Advertisement

ರಾಜ್ಯದ 8 ಜಿಲ್ಲೆಗಳಲ್ಲಿ ನಿಫಾ ಕಟ್ಟೆಚ್ಚರ

09:47 AM Jun 07, 2019 | keerthan |

ಉಡುಪಿ: ಕೇರಳದಲ್ಲಿ ನಿಫಾ ರೋಗಲಕ್ಷಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ 8 ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಇ ಮೇಲ್‌ ಮತ್ತು ಎಸ್ಸೆಮ್ಮೆಸ್‌ ಮೂಲಕ ಪ್ರತೀ ಜಿಲ್ಲೆಯ ಸರಕಾರಿ ಮತ್ತು ಖಾಸಗಿ ವೈದ್ಯರಿಗೆ ಈ ರೋಗಲಕ್ಷಣಗಳ ಬಗ್ಗೆ ಎಚ್ಚರದಿಂದಿರುವಂತೆ ಮಾಹಿತಿ ರವಾನೆಯಾಗಿದೆ.

Advertisement

ಕಾಸರಗೋಡು ಸಮೀಪದ ದಕ್ಷಿಣ ಕನ್ನಡ, ಉಡುಪಿ, ಕೊಡಗಿನಲ್ಲಿ ಎಚ್ಚರಿಕೆ ವಹಿಸಲಾಗಿದೆ. ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌, ಆಶಾ ಕಾರ್ಯಕರ್ತರಿಗೆ, ಕಿರಿಯ ಆರೋಗ್ಯ ಸಹಾಯಕರಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ಕಳುಹಿಸಲಾಗಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಗೂ ಸಂದೇಶ ರವಾನೆಯಾಗಿದೆ.

ಕೊಲ್ಲೂರಿನಲ್ಲಿ ಕಟ್ಟೆಚ್ಚರ
ಕೇರಳದಿಂದ ಅತೀ ಹೆಚ್ಚು ಭಕ್ತರು ಭೇಟಿ ನೀಡುವ ಧಾರ್ಮಿಕ ಸ್ಥಳ ಕೊಲ್ಲೂರಿನಲ್ಲೂ ಈ ರೋಗಲಕ್ಷಣಗಳು ಯಾರಲ್ಲಾದರೂ ಕಂಡುಬಂದಲ್ಲಿ ತಿಳಿಸುವಂತೆ ದೇಗುಲದ ಕಾರ್ಯ ನಿರ್ವಹಣಾಧಿಕಾರಿಯವರಿಗೆ ಉಡುಪಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ತಿಳಿಸಲಾಗಿದೆ. ಜ್ವರ ಅಥವಾ ಇನ್ನಿತರ ರೋಗಲಕ್ಷಣದಿಂದ ಬಳಲುವ ವ್ಯಕ್ತಿಗಳ ಬಗ್ಗೆ ಮಾಹಿತಿ ಲಭಿಸಿದರೆ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

48 ಗಂಟೆಗಳಲ್ಲಿ ಪತ್ತೆ
ಈ ರೋಗಲಕ್ಷಣ ಕಂಡುಬಂದಲ್ಲಿ ರಕ್ತ ಪರೀಕ್ಷೆಯ ವರದಿಯನ್ನು ಫ್ಯಾಕ್ಸ್‌ ಮುಖಾಂತರ ಪುಣೆಯ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿಗೆ ಕಳುಹಿಸಲಾಗುತ್ತದೆ. 48 ಗಂಟೆಗಳಲ್ಲಿ ಅಲ್ಲಿಂದ ರೋಗಪತ್ತೆಯ ಬಗ್ಗೆ ಮಾಹಿತಿ ಸಿಗಲಿದೆ. ಶಂಕಿತ ನಿಫಾ ಪೀಡಿತರಿಗೆ ಚಿಕಿತ್ಸೆ ನೀಡಲು ಉಡುಪಿ ಜಿಲ್ಲೆ ಮತ್ತು ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತಲಾ 2 ಬೆಡ್‌ಗಳನ್ನು ಮೀಸಲಿರಿಸಲಾಗಿದೆ ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.

ತಡೆಗಟ್ಟುವುದು ಹೇಗೆ?
1 ಸೋಂಕು ಪೀಡಿತ ವ್ಯಕ್ತಿಯಿಂದ ದೂರವಿರಬೇಕು.
2 ರೋಗ ಕಂಡುಬಂದಿರುವ ಪ್ರದೇಶಕ್ಕೆ ಪ್ರಯಾಣ ಒಳ್ಳೆಯದಲ್ಲ.
3 ರೋಗ ಪೀಡಿತ ವ್ಯಕ್ತಿ ಅನ್ಯರ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳಬೇಕು.
4 ಜ್ವರ ಬಂದಾಗ ನಿರ್ಲಕ್ಷಿಸದೆ ವೈದ್ಯರ ಬಳಿ ಸೇರಿಸಿ ಚಿಕಿತ್ಸೆ ಪಡೆಯತಕ್ಕದ್ದು.

Advertisement

ಮಾಹಿತಿ ರವಾನೆ
ನಿಫಾ ರೋಗ ಲಕ್ಷಣದ ಬಗ್ಗೆ ಎಚ್ಚರದಿಂದ ಇರುವಂತೆ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆಯಿಂದ ಸುತ್ತೋಲೆ ರವಾನೆಯಾಗಿದೆ.
ಜ್ವರ, ಕೆಮ್ಮು ಮುಂತಾದ ರೋಗಲಕ್ಷಣಗಳು ಕಂಡು ಬಂದರೆ ಶೀಘ್ರದಲ್ಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
-ಡಾ| ವಾಸುದೇವ್‌ ಉಪಾಧ್ಯ, ಉಡುಪಿ ಜಿಲ್ಲಾ ಸರ್ವೇಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next