“ಹಂಟರ್’- ಹೆಸರು ಕೇಳಿದ ಕೂಡಲೇ ಇದೊಂದು ಆ್ಯಕ್ಷನ್ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಇದು ನಿರಂಜನ್ ಸುಧೀಂದ್ರ ನಾಯಕರಾಗಿ ನಟಿಸುತ್ತಿರುವ ಚಿತ್ರ. ಭಾನುವಾರ ಈ ಚಿತ್ರಕ್ಕೆ ಮುಹೂರ್ತ ನಡೆದಿದೆ. ಉಪೇಂದ್ರ, ಪ್ರಿಯಾಂಕಾ ಉಪೇಂದ್ರ ಹಾಗೂ ಅನೇಕರು ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಶುಭಕೋರಿದರು.
ನಿರಂಜನ್ ಸುಧೀಂದ್ರ ಈಗ “ಹಂಟರ್’ ಸಿನಿಮಾದಲ್ಲಿ ಪಕ್ಕಾ ಆ್ಯಕ್ಷನ್ ಬಾಯ್ ಲುಕ್‌ನಲ್ಲಿ, ರಗಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಚಿರಂಜೀವಿ ಸರ್ಜಾ ಅಭಿನಯದ “ಸೀಜರ್’ ಚಿತ್ರವನ್ನು ನಿರ್ದೇಶಿಸಿದ್ದ ವಿನಯ್ ಕೃಷ್ಣ ಈ ಬಾರಿ ನಿರಂಜನ್ ಸುಧೀಂದ್ರ ಅವರಿಗಾಗಿ “ಹಂಟರ್’ ಎಂಬ ಹೊಸ ಕಥೆಯೊಂದನ್ನು ರೆಡಿ ಮಾಡಿದ್ದಾರೆ.
“ಸೀಜರ್’ ಸಿನಿಮಾವನ್ನು “ತ್ರಿವಿಕ್ರಮ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ನಿರ್ಮಿಸಿದ್ದ ನಿರ್ಮಾಪಕ ತ್ರಿವಿಕ್ರಮ್ ಸಾಫಲ್ಯ ಈಗ “ಹಂಟರ್’ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. ಇನ್ನು “ಹಂಟರ್’ ಸಿನಿಮಾದಲ್ಲಿ ನಿರಂಜನ್ ಸುಧೀಂದ್ರಗೆ ಜೋಡಿಯಾಗಿ ಮಲೆಯಾಳಿ ಬೆಡಗಿ ಸೌಮ್ಯ ಮೆನನ್ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ:ಶೀಘ್ರವೇ ನಡೆಯಲಿದೆಯಂತೆ ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹ!
ಈಗಾಗಲೇ ಮಲಯಾಳಂನ “ಕಿನವಲ್ಲಿ’, “ಚಿಲ್ಡ್ರನ್ಸ್ ಪಾರ್ಕ್’, “ಮಾರ್ಗಮಕಾಳಿ’, “ಫ್ಯಾನ್ಸಿ ಡ್ರೆಸ್’ ಮತ್ತು ತಮಿಳಿನ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಸೌಮ್ಯ ಮೆನನ್ ಮೊದಲ ಬಾರಿಗೆ “ಹಂಟರ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.
ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿರುವುದರ ಬಗ್ಗೆ ಮಾತನಾಡುವ ಸೌಮ್ಯ ಮೆನನ್, “”ಹಂಟರ್’ ಸಿನಿಮಾದ ಕಥೆ ಮತ್ತು ನನ್ನ ಪಾತ್ರ ಎರಡೂ ಚೆನ್ನಾಗಿದೆ. ಸಿನಿಮಾದ ಸ್ಕ್ರಿಪ್ಟ್ ನನಗೆ ಇಷ್ಟವಾಗಿದೆ. ಆದಷ್ಟು ಬೇಗ ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸಲು ಕಾತುರಳಾಗಿದ್ದೇನೆ. ಕನ್ನಡದಲ್ಲಿ ನನ್ನ ಮೊದಲ ಸಿನಿಮಾ ತುಂಬ ವಿಭಿನ್ನವಾಗಿರುತ್ತದೆ’ ಎಂಬ ಭರವಸೆಯ ಮಾತುಗಳನ್ನಾಡುತ್ತಾರೆ. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತವಿದೆ.