Advertisement

ಕಾಲಚಕ್ರದ ಬಲೆಯೊಳಗೆ ನಿನ್ನ ಮೋಕೆದ…

12:30 AM Feb 22, 2019 | Team Udayavani |

ಬೈಕಂಪಾಡಿ ಮೀನಕಳಿಯದ ವಿದ್ಯಾರ್ಥಿ ಸಂಘ ಮತ್ತು ಮಹಿಳಾ ಸಮಾಜದವರ ನೂತನ ರಂಗಮಂದಿರ ಉದ್ಘಾಟನೆ ಸಂದರ್ಭದಲ್ಲಿ ಹಿರಿಯ ನಾಟಕಕಾರ, ರಂಗಕರ್ಮಿ ರಾಮಚಂದರ್‌ ಬೈಕಂಪಾಡಿಯವರ ನಿನ್ನ ಮೋಕೆದ… ನಾಟಕ ಚಲನಚಿತ್ರ ನಟ ಕಾಸರಗೋಡು ಚಿನ್ನಾ ತಂಡದವರಿಂದ ಅಭಿನಯಿಸಲ್ಪಟ್ಟಿತ್ತು. ಈ ನಾಟಕ ಸುಮಾರು 30 ವರ್ಷದ ಹಿಂದೆ ಪರದೆಯ ನಾಟಕವಾಗಿ “ಕಾಲಚಕ್ರ’ ಎಂಬ ಹೆಸರಿನಿಂದ ಜನಪ್ರಿಯವಾಗಿ ಪ್ರಶಸ್ತಿ ಎತ್ತಿತ್ತು. ಎಲ್ಲ ಕಾಲಕ್ಕೂ ಸರಿಹೊಂದುವ ಕತೆಯೇ ನಾಟಕದ ಜೀವಾಳ. ರಂಗದಲ್ಲಿ ಹಲವಾರು ಪ್ರಯೋಗಗಳನ್ನು ಕಂಡರೂ, ಈಗ ಚಿನ್ನಾರವರ ದಕ್ಷ, ಪರಿಪಕ್ವ ನಿರ್ದೇಶನಕದಲ್ಲಿ, ಚೊಕ್ಕ ರಂಗವಿನ್ಯಾಸದೊಂದಿಗೆ ಮನಸೂರೆಗೊಂಡಿತು. 

Advertisement

ಕೇವಲ ಒಂದು ಮನೆಯೊಳಗೆ ನಡೆಯುವ ಕುತೂಹಲಕಾರಿ ಕಥೆ-ದೃಶ್ಯವೂ ಒಂದೇ ಮನೆಯದ್ದು . ಹಿಂದಿನ ಕೆಲವೊಂದು ನಾಟಕಗಳಂತೆ ಕತೆ ಅನಂತರ ಪ್ರೇಕ್ಷಕರಿಗೆ ಅರ್ಥವಾಗುವಂತಹ ತಂತ್ರವನ್ನು ಅಳವಡಿಸಿದ ಕಾರಣ ಕುತೂಹಲಕಾರಿಯಾಗಿ ನಡೆಸಿಕೊಂಡು ಹೋಗುತ್ತದೆ. ಪ್ರೊಫೆಸರ್‌ ಕೆಲಸದ ನಿಮಿತ್ತ ಅಮೇರಿಕಕ್ಕೆ ಹೋಗಿ, ಅಲ್ಲಿ ಲ್ಯಾಬಲ್ಲಿ ಕೆಲಸ ಮಾಡುವಾಗ ಕೆಮಿಕಲ್‌ನ ಕೊಳವೆ ಸ್ಫೋಟಗೊಂಡು, ಮುಖ ಕರ್ರಗೆ ವಿಕಾರಗೊಳ್ಳುತ್ತದೆ. ವಾಪಾಸು ಊರಿಗೆ ಬರುವಾಗ ಅವನ ಹೆಂಡತಿ ಮಗು ಇವನನ್ನು ಎದುರುಗೊಳ್ಳಲು ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ಗಂಡನ ಮುಖ ಕಂಡು ಹೆದರಿ ಚೀರಿ ಓಡುವಾಗ ಎದುರಿನಿಂದ ಬಂದ ಕಾರಿಗೆ ಢಿಕ್ಕಿ ಹೊಡೆದು ಪ್ರಜ್ಞೆ ತಪ್ಪಿದಾಗ ಅದರಲ್ಲಿರುವ ನಾಟಕದ ಹೀರೋ ಆಸ್ಪತ್ರೆಗೆ ಕರೆದೊಯ್ದು ಶುಶ್ರೂಷೆ ಮಾಡಿಸುತ್ತಾನೆ.ನೆನಪು ಅಳಿಸಿ ಹೋಗಿರುವ ಅವಳನ್ನು ಇಹಪರಗಳನ್ನು ವಿಚಾರಿಸದೆ ಮದುವೆಯಾಗಿ ಸ್ವಲ್ಪ ಸಮಯದಲ್ಲಿ, ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡು ಇರುವಾಗ, ಇತ್ತ ಅವಳ ಪ್ರೇಮಿ ಮತ್ತು ಅವಳು ಮನೆಯೊಳಗೆ ನಡೆಯುವ ಚಕ್ಕಂದ, ಇದನ್ನು ಮೂಕ ಪ್ರೇಕ್ಷಕರಾಗಿ ನೋಡುವ ಮನೆಯ ಇಬ್ಬರು ಕೆಲಸದಾಳುಗಳು, ಕೊನೆಗೆ ಮುಂಬೈಗೆ ಕರೆದುಕೊಂಡು ಹೋಗಿ ಇವನ ಕಣ್ಣನ್ನು ಸರಿ ಮಾಡಿಸಿದ ಇವನ ಕಾಲೇಜು ಗೆಳೆಯ ಡಾ| ನಾಗರಾಜ್‌. ಇವನು ಕಣ್ಣು ಸರಿಯಾದರೂ ಕುರುಡನಾಗಿ ನಟಿಸಿ, ಇವರ ಚಕ್ಕಂದ ಕಣ್ಣಾರೆ ಕಂಡು (ಯಾರೂ ಹೇಳಿದರೂ ಕೇಳದ ಒಬ್ಬ ಭಗ್ನಪ್ರೇಮಿ) ಕೊನೆಗೆ ಪಶ್ಚಾತ್ತಾಪಪಟ್ಟು ಇವಳನ್ನು ಮನೆಯಿಂದ ಹೊರಗೆ ಹಾಕುವ ಹೊತ್ತಿಗೆ, ಇವಳ ನಿಜವಾದ ಗಂಡ ಪ್ರೊಫೆಸರ್‌ ಬಂದು, ಇವಳನ್ನು ಕರೆದುಕೊಂಡು ಹೋಗುತ್ತೇನೆಂದು ಹೇಳುವ ಹೊತ್ತಿಗೆ ಇವಳು ಹೃದಯಾಘಾತದಿಂದ ಸಾಯುತ್ತಾಳೆ. ಹೀಗೆ ಕೇವಲ ಒಂದು ಕಾಮಿಡಿ ಮತ್ತು 7 ಜನರೊಳಗೆ ನಡೆಯುವ ಕಥೆಯೇ ನಿನ್ನ ಮೋಕೆದ… ನಾಟಕ. 

ಈ ನಾಟಕದಲ್ಲಿ ವೃತ್ತಿಪರ ರಂಗನಟರೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಹೀರೋ ಶ್ರೀಧರ್‌ ಆಗಿ ಭೂಷಣ್‌, ಸುಧೀರ್‌ ಪಾತ್ರದಲ್ಲಿ ಶ್ರೀಜಿತ್‌, ರೂಪನ ಪಾತ್ರದಲ್ಲಿ ನಮಿತ್‌ ಕುಳೂರು. ಪ್ರೊ| ಚಕ್ರವರ್ತಿಯಾಗಿ ಹೆಸರಾಂತ ನಟ ಡಿ.ಎಸ್‌. ಬೋಳೂರು, ಡಾ| ನಾಗರಾಜನಾಗಿ ಸುಧಾಕರ್‌ ಸಾಲ್ಯಾನ್‌, ಮನೆಗೆಲಸದ ಸರಸು – ಮಂಗಳಾ ಹಾಸ್ಯಪಾತ್ರದ ದುಬೈ ಬಾಬು ಆಗಿ ನಟ ಸುಧೀರ್‌ರಾಜ್‌ ಉರ್ವ, ಮತ್ತೋರ್ವ ಕೆಲಸದಾಳುವಾಗಿ ರಂಜನ್‌ ಬೋಳೂರು ಪಾತ್ರಗಳಿಗೆ ಜೀವ ತುಂಬಿದರು.

ಯೋಗೀಶ್‌ ಕಾಂಚನ್‌ 

Advertisement

Udayavani is now on Telegram. Click here to join our channel and stay updated with the latest news.

Next