ರಾಯ್ ಪುರ: ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ನೂರು ಶತಕ ಬಾರಿಸಿದ ಏಕೈಕ ಆಟಗಾರನೆಂದರೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್. 2012ರ ಮಾರ್ಚ್ 16ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸಚಿನ್ ಈ ದಾಖಲೆ ಬರೆದಿದ್ದರು. ಈ ಸಾಧನೆಗೆ ಇಂದು ಒಂಬತ್ತು ವರ್ಷದ ಸಂಭ್ರಮ.
ಬಾಂಗ್ಲಾದೇಶದ ಮೀರ್ಪುರ್ ನಲ್ಲಿ ನಡೆದ ಏಷ್ಯಾ ಕಪ್ ಪಂದ್ಯದಲ್ಲಿ ತೆಂಡೂಲ್ಕರ್ ಈ ದಾಖಲೆ ಬರೆದಿದ್ದರು. 147 ಎಸೆತ ಎದುರಿಸಿದ್ದ ಸಚಿನ್ 114 ರನ್ ಗಳಿಸಿದ್ದರು. ಇದು ಸಚಿನ್ ತೆಂಡೂಲ್ಕರ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ 100ನೇ ಶತಕ.
ಇದನ್ನೂ ಓದಿ:ಹೆಚ್ಚುತ್ತಿದೆ ಕೋವಿಡ್ ಭೀತಿ: ಪ್ರೇಕ್ಷಕರಿಲ್ಲದೆ ನಡೆಯಲಿದೆ ಇಂಗ್ಲೆಂಡ್ ವಿರುದ್ಧದ ಸರಣಿ!
ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ 49 ಶತಕ ಬಾರಿಸಿದ್ದು, ಟೆಸ್ಟ್ ನಲ್ಲಿ 51 ಶತಕ ಗಳಿಸಿದ್ದಾರೆ. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಐದು ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದ್ದರೆ, ಬಾಂಗ್ಲಾ ತಂಡ ನಾಲ್ಕು ಎಸೆತಗಳು ಬಾಕಿ ಉಳಿದಿರುವಂತೆ ಪಂದ್ಯ ಗೆದ್ದುಕೊಂಡಿತ್ತು.
ಸದ್ಯ ರೋಡ್ ಸೇಫ್ಟಿ ಟೂರ್ನಮೆಂಟ್ ನಲ್ಲಿ ಇಂಡಿಯಾ ಲೆಜೆಂಡ್ಸ್ ತಂಡವನ್ನು ಮುನ್ನಡೆಸುತ್ತಿರುವ ಸಚಿನ್, ತಂಡದ ಸದಸ್ಯರೊಂದಿಗೆ ಸಂಭ್ರಮಾಚರಣೆ ಮಾಡಿದರು. ಈ ವಿಡಿಯೋ ಪ್ರಗ್ಯಾನ್ ಓಜಾ ತನ್ನ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.