Advertisement

ಒಂಬತ್ತರ ಕಟ್ಟಡ ಪೂರ್ಣ; ಎಂಟಕ್ಕೆನಿವೇಶನವೇ ಅಂತಿಮಗೊಂಡಿಲ್ಲ !

02:08 AM May 28, 2019 | Team Udayavani |

ಪುತ್ತೂರು: ನಾಲ್ಕು ವರ್ಷಗಳ ಹಿಂದೆ ರಾಜ್ಯ ಸರಕಾರದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 29 ಗ್ರಾ.ಪಂ.ಗಳು ಅಸ್ತಿತ್ವಕ್ಕೆ ಬಂದಿವೆ. ಆದರೆ ಕಟ್ಟಡಕ್ಕೆ ಸರಕಾರವು ನೀಡಿರುವ ಪೂರ್ತಿ ಅನುದಾನವನ್ನು ಪಡೆ-ಯಲು ಯಾವುದೇ ಗ್ರಾ.ಪಂ. ಸಫಲವಾಗಿಲ್ಲ. ಕೇವಲ 9 ಗ್ರಾ.ಪಂ.ಗಳ ಕಟ್ಟಡ ನಿರ್ಮಾಣಗೊಂಡಿದ್ದು, 8ರ ನಿವೇಶನವೇ ಅಂತಿಮಗೊಂಡಿಲ್ಲ.

Advertisement

ಜನಸಂಖ್ಯೆ ಆಧರಿಸಿ ಗ್ರಾ.ಪ.ಗಳನ್ನು ಪುನರ್‌ವಿಂಗಡಿಸಲು ಮಾಜಿ ಶಾಸಕ ಎಸ್‌.ಜಿ. ನಂಜಯ್ಯನಮಠ ಅವರ ನೇತೃತ್ವದಲ್ಲಿ ಸರಕಾರವು ಸಮಿತಿ ರಚಿಸಿತ್ತು. ಅದರ ಶಿಫಾರಸಿನಂತೆ 2015ರಲ್ಲಿ ಹೊಸದಾಗಿ 439 ಗ್ರಾ.ಪಂ.ಗಳು ರಚನೆಯಾಗಿದ್ದವು. ದ.ಕ. ಜಿಲ್ಲೆಯಲ್ಲಿ 29 ಗ್ರಾ.ಪಂ.ಗಳು ಹೊಸದಾಗಿ ಅಸ್ತಿತ್ವಕ್ಕೆ ಬಂದು, ಒಟ್ಟು ಸಂಖ್ಯೆ 230ಕ್ಕೆ ಏರಿಕೆ ಯಾಗಿತ್ತು.

ಹೀಗಿದೆ ನೂತನ ಗ್ರಾ.ಪಂ.ಗಳ ಸ್ಥಿತಿ

ಮಂಗಳೂರು ತಾಲೂಕಿನಲ್ಲಿ 55 ಗ್ರಾ.ಪಂ.ಗಳಿದ್ದು, ಹೊಸದಾಗಿ ಅಸ್ತಿತ್ವಕ್ಕೆ ಬಂದ ಅತಿಕಾರಿಬೆಟ್ಟು ಗ್ರಾ.ಪಂ.ನ ಕಟ್ಟಡ ಮಾತ್ರ ಪೂರ್ಣಗೊಂಡಿದೆ. ಕಟೀಲು,ಮಲ್ಲೂರು, ಮುತ್ತೂರು ಗ್ರಾ.ಪಂ.ಗಳ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಬಡಗ ಎಡಪದವು, ಇರುವೈಲು, ವಾಲ್ಪಾಡಿ ಗ್ರಾ.ಪಂ.ಗಳಿಗೆ ಇನ್ನೂ ಸ್ವಂತ ನಿವೇಶನ ಆಗಿಲ್ಲ.

ಬಂಟ್ವಾಳ ತಾಲೂಕಿನಲ್ಲಿ 58 ಗ್ರಾ.ಪಂ.ಗಳಿದ್ದು, ಹೊಸದಾಗಿ ಬಂದಿರುವ 12ರಲ್ಲಿ ಇರ್ವತ್ತೂರು, ಕಳ್ಳಿಗೆ, ಅಮ್ಮುಂಜೆ, ಅರಳ, ಬೋಳಂತೂರು, ಸಾಲೆತ್ತೂರು ಗ್ರಾ.ಪಂ.ಗಳ ಕಟ್ಟಡ ಪೂರ್ತಿಗೊಂಡಿದೆ. ಬರಿಮಾರು, ಮಣಿನಾಲ್ಕೂರು, ಮಾಣಿಲ, ನೆಟ್ಲಮುಟ್ನೂರು, ಪೆರಾಜೆ, ಸಜೀಪಪಡು ಗ್ರಾ.ಪಂ.ಗಳ ಕಟ್ಟಡ ಪ್ರಗತಿಯಲ್ಲಿದೆ.

Advertisement

ಪುತ್ತೂರು ತಾಲೂಕಿನಲ್ಲಿ 41 ಗ್ರಾ.ಪಂ.ಗಳಿದ್ದು, ಹೊಸದಾಗಿ ಅಸ್ತಿತ್ವಕ್ಕೆ ಬಂದ ನಾಲ್ಕರಲ್ಲಿ ಕೊಡಿಪಾಡಿ ಗ್ರಾ.ಪಂ.ನ ಕಟ್ಟಡ ಮಾತ್ರ ಪೂರ್ತಿಗೊಂಡಿದೆ. ಕೆಯ್ಯೂರು ಗ್ರಾ.ಪಂ.ನ ಕಟ್ಟಡ ಪ್ರಗತಿಯಲ್ಲಿದ್ದು, ನಿಡ್ಪಳ್ಳಿ, ಪ್ರಸ್ತುತ ಕಡಬ ತಾಲೂಕು ವ್ಯಾಪ್ತಿಯಲ್ಲಿರುವ ಕಡ್ಯಕೊಣಾಜೆಗಳ ನಿವೇಶನದ ಸಮಸ್ಯೆ ಪರಿಹಾರವಾಗಿಲ್ಲ.

ಬೆಳ್ತಂಗಡಿ ತಾಲೂಕಿನಲ್ಲಿ 48 ಗ್ರಾ.ಪಂ.ಗಳಿದ್ದು, ಹೊಸ ಐದು ಗ್ರಾ.ಪಂ.ಗಳಲ್ಲಿ ಕಳೆಂಜ ಮತ್ತು ಸುಲ್ಕೇರಿ ಗ್ರಾ.ಪಂ.ಗಳ ಕಟ್ಟಡ ಪ್ರಗತಿಯಲ್ಲಿದೆ. ಕಡಿರುದ್ಯಾವರ, ನಾವೂರು, ತೆಕ್ಕಾರು ಗ್ರಾ.ಪಂ.ಗಳಿಗೆ ನಿವೇಶನವಿಲ್ಲ. ಸುಳ್ಯದಲ್ಲಿ 28 ಗ್ರಾ.ಪಂ.ಗಳಿದ್ದು, ಹೊಸದಾದ ಏಕೈಕ ಪೆರುವಾಜೆ ಗ್ರಾ.ಪಂ.ನ ಕಟ್ಟಡ ಬಹುತೇಕ ಪೂರ್ಣಗೊಂಡಿದೆ ಎಂದು ದ.ಕ.ಜಿ.ಪಂ. ಅಭಿವೃದ್ಧಿ ಶಾಖೆ ಮಾಹಿತಿ ನೀಡುತ್ತಿದೆ.

ಒಟ್ಟು 40 ಲಕ್ಷ ರೂ. ಅನುದಾನ

ಹೊಸ ಗ್ರಾ.ಪಂ.ಗಳಿಗೆ ಒಟ್ಟು 40 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಗೊಳ್ಳಲಿದ್ದು, 20 ಲಕ್ಷ ರೂ.ಗಳನ್ನು ರಾಜ್ಯ ಸರಕಾರ ನೀಡಲಿದೆ. ಪ್ರಥಮ ಹಂತದಲ್ಲಿ ಎಲ್ಲ ಗ್ರಾ.ಪಂ.ಗಳಿಗೂ 10 ಲಕ್ಷ ರೂ. ಬಿಡುಗಡೆಗೊಂಡಿದೆ. ಇದನ್ನು ಬಳಕೆ ಮಾಡಿದ ಬಳಿಕ ಉಳಿದ 10 ಲಕ್ಷ ರೂ. ಬಿಡುಗಡೆಗೊಳ್ಳಲಿದೆ.

ಉಳಿದಂತೆ 16.25 ಲಕ್ಷ ರೂ.ಗಳು ನರೇಗಾದಿಂದ ಲಭ್ಯವಾದರೆ 3.75 ಲಕ್ಷ ರೂ.ಗಳನ್ನು 14ನೇ ಹಣಕಾಸು ಯೋಜನೆ ಸೇರಿದಂತೆ ಗ್ರಾ.ಪಂ.ನ ಇತರ ಮೂಲಗಳಿಂದ ಸಂಗ್ರಹಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಪ್ರಸ್ತುತ ಪೆರುವಾಜೆ ಗ್ರಾ.ಪಂ. ಮಾತ್ರ ಒಂದು ಹಂತದ ಅನುದಾನವನ್ನು ಪೂರ್ತಿಗೊಳಿಸಿ ಮತ್ತೂಂದು ಹಂತಕ್ಕೆ ಬೇಡಿಕೆ ಸಲ್ಲಿಸಿದೆ.

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next