ವಯನಾಡ್ : ಕೇರಳದ ವಯನಾಡ್ ಜಿಲ್ಲೆಯ ತಲಪುಳ ಬಳಿಯ ಕನ್ನೋತು ಮಾಲಾ ಎಂಬಲ್ಲಿ ಖಾಸಗಿ ಜೀಪ್ ಆಳವಾದ ಕಂದರಕ್ಕೆ ಬಿದ್ದ ಪರಿಣಾಮ ಒಂಬತ್ತು ಜನರು ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡಿರುವ ಭೀಕರ ಅವಘಡ ಶುಕ್ರವಾರ ಸಂಜೆ ಸಂಭವಿಸಿದೆ.
ವೆಣ್ಮಣಿಯ ಚಹಾ ತೋಟದಲ್ಲಿ ಎಲೆ ಕೀಳುವ ಕೆಲಸ ಮಾಡುತ್ತಿದ್ದ 13 ಮಹಿಳೆಯರು ಸೇರಿದಂತೆ 14 ಜನರಿದ್ದಜೀಪ್ ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಸಂಜೆ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಘಾಟಿಯ ಬಳಿ ಚೂಪಾದ ತಿರುವಿನಲ್ಲಿ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ರಾಣಿ(57)ಕಾರ್ತ್ಯಾಯನಿ ಮಣಿ(65) ಸಂತಾ (55) ಚಿನ್ನಮ್ಮ ಚಂದ್ರನ್(60) ರಬಿಯಾ ಮುಹಮ್ಮದ್ (62) ಲೀಲಾ ಸತ್ಯನ್(60)ಶೋಭನಾ ಬಾಲನ್(55)ಚಿತ್ರಾ(55) ಮತ್ತು ಶಾಜಬಾಬು(47) ಎಂದು ಗುರುತಿಸಲಾಗಿದೆ.
ಚಾಲಕ ಮಣಿ, 44 ಸೇರಿದಂತೆ ಐವರನ್ನು ಮಾನಂತವಾಡಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ವ್ಯಕ್ತಪಡಿಸಿದ್ದಾರೆ ತುರ್ತು ಕಾರ್ಯಾಚರಣೆಗಳನ್ನು ಸಂಘಟಿಸಲು ಮತ್ತು ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ .ಅರಣ್ಯ ಸಚಿವ ಎ.ಕೆ. ಶಸೀಂದ್ರನ್ ಅವರಿಗೆ ಸೂಚಿಸಿದ್ದಾರೆ.
ವಯನಾಡ್ ಸಂಸದ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ’ ಕಾರ್ಮಿಕರ ಜೀವವನ್ನು ತೆಗೆದುಕೊಂಡ ದುರಂತ ಅಪಘಾತದಿಂದ ತೀವ್ರ ದುಃಖಿತನಾಗಿದ್ದೇನೆ. ಶೀಘ್ರ ಸ್ಪಂದಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ’ ಎಂದು ಹೇಳಿದ್ದಾರೆ.