Advertisement

ನಿರಾಣಿಗೆ ಮಂತ್ರಿಗಿರಿ ಕೊಡದಿದ್ರೆ ಎಚ್ಚರಿಕೆ..

11:09 PM Jan 14, 2020 | Lakshmi GovindaRaj |

ದಾವಣಗೆರೆ: ವಚನಾನಂದ ಸ್ವಾಮೀಜಿ ಭಾಷಣದಲ್ಲಿ ತಮ್ಮ ಸಮಾಜದ ಶಾಸಕರಿಗೆ ಸಚಿವ ಸ್ಥಾನದ ಒತ್ತಡ ಹೇರಿದ್ದರಿಂದ ಸಿಟ್ಟಿಗೆದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ತಾವು ಸಮಾರಂಭದಿಂದ ಎದ್ದು ಹೋಗುವುದಾಗಿ ಹೇಳಿದ ಪ್ರಸಂಗ ಮಂಗಳವಾರ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿನ ಹರ ಜಾತ್ರಾ ಮಹೋತ್ಸವದಲ್ಲಿ ನಡೆಯಿತು.

Advertisement

ಮಧ್ಯಾಹ್ನ 3 ಗಂಟೆಗೆ ಬೆಳ್ಳಿ ಬೆಡಗು ಸಮಾರಂಭದಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀಗಳು, ತಮ್ಮ ಆಶೀರ್ವಚನದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿರುವುದೇ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಬಲದಿಂದ.

ಯಡಿಯೂರಪ್ಪ ಅವರು ಪವರ್‌ಫುಲ್‌ ಆಗಿರುವುದೇ ನಮ್ಮ ಸಮಾಜದ ಪವರ್‌ನಿಂದ. ಶೇ.40ರಷ್ಟು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಶಾಸಕರು ಇದ್ದಾರೆ. ನ್ಯಾಯಯುತವಾಗಿ ನಾಲ್ವರು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಶಾಸಕರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದರು. ನಿಮ್ಮ ಪರಿಸ್ಥಿತಿಯೂ ನಮಗೆ ಅರ್ಥವಾಗುತ್ತದೆ. ಮೂವರನ್ನಾದರೂ ಸಚಿವರನ್ನಾಗಿ ಮಾಡಲೇಬೇಕು.

ಪ್ರಥಮಾದ್ಯತೆಯಾಗಿ ವೀರಶೈವ ಲಿಂಗಾಯತ ಪಂಚಮಸಾಲಿ ಪ್ರಶ್ನಾತೀತ ನಾಯಕ, ಸಮಾಜ, ಪೀಠ ಪ್ರಾರಂಭವಾದಾಗಿನಿಂದ ಬೆನ್ನೆಲುಬಾಗಿ ನಿಂತಿರುವ, ಸಮಾಜದ ಬಗ್ಗೆ ಕಳಕಳಿ ಹೊಂದಿರುವ ಮುರುಗೇಶ್‌ ನಿರಾಣಿ ಅವರಿಗೆ ಕೊಡಲೇಬೇಕು. ನೀವೇನಾದರೂ (ಮುರುಗೇಶ್‌ ನಿರಾಣಿಯವರಿಗೆ) ಕೈ ಕೊಟ್ಟರೆ, ಇಡೀ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ನಿಮಗೆ ಕೈ ಕೊಡುತ್ತದೆ ಎಂದರು.

ಸ್ವಾಮೀಜಿ ಮಾತುಗಳಿಂದ ಕೋಪಗೊಂಡ ಸಿಎಂ ಯಡಿಯೂರಪ್ಪ, “ನೀವು ಈ ರೀತಿ ಬೆದರಿಸುವುದಾದರೆ ಸಭೆಯಿಂದ ಎದ್ದು ಹೋಗುತ್ತೇನೆ. ನಿಮ್ಮಿಂದ ಈ ರೀತಿಯ ಮಾತು ನಿರೀಕ್ಷಿಸಿರಲಿಲ್ಲ. ಸಲಹೆ ಕೊಡಿ, ಬೆದರಿಸಿದರೆ ಎದ್ದು ಹೋಗುತ್ತೇನೆ..’ ಎಂದೇಳಿ ಎದ್ದು ನಿಂತರು. “ನೀವು ಮೊದಲು ಕುಳಿತುಕೊಳ್ಳಿ ‘ ಎಂದು ಪದೆ ಪದೇ ಹೇಳುವ ಮೂಲಕ ಸ್ವಾಮೀಜಿ ಸಮಾಧಾನಪಡಿಸಲು ಮುಂದಾದರು.

Advertisement

ಕೊನೆಗೆ ಯಡಿಯೂರಪ್ಪ ಕುಳಿತುಕೊಂಡರು. “ನೀವು ರಿಲ್ಯಾಕ್ಸ್‌ ಆಗಿರಿ. ನಾವು ಕೇಳುತ್ತಿರುವುದು ಸಮಾಜಕ್ಕಾಗಿ’ ಎಂದ ಶ್ರೀಗಳು, ನಮ್ಮ ಸಮಾಜದ ಒತ್ತಡ ನಿಮ್ಮ ಮೂಲಕ ಪ್ರಧಾನಿ, ಅಮಿತ್‌ ಶಾ ಅವರಿಗೆ ತಲುಪಲಿ ಎಂದರು. ದಿಢೀರನೆ ನಡೆದ ಈ ಘಟನೆಯಿಂದ ವೇದಿಕೆಯಲ್ಲಿದ್ದವರು ದಿಗ್ಭ್ರಾಂತರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next