Advertisement

ಒಂಭತ್ತು ಸಾವಿರ ಕಾರ್ನರ್‌ ಸೈಟ್‌ ಡೌಟು?

05:28 AM Jun 11, 2020 | Lakshmi GovindaRaj |

ಬೆಂಗಳೂರು: ಆರ್ಥಿಕ ಸುಧಾರಣೆಗೆ ಸರ್ಕಾರವು ಬಿಡಿಎ ಮೂಲೆ ನಿವೇಶನ ಹರಾಜಿಗೆ ಮುಂದಾಗಿದ್ದು, ಕೆಲ ಕಾನೂನಿನ ಅಡ್ಡಿ ಎದುರಾಗಿದೆ. ಕೆಲ ನಿವೇಶನ ಸಂಬಂಧ ನ್ಯಾಯಾಲಯದಲ್ಲಿ ವ್ಯಾಜ್ಯಗಳಿದ್ದು, ಮೂಲೆ ನಿವೇಶನ ಹಗರಣ  ಸಂಬಂಧ ಎಸಿಬಿ ವರದಿ ಸಲ್ಲಿಸಿಲ್ಲ. ಇದರ ನಡುವೆಯೇ ಎಷ್ಟು ಮೂಲೆ ನಿವೇಶನಗಳಿವೆ ಎಂಬ ಪಟ್ಟಿ ಮಾಡಲಾಗುತ್ತಿದ್ದು, ತಿಂಗಳಾಂತ್ಯದೊಳಗೆ ಪಟ್ಟಿ ಸಿದ್ಧವಾಗಲಿದೆ.

Advertisement

ಮೂಲೆ ನಿವೇಶನಗಳು ಎಷ್ಟಿವೆ ಎಂಬುದರ ಬಗ್ಗೆ ಕೆಲ ಗೊಂದಲಗಳಿದ್ದು, ವರದಿ ಸಿದ್ಧಪಡಿಸಿದ ನಂತರ  ಗೊಂದಲಕ್ಕೆ ತೆರೆ ಬೀಳಲಿದೆ. ಆದರೆ, ಸರ್ಕಾರ ನಿರೀಕ್ಷಿಸಿ  ದಷ್ಟು ಅಂದರೆ 8-9 ಸಾವಿರ ಮೂಲೆ ನಿವೇಶನಗಳು ಸಿಗುವುದು ಅನುಮಾನ. ಗೊಂದಲ ಮತ್ತು ಹಗರಣ  ಗಳಿಗೆ ಸಂಬಂಧಪಟ್ಟ  ನಿವೇಶನಗಳನ್ನು ಹೊರತುಪಡಿಸಿ, ಅಬ್ಬಬ್ಟಾ ಎಂದರೆ ಸುಮಾರು ನಾಲ್ಕು ಸಾವಿರ ನಿವೇಶನಗಳು ಸಿಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಎಂಜಿನಿಯರಿಂಗ್‌ ವಿಭಾಗವು ಮಾಹಿತಿ ಕಲೆ ಹಾಕುತ್ತಿದ್ದು, ಬನಶಂಕರಿ 6ನೇ ಹಂತ,  ಅಂಜನಾಪುರ, ವಿಶ್ವೇಶ್ವರ ಲೇಔಟ್‌ ಸೇರಿ ಹೊಸ ಬಡಾವಣೆಗಳಲ್ಲಿ ಮೂಲೆ ನಿವೇಶನ ಸಂಬಂಧ ನ್ಯಾಯಾಲಯದಲ್ಲಿ ವ್ಯಾಜ್ಯಗಳಿಲ್ಲ. ಹಳೇ ಬಡಾವಣೆಗಳಲ್ಲಿನ ಕಾರ್ನರ್‌ ಸೈಟಿಗೆ ಸಂಬಂಧಿಸಿ ಸುಮಾರು 25-30 ವ್ಯಾಜ್ಯಗಳಿರಬಹುದು.  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈವರೆಗೆ 64 ಬಡಾವಣೆಗಳನ್ನು ಅಭಿವೃದ್ಧಿಪಡಿಸಿದ್ದು, ಯಾವ ಬಡಾವಣೆಗಳಲ್ಲಿ ಎಷ್ಟು ಕಾರ್ನರ್‌ ಸೈಟ್‌ ದೊರೆಯಲಿವೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲು ಸಂಬಂಧಿತ ಎಂಜಿನಿಯರ್‌ಗಳಿಗೆ ತಿಳಿಸಲಾಗಿದೆ.

ನ್ಯಾಯಾಲಯದಲ್ಲಿ ವ್ಯಾಜ್ಯಗಳಿರುವ ಸೈಟ್‌ಗಳನ್ನು ಹೊರತುಪಡಿಸಿ ಉಳಿದವುಗಳ ಪಟ್ಟಿ ಮಾಡಿ ವರದಿ ಸಿದ್ಧಪಡಿಸಲಾಗುವುದು. ಈ ಪ್ರಕ್ರಿಯೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಬಿಡಿಎ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.

ಹರಾಜಿಗೆ ಎಸಿಬಿ ತನಿಖೆ ಅಡ್ಡಿ?: ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಮೂಲೆ ನಿವೇಶನ ಮಾರಾಟದ ಅವ್ಯವಹಾರವನ್ನು 2019 ಸೆಪ್ಟೆಂಬರ್‌ನಲ್ಲಿ ಬಿಜೆಪಿ ಸರ್ಕಾರ ಎಸಿಬಿ ತನಿಖೆಗೆ ವಹಿಸಿದೆ. ಎರಡು ತಿಂಗಳಲ್ಲಿ ವರದಿ ನೀಡುವಂತೆ  ತಿಳಿಸಿದ್ದರೂ, ಈವರೆಗೆ ವರದಿ ನೀಡಿಲ್ಲ. ತನಿಖೆ ಅಪೂರ್ಣವಾಗಿದೆ. ಇದರಿಂದ ಕೆಲ ಸೈಟ್‌ಗಳನ್ನು ಹರಾಜು ಮಾಡಲಾಗುತ್ತಿಲ್ಲ. ಜತೆಗೆ ಒಂದಿಷ್ಟು ಸೈಟ್‌ಗಳ ಮಾಲೀಕತ್ವದ ಕುರಿತ ಪ್ರಕರಣಗಳು ಕೋರ್ಟ್‌ನಲ್ಲಿವೆ. ಇಷ್ಟೇ ಸಂಖ್ಯೆಯ  ಸೈಟ್‌ಗಳು ಒತ್ತುವರಿಗೆ ಒಳಗಾಗಿವೆ. ವಸ್ತುಸ್ಥಿತಿ ಹೀಗಿರುವಾಗ ಮುಖ್ಯಮಂತ್ರಿಗಳ ಹೇಳಿಕೆಯನ್ನು ಕಾರ್ಯರೂಪಕ್ಕೆ ತರಲು ಕಷ್ಟ ಎಂಬ ಮಾತು ಕೇಳಿಬರುತ್ತಿವೆ.

Advertisement

ಕಾರ್ನರ್‌ ಸೈಟ್‌ ವಿಭಾಗಿಸಿದ ಹಗರಣ: ಬಿಡಿಎಗೆ ಸೇರಿದ ಕಾರ್ನರ್‌ ಸೈಟ್‌ಗಳು  ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವಂತಹದ್ದು. ಇದರಿಂದಾಗಿ ಇವುಗಳ ಬೆಲೆ ಅಧಿಕವಾಗಿರುತ್ತವೆ. ಇಂತಹ ಸೈಟ್‌ಗಳನ್ನು ಹರಾಜಿನ ಮೂಲಕ ಮಾತ್ರ ಪಡೆಯಲು ಸಾಧ್ಯ. ಕೆಲ ವರ್ಷಗಳಿಂದ ಇಂತಹ ಆಯಕಟ್ಟಿನ  ಜಾಗವನ್ನು ತಮ್ಮದಾಗಿಸಿಕೊಳ್ಳಲು ಪಟ್ಟಭದ್ರರು ಪ್ರಾಧಿಕಾರದ ಸಿಬ್ಬಂದಿ ಜತೆ ಶಾಮೀಲಾಗಿ ಹಗರಣ ಸೃಷ್ಟಿಸಿದ್ದಾರೆ. ಕಾರ್ನರ್‌ ಸೈಟ್‌ ವಿಭಜಿಸಿ ಒಂದು ಭಾಗವನ್ನು ವಾಸದ ನಿವೇಶನಗಳನ್ನಾಗಿಸಿ, ಅವುಗಳನ್ನು ಬದಲಿ ಸೈಟ್‌ ರೂಪದಲ್ಲಿ ಹಂಚಿಕೆ ಮಾಡಲಾಗಿದೆ. ಇದರ ತನಿಖೆ ಈಗಷ್ಟೇ ಪೂರ್ಣಗೊಳ್ಳಬೇಕಿದೆ. ಇವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎಷ್ಟು ನಿವೇಶನಗಳಿವೆ ಎಂಬ ಬಗ್ಗೆ ವರದಿ  ನೀಡಬೇಕಿದೆ.

ಹೇಳಿದಷ್ಟು ಸಿಗುವುದು ಕಷ್ಟ!: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ 9 ಸಾವಿರ ಬಿಡಿಎ ನಿವೇಶನಗಳ ಮಾರಾಟದಿಂದ ಸಾವಿರಾರು ಕೋಟಿ ರೂ. ಬರುತ್ತದೆ ಎಂದು ತಿಳಿಸಿದ್ದರು. ಆದರೆ, ಇಷ್ಟೊಂದು  ನಿವೇಶನಗಳು ಸಿಗುವುದು ಕಷ್ಟ ಸಾಧ್ಯ. ಮೂಲಗಳ ಪ್ರಕಾರ ನಾಲ್ಕು ಸಾವಿರ ನಿವೇಶನಗಳು ಸಿಗಲಿವೆ. ಇವುಗಳನ್ನು ಒಂದೇ ಬಾರಿಗೆ ಹರಾಜು ಹಾಕುವುದಿಲ್ಲ. ನೂರು ನೂರು ನಿವೇಶನಗಳಂತೆ ಹರಾಜು ಹಾಕಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಡಿಎ ಬಡಾವಣೆಗಳಲ್ಲಿ ಎಷ್ಟು ಕಾರ್ನರ್‌ ಸೈಟ್‌ಗಳು ಸಿಗಲಿವೆ? ನ್ಯಾಯಾಲಯದಲ್ಲಿ ವ್ಯಾಜ್ಯಗಳು ಎಷ್ಟಿವೆ ಎಂಬ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಕೇಳಿದ್ದೇನೆ. ಶೀಘ್ರ ನೀಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು  ಮುಂದಿನ ಕ್ರಮಕೈಗೊಳ್ಳಲಾಗುವುದು.
-ಡಾ.ಎಚ್‌.ಆರ್‌. ಮಹಾದೇವ್‌, ಬಿಡಿಎ ಆಯುಕ್ತ

* ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next