Advertisement

ಆಸ್ತಿ ವಿವಾದಕ್ಕೆ ನಾಲ್ವರು ಸಹೋದರರ ಹತ್ಯೆ: ಪುಟಾಣಿ ಕುಟುಂಬದ 9 ಮಂದಿಯ ಬಂಧನ

01:34 PM Aug 29, 2021 | Team Udayavani |

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಮದರಖಂಡಿಯಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ನಾಲ್ವರು ಸಹೋದರರನ್ನು ಹತ್ಯೆ ಮಾಡಿದ್ದ 9 ಮಂದಿ ಆರೋಪಿಗಳನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.

Advertisement

ಮದರಖಂಡಿಯ ಸುಮಾರು 3 ಎಕರೆ 21 ಗುಂಟೆ ಜಮೀನಿನ ವಿವಾದ ನಾಲ್ವರು ಸಹೋದರರ ಬರ್ಬರ ಹತ್ಯೆಗೆ ಕಾರಣವಾಗಿತ್ತು. ಜಮಖಂಡಿ ತಾಲೂಕಿನ ಮದರಖಂಡಿ ಗ್ರಾಮದ ಹೊರವಲಯದ ತೋಟದಲ್ಲಿ ಶನಿವಾರ ರಾತ್ರಿ ಈ ಕೊಲೆ ನಡೆದಿತ್ತು.

ಮದರಖಂಡಿ ಮತ್ತು ಪುಟಾಣಿ ಎರಡು ಕುಟುಂಬಗಳ ನಡುವಿನ ಜಮೀನು ವಿವಾದದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಸಹೋದರರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಮುದರಡ್ಡಿ(ಉದಗಟ್ಟಿ) ಕುಟುಂಬದ ಸಹೋದರರಾದ ಹನುಮಂತ ಮಹಾದೇವ ಮುದರಡ್ಡಿ(45 ವ), ಮಲ್ಲಪ್ಪ(42 ವ) ಬಸಪ್ಪ(37 ವ) ಹಾಗೂ ಈಶ್ವರ (35 ವ)ಕೊಲೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಜಮಖಂಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುದರಡ್ಡಿ ಕುಟುಂಬದವರು ಗ್ರಾಮದ ಪುಟಾಣಿ ಕುಟುಂಬದವರಿಂದ ಜಮೀನು ಖರೀದಿ ಮಾಡಿದ್ದು, ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ವಿವಾದ ಉಂಟಾಗಿತ್ತು.

ಇದನ್ನೂ ಓದಿ:ಟ್ಯಾಟೂ ನೀಡಿದ ಸಾಕ್ಷಿ: ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದ ಟ್ಯಾಟೂ

Advertisement

ಪುಟಾಣಿ ಕುಟುಂಬದವರಿಂದ ಖರೀದಿಸಿದ್ದ 3ಎಕರೆ 21 ಗುಂಟೆ ಜಮೀನಿನಲ್ಲಿ 21 ಗುಂಟೆ ಜಾಗವನ್ನು ಬಿಟ್ಟು ಕೊಡುವುದಾಗಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಮುದರಡ್ಡಿ ಕುಟುಂಬದವರು ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಆದರೆ ಆ ಜಮೀನು ಬಿಟ್ಟು ಕೊಡದೆ ಸತಾಯಿಸಿದ್ದರಿಂದ ಪುಟಾಣಿ ಕುಟುಂಬದವರು ದುಷ್ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಸದ್ಯ ಪುಟಾಣಿ ಕುಟುಂಬದ ನಂದೀಶ್, ನಾಗಪ್ಪ, ಪರಪ್ಪ, ಶಿವಾನಂದ, ಈರಪ್ಪ, ಶಂಕರ್, ಅಂಬವ್ವ, ರುಕ್ಮವ್ವ, ಮಾಲಾಶ್ರೀ, ಸುನಂದಾ ಹಾಗೂ ಪ್ರೇಮಾ ನಿಡೋಣಿ, ಚನ್ನಬಸಪ್ಪ ನಿಡೋಣಿ ಸೇರಿದಂತೆ ಒಟ್ಟು 12 ಮಂದಿ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ. ಮೃತರ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಾಲ್ವರು ಮಕ್ಕಳನ್ನು ಕಳೆದುಕೊಂಡು ಹೆತ್ತ ತಾಯಿಯ ಕಣ್ಣೀರು ಹಾಕುತ್ತಿದ್ದಾರೆ.

ಕೊಲೆಯಾಗಿರುವ ಮಲ್ಲಪ್ಪನ ಪತ್ನಿ ಭಾರತಿಯ ಆಕ್ರಂದನ ಮುಗಿಲು ಮುಟ್ಟಿದೆ. ನಾಲ್ವರು ಸಹೋದರರಿಗೆ ಒಟ್ಟು 12 ಜನ ಮಕ್ಕಳು ಇದ್ದಾರೆ.

ಈ ಎರಡು ಕುಟುಂಬಗಳ ನಡುವಿನ ಆಸ್ತಿ ವಿವಾದ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿತ್ತು. ಅದಿನ್ನೂ ಬಗೆಹರಿದಿಲ್ಲ. ಗ್ರಾಮದ ಹಿರಿಯರು ಕೂಡ ಈ ಕುಟುಂಬಗಳ ನಡುವಿನ ವಿವಾದ ಬಗೆ ಹರಿಸುವ ಪ್ರಯತ್ನ ಮಾಡಿದ್ದರೂ ಎರಡು ಕುಟುಂಬದ ನಡುವೆ ದ್ವೇಷ ಮುಂದುವರೆದಿತ್ತು ಎನ್ನಲಾಗಿದೆ. ತೋಟಕ್ಕೆ ಬಂದ ಸಹೋದರರನ್ನು ಒಬ್ಬರ ಮೇಲೊಬ್ಬರಂತೆ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next