ಹುಬ್ಬಳ್ಳಿ: ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಭಾವಿಸಿ ರಾಜ್ಯ ಸರ್ಕಾರ ಹಾಗೂ ಹು-ಧಾ. ಪೊಲೀಸ್ ಆಯುಕ್ತರ ವಿರುದ್ಧ ಮಾತನಾಡಿದ್ದೆ. ನನ್ನಿಂದಾದ ತಪ್ಪಿಗೆ ಕ್ಷಮೆ ಕೇಳುತ್ತಿದ್ದೇನೆ ಎಂದು ಹತ್ಯೆಯಾದ ನೇಹಾಳ ತಂದೆ ನಿರಂಜನ ಹಿರೇಮಠ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಗಳು ಕೊಲೆಯಾದ ನಂತರ ನಾನು ದುಃಖದಲ್ಲಿದ್ದೆ. ಮಗಳ ಅಂತ್ಯಕ್ರಿಯೆವರೆಗೂ ನನ್ನ ಜೊತೆಯಲ್ಲಿದ್ದ ನನ್ನವರು ನಂತರ ಕಾಣಲಿಲ್ಲ. ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದು ಭಾವಿಸಿ, ಮಾಹಿತಿಯ ಕೊರತೆಯಿಂದ ಸರ್ಕಾರದ ವಿರುದ್ಧ ಮಾತನಾಡಿದ್ದೆ. ಪ್ರಕರಣ ಕುರಿತು ಎಲ್ಲ ಮಾಹಿತಿಯನ್ನು ನಮ್ಮ ಪಕ್ಷದವರೇ ಸರ್ಕಾರಕ್ಕೆ ಒದಗಿಸಿದ್ದಾರೆ ಎಂದು ನಿನ್ನೆ ತಿಳಿಯಿತು. ನನ್ನಿಂದ ತಪ್ಪಾಗಿದೆ ಎಂದರು.
ನಮ್ಮ ಪಕ್ಷದವರು ತೆರೆಮರೆಯಲ್ಲಿ ನನ್ನ ಮಗಳಿಗೆ ನ್ಯಾಯ ಕೊಡಿಸುವಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಪ್ರಕರಣ ಸಿಐಡಿಗೆ ವಹಿಸುವಲ್ಲಿಯೂ ಅವರ ಪಾತ್ರ ಪ್ರಮುಖವಾಗಿದೆ. ಪೊಲೀಸ್ ಆಯುಕ್ತರು ಸಹ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಅವರ ವಿರುದ್ಧವೂ ನಾನು ಅಸಮಾಧಾನ ವ್ಯಕ್ತಪಡಿಸಿದ್ದೆ. ಮಗಳನ್ನು ಕಳೆದುಕೊಂಡ ದುಃಖದಲ್ಲಿದ್ದ ನಾನು ಏನೇ ತಪ್ಪು ಮಾತನಾಡಿದರೂ ಯಾರೂ ಅನ್ಯಥಾ ಭಾವಿಸಬಾರದು. ನನ್ನಿಂದಾದ ತಪ್ಪಿಗೆ ಎಲ್ಲರಿಂದಲೂ ಕ್ಷಮೆ ಕೇಳುತ್ತಿದ್ದೇನೆ ಎಂದರು.
ಇಂತಹ ಪ್ರಕರಣಗಳು ನಡೆದಾಗ ಸೂಕ್ತ ಕ್ರಮ ಕೈಗೊಳ್ಳಲು ವಿಶೇಷ ಕಾನೂನು ರಚಿಸುವ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಆ ಕಾನೂನಿಗೆ ನೇಹಾ ಹಿರೇಮಠ ಕಾಯ್ದೆ ಎಂದು ಹೆಸರಿಡಬೇಕು. ಅಂತಹ ಕಾಯ್ದೆ ಜಾರಿಗೆ ಬಂದರೆ ಅಪರಾಧ ಮಾಡುವ ಮನಸ್ಥಿತಿಯವರಿಗೆ ಭಯ ಹುಟ್ಟುತ್ತದೆ. ಮತ್ತೊಂದು ಇಂತಹ ಪ್ರಕರಣ ಎಲ್ಲಿಯೂ ಮರುಕಳಿಸಬಾರದು. ಎಲ್ಲ ಹೆಣ್ಣು ಮಕ್ಕಳು ನಿರ್ಭಿತಿಯಿಂದ ಕಾಲೇಜಿಗೆ ಹೋಗುವಂತಾಗಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ