Advertisement

ಈ ವಾರ ಒಂಭತ್ತು ಚಿತ್ರಗಳು!

10:48 AM Nov 13, 2017 | |

ಕಳೆದ ವಾರವಷ್ಟೇ ಬರೋಬ್ಬರಿ ಏಳು ಚಿತ್ರಗಳು ತೆರೆಗೆ ಅಪ್ಪಳಿಸಿದ್ದವು. ಆ ಪೈಕಿ ಸೈ ಎನಿಸಿಕೊಂಡ ಚಿತ್ರಗಳ್ಯಾವೂ ಅಷ್ಟರಮಟ್ಟಿಗೆ ಕಾಣಸಿಗಲಿಲ್ಲ. ಈಗ ಮತ್ತೂಂದು ವಾರ ಸಮೀಪಿಸುತ್ತಿದೆ. ಈ ವಾರ ಎಂಟು ಚಿತ್ರಗಳು ಬಿಡುಗಡೆಯಾಗುತ್ತಿವೆ ಅನ್ನೋದೇ ವಿಶೇಷ. ಇನ್ನೂ ಒಂದೆರೆಡು ಚಿತ್ರಗಳು ಬಿಡುಗಡೆಯ ಹಾದಿಯಲ್ಲಿವೆ. ಈ ವಾರ ಯಾರು ಇರೋರು, ಯಾರು ಹೋಗೋರು ಎಂಬುದು ಗೊತ್ತಿಲ್ಲ. ಅಂದಹಾಗೆ, ಬಿಡುಗಡೆ ಆಗುತ್ತಿರುವ ಚಿತ್ರಗಳ ಕುರಿತು ಒಂದು ಸುತ್ತು.

Advertisement

ಉಪೇಂದ್ರ ಮತ್ತೆ ಬಾ: ಈ ವಾರ ಒಂದೆರೆಡು ಚಿತ್ರಗಳನ್ನು ಹೊರತುಪಡಿಸಿದರೆ, ಹೊಸಬರ ಚಿತ್ರಗಳೇ ತೆರೆಗೆ ಬರುತ್ತಿವೆ ಎಂಬುದು ವಿಶೇಷ. ಉಪೇಂದ್ರ ಅಭಿನಯದ “ಉಪೇಂದ್ರ ಮತ್ತೆ ಬಾ’ ಚಿತ್ರ ಒಂದಷ್ಟು ನಿರೀಕ್ಷೆ ಹೆಚ್ಚಿಸಿದೆ. ಕಾರಣ, ಬಹಳ ವರ್ಷಗಳ ಬಳಿಕ ಉಪೇಂದ್ರ ಮತ್ತು ಪ್ರೇಮ ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಅದರಲ್ಲೂ ಶೀರ್ಷಿಕೆ ಕೂಡ ಒಂದಷ್ಟು ಕುತೂಹಲ ಕೆರಳಿಸಿದೆ. ಎನ್‌.ಅರುಣ್‌ ಲೋಕನಾಥ್‌ ಈ ಚಿತ್ರದ ನಿರ್ದೇಶಕರು. ಉಳಿದಂತೆ ಎಂ.ಎಸ್‌.ಶ್ರೀಕಾಂತ್‌, ಶಶಿಕಾಂತ್‌ ಹಾಗೂ ನರೇಂದ್ರನಾಥ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ನನ್‌ ಮಗಳೇ ಹೀರೋಯಿನ್‌: ಇನ್ನು, ಸಂಚಾರಿ ವಿಜಯ್‌ ಅಭಿನಯದ “ನನ್‌ ಮಗಳೇ ಹೀರೋಯಿನ್‌’ ಚಿತ್ರ ಕೂಡ ಹೊಸ ನಿರೀಕ್ಷೆ ಹುಟ್ಟಿಸಿದೆ. ಕಾರಣ, ಶೀರ್ಷಿಕೆಯಲ್ಲೇ  ಮಜವಿದೆ. ಇದೊಂದು ಮನರಂಜನಾತ್ಮಕ ಚಿತ್ರ ಎಂಬುದು ಚಿತ್ರತಂಡದ ಹೇಳಿಕೆ. ಇದರ ಇನ್ನೊಂದು ವಿಶೇಷವೆಂದರೆ, ನಟ ಸಂಚಾರಿ ವಿಜಯ್‌ ಅವರ ಮೊದಲ ಪಕ್ಕಾ ಕಮರ್ಷಿಯಲ್‌ ಚಿತ್ರ. ಇಡೀ ಸಿನಿಮಾ ನೋಡುಗರನ್ನು ನಕ್ಕು ನಗಿಸುತ್ತಲೇ ಹೋಗುತ್ತೆ ಎಂದು ಮಾಹಿತಿ ಕೊಡುತ್ತಾರೆ ನಿರ್ದೇಶಕ ಬಾಹುಬಲಿ.

ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ್‌ ಕ್ಯಾಮೆರಾ ಹಿಡಿದಿದ್ದಾರೆ. ಕೆ.ಎಂ.ಪ್ರಕಾಶ್‌ ಸಂಕಲನವಿದೆ. ಯೋಗರಾಜ್‌ ಭಟ್‌, ಕವಿರಾಜ್‌ ಇತರರು ಸಾಹಿತ್ಯ ಬರೆದಿದ್ದಾರೆ. ಚಿತ್ರದಲ್ಲಿ ಸಂಚಾರಿ ವಿಜಯ್‌ಗೆ ಅಮೃತಾ ರಾವ್‌ ಮತ್ತು ದೀಪಿಕಾ ನಾಯಕಿಯರು. ಉಳಿದಂತೆ ಬಿ.ಸಿ.ಪಾಟೀಲ್‌, ತಬಲಾನಾಣಿ, “ಮಜಾ ಟಾಕೀಸ್‌’ ಸೇರಿದಂತೆ ಬಹುತೇಕ ಕಾಮಿಡಿ ನಟರ ದಂಡೇ ಇಲ್ಲಿದೆ. ಈ ಚಿತ್ರಕ್ಕೆ ಮೋಹನ್‌ ಕುಮಾರ್‌ ಹಾಗೂ ಪಟೇಲ್‌ ಆರ್‌. ಅನ್ನದಾನಪ್ಪ ನಿರ್ಮಾಪಕರು.

ಮಹಾನುಭಾವರು: “ಮಹಾನುಭಾವರು’ ಚಿತ್ರದ ಮೂಲಕ ಹೊಸಬರ ಆಗಮನವಾಗುತ್ತಿದೆ. ಹೊಸಬರಾಗಿದ್ದರೂ, ಪಕ್ಕಾ ತಯಾರಿಯೊಂದಿಗೇ ಸಿನಿಮಾ ಮಾಡಿದ್ದಾರೆ ಎಂಬುದಕ್ಕೆ ಈಗಾಗಲೇ ಚಿತ್ರದ ಟ್ರೇಲರ್‌, ಹಾಡುಗಳು ಮಾಡಿರುವ ಸದ್ದು ಸಾಕ್ಷಿ. ಸಂದೀಪ್‌ ನಾಗಲೀಕರ್‌ ನಿರ್ದೇಶನದ ಈ ಚಿತ್ರವನ್ನು ಬಾಲಚಂದರ್‌ ನಿರ್ಮಿಸಿದ್ದಾರೆ. ಅವರು ಇಲ್ಲಿ ನಾಯಕರಾಗಿಯೂ ನಟಿಸಿದ್ದಾರೆಂಬುದು ವಿಶೇಷ. ಅವರೊಂದಿಗೆ ಗೋಕುಲ್‌ರಾಜ್‌ ಕೂಡ ನಟಿಸಿದ್ದಾರೆ.

Advertisement

ಇವರಿಗೆ ಪ್ರಿಯಾಂಕ ಮತ್ತು ಅನೂಷ ರೈ ನಾಯಕಿಯರು. ಇಲ್ಲಿ ದೊಡ್ಡ ಸಾಧನೆ ಮಾಡಿದವರು “ಮಹಾನುಭಾವರು’ ಅಲ್ಲ, ಸಣ್ಣ ಸಣ್ಣ ಆಸೆ, ಆಕಾಂಕ್ಷೆ ಈಡೇರಿಸಿಕೊಳ್ಳುವವರು “ಮಹಾನುಭಾವರು’ ಎಂಬ ಸುತ್ತ ಚಿತ್ರ ಸಾಗಲಿದೆ.ಚಿತ್ರಕ್ಕೆ ಸತೀಶ್‌ ಮೌರ್ಯ ಸಂಗೀತವಿದೆ. ಅರ್ಜುನ್‌ ಜನ್ಯ ಹಿನ್ನೆಲೆ ಸಂಗೀತ ನೀಡಿರುವುದು ವಿಶೇಷ. ಇನ್ನೊಂದು ವಿಶೇಷವೆಂದರೆ, ಹೊಸ ತಂಡಕ್ಕೆ ಪುನೀತ್‌ರಾಜಕುಮಾರ್‌, ಶ್ರೀಮುರಳಿ ಹಾಡುವ ಮೂಲಕ ಪ್ರೋತ್ಸಾಹಿಸಿದ್ದಾರೆ.

ಕೆಂಪಿರ್ವೆ: ಹಿರಿಯ ಕಲಾವಿದ ದತ್ತಣ್ಣ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ “ಕೆಂಪಿರ್ವೆ’ ಕೂಡ ಹೊಸ ನಿರೀಕ್ಷೆ ಹುಟ್ಟಿಸಿದೆ. ಕಾರಣ, ಇದೊಂದು ಹೊಸ ತರಹದ ಚಿತ್ರ ಅನ್ನೋದು. ಸೆನ್ಸಾರ್‌ ಮಂಡಳಿ ವೀಕ್ಷಿಸಿ, ಈ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ವೆಂಕಟ್‌ ಭಾರದ್ವಾಜ್‌ ನಿರ್ದೇಶಿಸಿದ್ದಾರೆ. ಅಮೃತ ಫಿಲ್ಮ್ ಸೆಂಟರ್‌ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ. ಕಿಶನ್‌ ಸಂಗೀತ ನೀಡಿದರೆ, ವಿಶ್ವಾಸ್‌ ಆವತಿ ಕ್ಯಾಮೆರಾ ಹಿಡಿದಿದ್ದಾರೆ. ನರೇಂದ್ರಬಾಬು, ಲಕ್ಷ್ಮಣ್‌ ಶಿವಶಂಕರ್‌, ಮಹೇಶ್‌ ಸಾಹಿತ್ಯವಿದೆ. ಚಿತ್ರದಲ್ಲಿ ಸಯ್ನಾಜಿ ಶಿಂಧೆ, ಉಮೇಶ್‌ ಬಣಕಾರ್‌, ಶ್ರೇಯಾ, ರಾಜ್‌ಬಹದ್ದೂರ್‌, ರೂಪಾ ಹೆಗ್ಡೆ, ಸುನೀಲ್‌ ನಟಿಸಿದ್ದಾರೆ.

ಅಸೂಚಭೂ: “ಅಸೂಚಭೂ’ ಈ ಅಕ್ಷರಗಳನ್ನೊಮ್ಮೆ ಓದಿದರೆ, ಎಂಥವರಿಗೂ ಒಂದಷ್ಟು ಗೊಂದಲ ಆಗೋದು ನಿಜ. ಆದರೆ, ಇದು ಸಿನಿಮಾದ ಹೆಸರೆನ್ನುವುದು ಅಷ್ಟೇ ನಿಜ.”ಆಕಾಶ, ಸೂರ್ಯ, ಚಂದ್ರ, ಭೂಮಿ’ ಎಂಬ ಹೆಸರನ್ನು ಶಾರ್ಟ್‌ ಆಗಿ ಈ ಚಿತ್ರಕ್ಕೆ ಬಳಸಿಕೊಂಡು ಶೀರ್ಷಿಕೆ ಮಾಡಿಕೊಳ್ಳಲಾಗಿದೆ. ಬಹುತೇಕ ಹೊಸಬರೇ ಇರುವ ಈ ಚಿತ್ರವನ್ನು ಎಸ್‌.ಎಲ್‌. ಮಂಜುನಾಥ್‌ ನಿರ್ದೇಶಿಸಿದ್ದಾರೆ. ವಿಜಯ್‌ ಭಾಸ್ಕರ್‌ ಮತ್ತು ಡಿ.ಕೆ.ಗೋವಿಂದು ನಿರ್ಮಾಪಕರು.

ನಂ.19  ಹಿಲ್ಟನ್‌ ಹೌಸ್‌: ಕನ್ನಡದಲ್ಲಿ ಮತ್ತೂಂದು ಹಾರರ್‌ ಚಿತ್ರ ಬರುತ್ತಿದೆ. ನರೇಂದ್ರಬಾಬು ನಿರ್ದೇಶಿಸಿರುವ “ನಂ.9 ಹಿಲ್‌ಟನ್‌ ಹೌಸ್‌’ ಚಿತ್ರದಲ್ಲಿ ಮೊಬೈಲ್‌ ಕಾಲ್‌, ಮೆಸೇಜ್‌ ಮೂಲಕ ಹೇಗೆ ಇನ್ನೊಂದು ಮೊಬೈಲ್‌ಗೆ ಪ್ರೇತಾತ್ಮ ಪಾಸ್‌ ಆಗುತ್ತೆ, ಆ ಮೂಲಕ ಹೇಗೆಲ್ಲಾ ಅದು ಕಾಟ ಕೊಡುತ್ತೆ ಅನ್ನೋ ಹೊಸ ವಿಷಯವನ್ನು ಹೇಳಲಾಗಿದೆಯಂತೆ. ಚಿತ್ರಕ್ಕೆ ಸಿ.ವೆಂಕಟೇಶ್‌ ನಿರ್ಮಾಪಕರು. ಗಿರಿಧರ್‌ ದಿವಾನ್‌ ಇಲ್ಲಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಎ.ಟಿ. ರವೀಶ್‌ ಹಾಡಿಗೆ ಸಂಗೀತ ನೀಡಿದ್ದಾರೆ. ಮಧು ಸಾಗರ್‌, ಲಲಿತ್‌ ಪ್ರಕಾಶ್‌, ಆಕಾಶ್‌ ಸೇರಿದಂತೆ ಹಲವರು ನಟಿಸಿದ್ದಾರೆ.

ಪಾನಿಪುರಿ: ಹೊಸಬರೇ ಸೇರಿ ಮಾಡಿರುವ “ಪಾನಿಪುರಿ’ ಒಂದು ಥ್ರಿಲ್ಲರ್‌ ಕಥೆ ಹೊಂದಿದೆ. ಒಂದು ಬ್ಯಾಂಕ್‌ ದರೋಡೆ ಮಾಡಿ ದಿಢೀರ್‌ ಶ್ರೀಮಂತರಾಗಬೇಕು ಅಂತ ಹೊರಡುವ ಹುಡುಗರು ಎಷ್ಟೆಲ್ಲಾ ಸಮಸ್ಯೆ ಎದುರಾಗುತ್ತೆ ಎಂಬುದು ಹೈಲೈಟ್‌. ನವೀನ್‌ಕುಮಾರ್‌ ನಿರ್ದೇಶನ ಮಾಡಿದರೆ, ಪುಟ್ಟರಾಜು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಸಂಜಯ್‌, ಜಗದೀಶ್‌, ವೈಭವ್‌ ನಾಯಕರಾದರೆ ಅವರಿಗೆ ಅನು, ಅಕ್ಷತಾ, ದರ್ಶಿತಾ ನಾಯಕಿಯರು. ರೋಬೋ ಗಣೇಶ್‌ಗೆ ವಿಶೇಷ ಪಾತ್ರವಿದೆ. ಸಂತೋಷ್‌ ಬಾಗಲಕೋಟೆ ಐದು ಹಾಡುಗಳಿಗೆ ಸಂಗೀತ ನೀಡಿದ್ದಾರೆ.

ಇವುಗಳ ಜತೆಯಲ್ಲಿ “ಮೂಕಹಕ್ಕಿ’ , “ಕಾವೇರಿ ತೀರದ ಚರಿತ್ರೆ’ ಚಿತ್ರಗಳು  ಕೂಡ ತೆರೆಗೆ ಬರುವ ಸಾಧ್ಯತೆ ಇದೆ. “ಮೂಕಹಕ್ಕಿ’ ಚಿತ್ರವನ್ನು  ನೀನಾಸಂ ಮಂಜು ನಿರ್ದೇಶಿಸಿದ್ದು, ಚಂದ್ರಕಲಾ ನಿರ್ಮಿಸಿದ್ದಾರೆ. ಇದೊಂದು ಅಲೆಮಾರಿ ಜನಾಂಗದ ಕಥೆ. “ತಿಥಿ’ ಖ್ಯಾತಿಯ ಪೂಜಾ ಇಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರೆ, ರಂಗಭೂಮಿ ಪ್ರತಿಭೆ ಸಂಪತ್‌, ಸತೀಶ್‌ ಇತರರು ನಟಿಸಿದ್ದಾರೆ. ಕೋಟಗಾನಹಳ್ಳಿ ರಾಮಯ್ಯ ಕಥೆ ಬರೆದಿದ್ದಾರೆ. ಮಣಿಕಾಂತ್‌ ಕದ್ರಿ ಸಂಗೀತವಿದೆ. ಚಿದಾನಂದ್‌ ಕ್ಯಾಮೆರಾ ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next