ಮಂಗಳೂರು: ಕೇರಳದಲ್ಲಿ ನಿಫಾ ವೈರಸ್ ಖಚಿತ ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಕೂಡ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಮನವಿ ಮಾಡಿದ್ದಾರೆ.
ಗಡಿ ಭಾಗದಿಂದ ಸಾಕಷ್ಟು ಜನರು ಆರೋಗ್ಯ ಹಾಗೂ ಶಿಕ್ಷಣ ಸಂಬಂಧಿಸಿ ಮಂಗಳೂರಿನ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಬರುತ್ತಿರುವುದರಿಂದ ಜಿಲ್ಲೆಯಲ್ಲಿ ನಿಫಾ ಅಲರ್ಟ್ ಘೋಷಿಸ ಲಾಗಿದ್ದು ಸಂಬಂಧಪಟ್ಟವರು ತತ್‌ಕ್ಷಣದಿಂದ ಮುಂಜಾಗ್ರತ ಕ್ರಮ ಅನುಷ್ಠಾನ ಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ನಿಫಾ ವೈರಸ್ ಝೊನಟಿಕ್ ರೋಗವಾಗಿದ್ದು ಪ್ರಾಣಿಗಳಿಂದ ಮನುಷ್ಯರಿಗೆ, ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಜ್ವರ, ತಲೆನೋವು, ಕೆಮ್ಮು, ಗಂಟಲು ನೋವು, ಉಸಿರಾಟದ ತೊಂದರೆ ಅಲ್ಲದೆ ತೀವ್ರತರದ ಮಿದುಳಿನ ಉರಿಊತಕ್ಕೆ ಸಂಬಂಧಪಟ್ಟಂತೆ ತೀವ್ರ ರೋಗಲಕ್ಷಣ ಕಾಣಿಸಿಕೊಳ್ಳಬಹುದು ಹಾಗೂ ಮಾರಾಣಾಂತಿಕವಾಗಬಹುದು.
ಮುನ್ನೆಚ್ಚರಿಕೆ ಕ್ರಮ :
ಸಾಬೂನು ಹಾಗೂ ನೀರಿನಿಂದ ಪದೇ ಪದೇ ಕೈ ತೊಳೆಯಬೇಕು. ಸೋಂಕು ಹರಡುವ ಪ್ರಾಣಿಗಳಾದ ಬಾವಲಿ, ಹಂದಿಗಳಿಂದ ದೂರವಿರಬೇಕು. ಪ್ರಾಣಿ, ಪಕ್ಷಿಗಳು ತಿಂದು ಬಿಟ್ಟಿರುವ ಹಣ್ಣುಹಂಪಲುಗಳನ್ನು ಸೇವಿಸದೇ ಇರುವುದು, ಸೋಂಕಿತ ವ್ಯಕ್ತಿಯ ದೇಹ ದ್ರವಗಳಿಂದ ರೋಗ ಹರಡುವ ಸಂಭವ ಇರುವುದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.