Advertisement

ನಗರದ ಒಂಬತ್ತು ಮಂದಿಗೆ ಸೋಂಕು

05:44 AM May 29, 2020 | Lakshmi GovindaRaj |

ಬೆಂಗಳೂರು: ನಗರದ ಮಂಗಮ್ಮನಪಾಳ್ಯದಲ್ಲಿ ಕೋವಿಡ್‌ 19 ವೈರಸ್‌ ಸೋಂಕಿತೆಯೊಬ್ಬರ ಪ್ರಾಥಮಿಕ ಸಂಪರ್ಕದಿಂದ ಆರು ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ವಿದೇಶದಿಂದ ಬಂದಿದ್ದ ಇಬ್ಬರು ಮತ್ತು ಬಸವೇಶ್ವರ ನಗರದ  ವೃದ್ಧೆ ಸೇರಿ ಗುರುವಾರ ಒಂಬತ್ತು ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 291ಕ್ಕೆ ತಲುಪಿದೆ. ಮೇ 18 ರಂದು ಮಂಗಮ್ಮನಪಾಳ್ಯ ಕಂಟೈನ್ಮೆಂಟ್‌ ವಲಯದ ಮದೀನ ನಗರದ 30 ವರ್ಷದ ಮಹಿಳೆಗೆ  ಸೋಂಕು ದೃಢಪಟ್ಟಿತ್ತು.

Advertisement

ಸದ್ಯ ಆಕೆಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ನಾಲ್ಕು ವರ್ಷದ ಗಂಡು ಮಗು, 11, 13 ಹಾಗೂ 15 ವರ್ಷದ ಮೂವರು ಬಾಲಕಿಯರು, 38 ವರ್ಷದ ಪುರುಷ, 35 ವರ್ಷದ ಮಹಿಳೆ ಸೇರಿ ಒಟ್ಟು ಆರು ಮಂದಿಗೆ  ಸೋಂಕು ಪತ್ತೆಯಾಗಿದೆ. ಸೋಂಕಿತರನ್ನು ನಗರದ ಕೋವಿಡ್‌ 19 ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿ, ಪ್ರಾಥಮಿಕ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಕತಾರ್‌ನಿಂದ ಹಿಂದಿರುಗಿದ್ದ 35 ವರ್ಷದ ವಯಸ್ಕ ಪುರುಷ,  ಸೌದಿಯಿಂದ ಬಂದಿದ್ದ 26 ವರ್ಷದ ಯುವಕ ಸೋಂಕಿತರಾಗಿದ್ದಾರೆ. ಈ ಇಬ್ಬರು ಪ್ರಯಾಣಿಕರು ಕ್ವಾರಂಟೈನ್‌ನಲ್ಲಿದ್ದು, 12ನೇ ದಿನಕ್ಕೆ ನಿಯಮದನ್ವಯ ಸೋಂಕು ಪರೀಕ್ಷೆ ನಡೆಸಿದಾಗ ಸೋಂಕು ಪತ್ತೆಯಾಗಿದೆ.

ಸದ್ಯ ಹೋಟೆಲ್‌ನಿಂದ  ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗರ್ಭಿಣಿಯರಿಗೆ ಪ್ರತ್ಯೇಕ ಪರೀಕ್ಷಾ ಕೇಂದ್ರ: ನಗರದಲ್ಲಿ ಹೊರರಾಜ್ಯ ಹಾಗೂ ಹೊರದೇಶದಿಂದ ಬಂದ ಗರ್ಭಿಣಿಯರಿಗೆ ಸೋಂಕು ಪರೀಕ್ಷೆ ತಡವಾದ ಹಿನ್ನೆಲೆ ಆರೋಗ್ಯ ಇಲಾಖೆಯು ಗರ್ಭಿಯರಿಗೆ ಪ್ರತ್ಯೇಕ  ಪರೀಕ್ಷಾ ಕೇಂದ್ರ ತೆರೆಯಲು ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, “ಸೋಂಕು ಪರೀಕ್ಷೆಗೆ ಗಂಟಲು ದ್ರಾವಣ ಮಾದರಿಗಳು ಹೆಚ್ಚಿರುವ ಹಿನ್ನೆಲೆ ಕೆಲವರ  ಸೋಂಕು ಪರೀಕ್ಷೆ ತಡವಾಗಿದ್ದರಿಂದ ಪ್ರತ್ಯೇಕ ಪರೀಕ್ಷಾ ಕೇಂದ್ರ ತೆರೆಯಲಾಗುವುದು ಎಂದು ಹೇಳಿದರು.

ಪರೀಕ್ಷೆ ಇಲ್ಲದೆ ಸಾಂಸ್ಥಿಕ ಕ್ವಾರಂಟೈನ್‌ನಿಂದ ಮನೆಗೆ: ಸಾಂಸ್ಥಿಕ ಕ್ವಾರಂಟೈನ್‌ಗೆ ಇದ್ದವರಲ್ಲಿ ರೋಗ ಲಕ್ಷಣ ಪತ್ತೆಯಾಗದಿದ್ದರೆ 7 ದಿನಗಳಲ್ಲಿ ಸೋಂಕು ಪರೀಕ್ಷೆ ನಡೆಸದೆಯೇ ಹೋಂ ಕ್ವಾರಂಟೈನ್‌ಗೆ ಕಳುಹಿಸಲು ಗುರುವಾರ ರಾಜ್ಯ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಈ ಹಿಂದೆ ಸಾಂಸ್ಥಿಕ ಕ್ವಾರಂಟೈನ್‌ ನಲ್ಲಿರುವವರು 14 ದಿನ ಕ್ವಾರಂಟೈನ್‌ನಲ್ಲಿರಬೇಕು. 12ನೇ ದಿನ ಎರಡನೇ ಬಾರಿಗೆ ಸೋಂಕು ಪರೀಕ್ಷೆ ನಡೆಸಿ ನೆಗೆಟಿವ್‌ ಬಂದರೆ ಮಾತ್ರ ಹೋಂ ಕ್ವಾರಂಟೈನ್‌ಗೆ  ಕಳುಹಿಸಬಹುದಿತ್ತು.

ಹೊಸ ಆದೇಶದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವವರಿಗೆ 7 ದಿನದಲ್ಲಿ ರೋಗ ಲಕ್ಷಣಗಳು ಕಾಣಿಸದಿದ್ದರೆ ಸೋಂಕು ಪರೀಕ್ಷೆ ಮಾಡದೆ ಹೋಂ ಕ್ವಾರಂಟೈನ್‌ಗೆ ಕಳುಹಿಸಬಹುದು. ಅಂತೆಯೇ 60 ವರ್ಷ ಮೇಲ್ಪಟ್ಟವರು ಅನಾರೋಗ್ಯ ಹೊಂದಿರುವವರಿಗೆ  ಸೂಕ್ತ ಆರೋಗ್ಯ ತಪಾಸಣೆ ನಡೆಸಿ ಮೊದಲ ದಿನವೇ ಹೋಂ ಕ್ವಾರಂಟೈನ್‌ಗೆ ಕಳುಹಿಸಬಹುದು ಎಂದು ಸೂಚಿಸಲಾಗಿದೆ.

Advertisement

ಕಳ್ಳ ಮಾರ್ಗದಿಂದ 80 ಜನ ನಗರ ಪ್ರವೇಶ: ಹೊರ ರಾಜ್ಯಗಳಿಂದ ನಗರಕ್ಕೆ ಕಳ್ಳ ಮಾರ್ಗದ ಮೂಲಕ ಯಾರಾದರು ಬಂದರೆ ಅವರ ಬಗ್ಗೆ ಮಾಹಿತಿ ನೀಡಿ ಎಂದು ಪಾಲಿಕೆ ಸಾರ್ವಜನಿಕರಲ್ಲಿ ಮನವಿ ಮಾಡಿದ ಬೆನ್ನಲ್ಲೇ ನಗರಕ್ಕೆ 80  ಜನರನ್ನು ಪಾಲಿಕೆ ಪತ್ತೆ ಮಾಡಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಅವರು, ಹೊರ ರಾಜ್ಯಗಳಿಂದ ಕಳ್ಳ ಮಾರ್ಗಗಳ ಮೂಲಕ ನಗರ ಪ್ರವೇಶಿಸಿದ 80 ಜನರನ್ನು ಸಾರ್ವಜನಿಕರ  ಸಹಕಾರದಿಂದ ಕ್ವಾರಂಟೈನ್‌ ಮಾಡಲಾಗಿದೆ.

ಈವರೆಗೆ ನಗರಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ 80ಜನರನ್ನು ಪತ್ತೆ ಹಚ್ಚಲಾಗಿದ್ದು, ಎಲ್ಲರನ್ನೂ ಕ್ವಾರಂಟೈನ್‌ ಮಾಡಲಾಗಿದೆ. ಯಾರಿಗಾದರೂ ಕೋವಿಡ್‌ 19 ಸೋಂಕಿನ ಲಕ್ಷಣ  ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಕ್ವಾರಂಟೈನ್‌ ನಿಯಮ ಉಲ್ಲಂಘನೆ ಮಾಡುವುದು ಕಂಡು ಬಂದಲ್ಲಿ, ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಲಾಗಿದೆ  ದರು. ಇನ್ನು ಹೊರ ರಾಜ್ಯದಿಂದ  ಬರುವವರನ್ನು ಕ್ವಾರಂಟೈನ್‌ ಮಾಡಲು ಸ್ಥಳೀಯ ವಿರೋಧ ಮಾಡುವುದಕ್ಕೆ ಸಂಬಂಧ ಪಟ್ಟಂತೆ ಪ್ರತಿಕ್ರಿಯಿಸಿದ ಆಯುಕ್ತರು, ಹೊರ ರಾಜ್ಯದಿಂದ ಬರುವವರನ್ನು ನಗರದಲ್ಲಿನ ಯಾವುದೇ ಹೋಟೆಲ್‌, ಲಾಡ್ಜ್, ಹಾಸ್ಟೆಲ್‌ಗ‌ಳಲ್ಲಿ ಕ್ವಾರಂಟೈನ್‌ ಮಾಡುವುದಕ್ಕೆ ಅವಕಾಶವಿದೆ ಎಂದರು.

ಕೋವಿಡ್‌ 19 ತಡೆಗೆ ನಿರ್ದೇಶನ: ನಗರದಲ್ಲಿ ಕಚೇರಿಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕಚೇರಿಗಳಲ್ಲಿ ಸೋಂಕು ತಡೆಯುವ ನಿಟ್ಟಿನಲ್ಲಿ ಪಾಲಿಕೆ ಕೆಲವು ಸೂಚನೆಗಳನ್ನು ನೀಡಿದೆ. ಕಚೇರಿಯ ನೆಲದ ಮೇಲೆ ಸಾಮಾಜಿಕ ಅಂತರ  ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕುರ್ಚಿಯ ಸುತ್ತ ವೃತ್ತ ರಚಿಸಬೇಕು. ಪ್ರವೇಶ ದ್ವಾರದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಮೂಲಕ ದೇಹದ ಉಷ್ಣಾಂಶ ಪರೀಕ್ಷೆ ಮಾಡಬೇಕು.

ಸಾಮಾಜಿಕ ಅಂತರ ಕಾಯ್ದುಕೊಂಡು ಕಚೇರಿಗೆ ಪ್ರತ್ಯೇಕ ಪ್ರವೇಶ,  ನಿರ್ಗಮನ ದ್ವಾರಗಳನ್ನು ಅನುಸರಿಸಬೇಕು. ಸೋಂಕಿತ ಲಕ್ಷಣ ಕಂಡು ಬಂದರೆ ಕಚೇರಿ ಪ್ರವೇಶ ನೀಡಬಾರದು. ಕಡ್ಡಾಯವಾಗಿ ಕ್ಯಾಮರಾ ಅಳವಡಿಕೆ ಮಾಡಬೇಕು. ಕಚೇರಿ ಬಾಗಿಲುಗಳು ತೆರೆದ ಸ್ಥಿತಿಯಲ್ಲಿ ಇರಬೇಕು ಅಥವಾ ಸ್ವಯಂ  ಪ್ರೇರಿತವಾಗಿ ತೆರೆಯುವಂತಿರಬೇಕು. ಕಚೇರಿಯಲ್ಲಿ ಬಹುತೇಕ ಸಿಬ್ಬಂದಿ ಬಳಸುವ ಊಟದ ಹಾಲ್‌, ವಿಶ್ರಾಂತಿ ಕೊಠಡಿಗಳನ್ನು ಆಗಾಗ ಸ್ವತ್ಛಗೊಳಿಸಬೇಕು. ಸಿಬ್ಬಂದಿ ಬಳಸುವ ವಸ್ತು ಗಳಿಗೆ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು  ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next