Advertisement

ನಿಪಾ ಸೋಂಕು ಜ್ವರ ಹರಡದಂತೆ ಕ್ರಮ: ರಾಮಚಂದ್ರನ್‌

01:16 PM Jun 08, 2019 | Team Udayavani |

ಬಾಗಲಕೋಟೆ: ಮಾರಣಾಂಕಿತ ನಿಪಾ ವೈರಸ್‌ ಸೋಂಕಿನ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ನಿಪಾ ವೈರಸ್‌ ಕುರಿತು ಜರುಗಿದ ಜಿಲ್ಲಾಮಟ್ಟದ ಮುಂಜಾಗ್ರತಾ ಸಭೆಯಲ್ಲಿ ಮಾತನಾಡಿದ ಅವರು, ಕೇರಳ ರಾಜ್ಯದಲ್ಲಿ ನಿಪಾ ವೈರಾಣು ಕಂಡುಬಂದಿರುವುದರಿಂದ ಜಿಲ್ಲೆಯಲ್ಲಿಯೂ ಸಹ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

ನಿಪಾ ವೈರಾಣು ಜ್ವರದ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಜಿಲ್ಲೆಯ 6 ತಾಲೂಕು ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಬೇಕು. ಸೋಂಕಿತ ಬಾವಲಿಗಳ ಮೂಲಕ ಹರಡುತ್ತಿರುವ ಈ ವೈರಾಣು ಜ್ವರಕ್ಕೆ ಸದ್ಯದ ಮಟ್ಟಿಗೆ ಯಾವುದೇ ರೀತಿಯ ಚಿಕಿತ್ಸೆ ಅಥವಾ ಔಷಧಿ ಲಭ್ಯವಿರುವದಿಲ್ಲ ಎಂದು ತಿಳಿದು ಬಂದಿದ್ದು, ನಿಫಾ ವೈರಾಣು ಸೋಂಕು ಹರಡದಂತೆ ಜಾಗೃತಿ ವಹಿಸಬೇಕಾಗಿದೆ. ಆದ್ದರಿಂದ ಸೋಂಕಿತ ಬಾವಲಿಗಳು ಕಚ್ಚಿದ ಹಣ್ಣುಗಳನ್ನು, ಗಿಡಗಳಿಂದ ಕೆಳಗೆ ಬಿದ್ದಿರುವ ಹಣ್ಣುಗಳನ್ನು ತಿನ್ನದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ನಿಫಾ ವೈರಾಣು ಸೋಂಕು ಜ್ವರವು ನೇರ ಸಂಪರ್ಕದಿಂದ ಹರಡುವುದರಿಂದ ಸೋಂಕಿತ ವ್ಯಕ್ತಿ ಮತ್ತು ನಾಯಿ, ಬೆಕ್ಕು, ಮೇಕೆ, ಕುದುರೆ ಮತ್ತು ಕೆಲವು ಸಂದರ್ಭಗಳಲ್ಲಿ ಕುರಿಗಳಿಂದ ದೂರವಿರುವುದು ಸೂಕ್ತವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಅನಂತ ದೇಸಾಯಿ ತಿಳಿಸಿದರು.

ಜಿಲ್ಲಾ ಸಮೀಕ್ಷಣಾಧಿಕಾರಿ ಡಾ| ವಿಜಯ ಕಂಠಿ, ಗಿಡದಲ್ಲಿ ಪಕ್ಷಿ ಅಥವಾ ಬಾವಲಿಗಳು ತಿಂದು ಹೋದ ಹಾಗೂ ಮರದ ಕೆಳಗೆ ಬಿದ್ದ ಹಣ್ಣುಗಳನ್ನು ಸಾರ್ವಜನಿಕರು ತಿನ್ನಬಾರದು ಎಂದರು. ಡಾ| ಪ್ರಕಾಶ ಬಿರಾದಾರ, ಕುಟುಂಬ ಕಲ್ಯಾಣಾಧಿಕಾರಿ ಪಟ್ಟಣಶೇಟ್ಟಿ, ಆರೋಗ್ಯ ಶಿಕ್ಷಣಾಧಿಕಾರಿ ವಿ.ಸಿ.ಪವಾಡೆಪ್ಪ ಉಪಸ್ಥಿತರಿದ್ದರು.

ಮಾಹಿತಿ, ಶಿಕ್ಷಣ ಮತ್ತು ಸಹಭಾಗಿತ್ವದಡಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಕರಪತ್ರ, ಭಿತ್ತಿಪತ್ರ, ಬ್ಯಾನರ್‌ಗಳನ್ನು ಮುದ್ರಿಸಲಾಗುತ್ತಿದೆ. ಆಶಾ ಕಾರ್ಯಕರ್ತರಿಂದ ಮನೆ-ಮನೆಗೆ ಭೇಟಿ ನೀಡುವ ಮೂಲಕ ಈ ಅರಿವು ಮೂಡಿಸಲಾಗುವುದು. ಸಭೆ ಸಮಾರಂಭ, ಗುಂಪು ಸಭೆ, ಸಮೂಹ ಸಭೆ, ಮುಖಡರ ಸಭೆ, ಧ್ವನಿವರ್ಧಕಗಳ ಮೂಲಕ ಜಾಗೃತಿ, ಬಸ್‌ ನಿಲ್ದಾಣ, ರೇಲ್ವೆ ನಿಲ್ದಾಣಗಳಲ್ಲಿ ಧ್ವನಿವರ್ಧಕ ಮೂಲಕ ತಿಳಿವಳಿಕೆ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕಾಗಿ ಸಂಘ ಸಂಸ್ಥೆ, ಚುನಾಯಿತ ಪ್ರತಿನಿಧಿಗಳ ಹಾಗೂ ಇತರೆ ಇಲಾಖೆಗಳ ಸಹಕಾರ ಪಡೆಯಲಾಗುತ್ತಿದೆ ಎಂದು ಡಾ| ಎ.ಎನ್‌. ದೇಸಾಯಿ ಸಭೆಗೆ ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next