. ಆದರೆ ಸಂಪೂರ್ಣ ಮೊತ್ತವನ್ನು ಅಡಮಾನ ಇಟ್ಟರೆ ಮಾತ್ರ ಬ್ಯಾಂಕ್‌ ಸಾಲ ನೀಡುವುದಕ್ಕಾಗಿ ಎಲ್‌ಒಯು ನೀಡಬಹುದಾಗಿದೆ ಎಂದು ಬ್ಯಾಂಕ್‌ ಹೇಳಿತು. ಆದರೆ ಈ ಹಿಂದೆ ಮಾರ್ಜಿನ್‌ ನೀಡದೆಯೇ ಈ ಸೌಲಭ್ಯವನ್ನು ಪಡೆದಿದ್ದೇವೆ.  ಯಾಕೆ ಈಗ ಸಂಪೂರ್ಣ ಮೊತ್ತವನ್ನು ಠೇವಣಿ ಇಡಬೇಕು ಎಂದು ಕಂಪನಿ ಅಧಿಕಾರಿಗಳು ವಾದಿಸಿದರು.  ಆಗ ಬ್ಯಾಂಕ್‌ನ ಹಳೆಯ ದಾಖಲೆ ತಡಕಾಡಿತು.  ಸ್ವಿಫ್ಟ್ ಇಂಟರ್‌ಬ್ಯಾಂಕ್‌ ಮೆಸೇಜಿಂಗ್‌ ವ್ಯವಸ್ಥೆಯಲ್ಲಿ ಇಬ್ಬರು ಕಿರಿಯ ಉದ್ಯೋಗಿಗಳು ಎಲ್‌ಒಯು ನೀಡಿದ್ದು ಕಂಡುಬಂತು. ಆದರೆ ಈ ಎಲ್‌ಒಯು ನೀಡಿದ ಬಗ್ಗೆ ಬ್ಯಾಂಕ್‌ನ ಸಿಸ್ಟಂಗಳಲ್ಲಿ ನಮೂದಿಸಿರಲಿಲ್ಲ. 

Advertisement

ಎಫ್ಐಆರ್‌ ದಾಖಲಿಸುವ ಮೊದಲೇ ವ್ಯಕ್ತಿಯೊಬ್ಬ ಪರಾರಿಯಾಗುತ್ತಾನೆ, ದಾವೋಸ್‌ನಲ್ಲಿ ಪ್ರಧಾನಿ ಜತೆ ಪೋಟೋ ತೆಗೆಸಿಕೊಳ್ಳುತ್ತಾನೆ ಎಂದಾರೆ ಕೇಂದ್ರ ಸರ್ಕಾರ ಈ ಬಗ್ಗೆ ವಿವರಣೆ ನೀಡಬೇಕು. ಸೀತಾರಾಮ್‌ ಯೆಚೂರಿ, ಸಿಪಿಎಂನಾಯಕ
ಜನರ ಉಳಿತಾಯವೇ ಸುರಕ್ಷಿತವಾಗಿಲ್ಲ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಏನಾಗಿದೆ ಎಂದರೆ ನೋಡಿದರೆ ಗೊತ್ತಾಗುತ್ತದೆ. ಕಾಲಮಿತಿಯಲ್ಲಿ ಈ ಬಗ್ಗೆ ತನಿಖೆಯಾಗಬೇಕು. 

ಮಮತಾ ಬ್ಯಾನರ್ಜಿ,  ಪಶ್ಚಿಮ ಬಂಗಾಳ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next