ಎಚ್.ಡಿ.ಕೋಟೆ: ನೆರೆ ರಾಜ್ಯ ಕೇರಳದ ಕಲ್ಲಿಕೋಟೆ ಜಿಲ್ಲೆಯಲ್ಲಿ ಮಾರಣಾಂತಿಕ ರೋಗ ನಿಫಾ ವೈರಸ್ ಕಾಣಿಸಿಕೊಂಡಿದ್ದು, ತಾಲೂಕಿನ ಗಡಿಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ.
ಕಳೆದ 2019ರ ಜೂನ್‌ನಲ್ಲಿ ಕೇರಳದಲ್ಲಿ ಕಾಣಿಸಿಕೊಂಡು ಜನರಲ್ಲಿ ಭಯ ಸೃಷ್ಟಿಸಿ ಮಾಯವಾಗಿದ್ದ ನಿಫಾ ವೈರಸ್, ಮತ್ತೆ ಕೇರಳ ಕಲ್ಲಿಕೋಟೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ.
ಈಗಾಗಲೇ ಸೋಂಕು ಕಾಣಿಸಿಕೊಂಡು ಕಲ್ಲಿಕೋಟೆಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಂಗಳವಾರ ಮೃತಪಟ್ಟಿದ್ದಾರೆ. ಹೀಗಾಗಿ ಕೇರಳ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಅದರೆ, ಕೇರಳ ರಾಜ್ಯದ ಗಡಿ ಹಂಚಿಕೊಂಡಿರುವ ಬಾವಲಿ ಮಾರ್ಗವಾಗಿ ಪ್ರತಿದಿನ ಕೇರಳ ರಾಜ್ಯದಿಂದ ನೂರಾರು ವಾಹನಗಳಲ್ಲಿ ಸರಕು ಸಾಮಾನು ಸೇರಿದಂತೆ ಸಾವಿರಾರು ಜನರು ರಾಜ್ಯಕ್ಕೆ ಬಂದು ಹೋಗುತ್ತಾರೆ. ಇಷ್ಟಾದರೂ ತಾಲೂಕು ಆರೋಗ್ಯ ಇಲಾಖೆ, ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದಿಂದ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ.
ತಾಲೂಕಿನ ಗಡಿ ಭಾಗಕ್ಕೆ ಕಾಲಿಡದಂತೆ ವಾಹನಗಳ ತಪಾಸಣೆ ಮಾಡುವುದರ ಜತೆಗೆ ನಿಫಾ ವೈರಸ್ ಕಾಣಿಸಿಕೊಂಡರೇ ಯಾವ ಕ್ರಮಗಳನ್ನು ಕೈಗೊಳ್ಳಬೇಕು, ಸೋಂಕಿನ ರೋಗ ಲಕ್ಷಣಗಳು ಏನು, ವೈರಾಣು ದೇಹ ದಲ್ಲಿ ಕಾಣಿಸಿಕೊಂಡರೆ ಮನುಷ್ಯನ ದೇಹದಲ್ಲಿ ಆಗುವ ಬದಲಾವಣೆಗಳು ಏನು, ಎಂಬಿತ್ಯಾದಿ ಸಲಹೆ ಸೂಚನೆಗಳನ್ನು ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವತ್ತ ಗಮನ ಹರಿಸಿಲ್ಲ.
ವಾಹನ ತಪಾಸಣೆಗೆ ಸಿಬ್ಬಂದಿ ನಿಯೋಜನೆ: ಒಂದು ದಿನ ತಡವಾಗಿ ಜ್ಞಾನೋದಯವಾದಂತೆ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಗಡಿಭಾಗದ ಬಾವಲಿ ಚೆಕ್ ಪೋಸ್ಟ್‌ನಲ್ಲಿ ಗುರುವಾರದಿಂದ ಕೆಲ ಅಧಿಕಾರಿಗಳು ಮತ್ತು ವೈದ್ಯರನ್ನು ಗಡಿಭಾಗಕ್ಕೆ ನಿಯೋಜಿಸಿ ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದಾರೆ. ನಿಯೋಜನೆಗೊಂಡಿರುವ ಸಿಬ್ಬಂದಿ ಕಡ್ಡಾಯವಾಗಿ ಹಾಜರಿದ್ದು, ನೆರೆ ರಾಜ್ಯದಿಂದ ಬರುವ ವಾಹನಗಳ ತಪಾಸಣೆ ಸೇರಿದಂತೆ ಕೇರಳ ರಾಜ್ಯ ಮತ್ತು ಕರ್ನಾಟಕದಿಂದ ಬರುವ ಹೋಗುವ ಜನರಲ್ಲಿ ನಿಫಾ ವೈರಸ್ ಸೋಂಕಿನ ಬಗ್ಗೆ ಆರೋಗ್ಯ ಶಿಕ್ಷಣ ಮತ್ತು ಅರಿವು ಮೂಡಿಸಲು ಸೂಚಿಸಲಾಗಿದೆ.
ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ಈಗಾಗಲೇ ಅಲ್ಲಿ ಒಬ್ಬರನ್ನು ನಿಯೋಜಿಸಿ ಅಲ್ಲಿನ ಕಾರ್ಯಚಟುವಟಿಕೆಗಳನ್ನು ಗಮನಿಸುತ್ತಿದ್ದೇವೆ. ಗುರುವಾರ ಬೆಳಗ್ಗೆ ನಾನು, ತಹಶೀಲ್ದಾರ್, ತಾಲೂಕು ಪಂಚಾಯ್ತಿ ಇಒ ಎಲ್ಲರೂ ಚೆಕ್‌ಪೋಸ್ಟ್‌ಗೆ ತೆರಳಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುತ್ತೇವೆ
. – ಡಾ.ಟಿ.ರವಿಕುಮಾರ್.ಟಿಎಚ್‌ಒ, ಆರೋಗ್ಯ ಇಲಾಖೆ, ಎಚ್.ಡಿ.ಕೋಟೆ