Advertisement
ಮಂಗಳೂರು ನಗರ ಕೇಂದ್ರದಿಂದ 19 ಕಿ.ಮೀ. ದೂರ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವು ವಿಶಾಲ ಮೈದಾನದ 9.11 ಎಕ್ರೆ ಜಾಗದ ನಿವೇಶನವನ್ನು ಕ್ರೀಡಾಂಗಣ ಉದ್ದೇಶಕ್ಕೆ ಮೀಸಲಿರಿಸಿದೆ. ಯುವ ಕ್ರೀಡಾಳುಗಳನ್ನು ಗಮನದಲ್ಲಿ ಇಟ್ಟುಕೊಂಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಈ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರೀಡಾಂಗಣ ನಿರ್ಮಾಣಕ್ಕೆ 10 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು, ಇದರಲ್ಲಿ 400 ಮೀಟರ್ ಉದ್ದದ ಮಣ್ಣಿನ ಟ್ರಾಕ್ ನಿರ್ಮಾಣ, ಸ್ಟೇಡಿಯಂ, ಪೆವಿಲಿಯನ್, ತಳ ಅಂತಸ್ತು ಒಳಗೊಂಡ ಕಟ್ಟಡ, ಆಡಳಿತ ವ್ಯವಸ್ಥೆ ಕಟ್ಟಡ, ಪೆವಿಲಿಯನ್‌ಗೆ ಕೂಡು ರಸ್ತೆ, ತಂತಿ ಬೇಲಿ ನಿರ್ಮಾಣ ಉದ್ದೇಶಿತ ಯೋಜನೆಯಲ್ಲಿದೆ.
Related Articles
ಪೆವಿಲಿಯನ್ ಕಟ್ಟಡ ನಿರ್ಮಾಣಕ್ಕೆ 3. 64 ಕೋಟಿ, ಆಡಳಿತಾತ್ಮಕ ಬ್ಲಾಕ್ ನಿರ್ಮಾಣಕ್ಕೆ 1.21 ಕೋಟಿ,, ಸುತ್ತು ತಡೆಬೇಲಿ ನಿರ್ಮಾಣಕ್ಕೆ 10ಲಕ್ಷ, ಸಿಮೆಂಟ್ ಕಾಂಕ್ರೀಟ್ ಚರಂಡಿ ನಿರ್ಮಾಣಕ್ಕೆ 54.80ಲಕ್ಷ, ಕ್ರೀಡಾಂಗಣ ನಿರ್ಮಾಣಕ್ಕೆ 1. 27 ಕೋಟಿ, ಸಂಪರ್ಕ ರಸ್ತೆಗೆ 65.70 ಲಕ್ಷ, ತಡೆಗೋಡೆ ನಿರ್ಮಾಣ, ಮೆಟ್ಟಿಲು, ಫುಟ್ ಪಾತ್ ನಿರ್ಮಾಣಕ್ಕೆ 2.30 ಕೋಟಿ ರೂ. ಮೀಸಲಿಟ್ಟಿದೆ. ನಿರ್ಮಾಣದ ಸಂದರ್ಭ ಅವಶ್ಯ ಬೇಕಾಗ ಬಹುದಾದ ವೆಚ್ಚಕ್ಕಾಗಿ 27.50 ಲಕ್ಷವನ್ನು ಮೀಸಲಿಟ್ಟಿದೆ.
Advertisement
ಬಂಟ್ವಾಳ ತಾಲೂಕು ಕೇಂದ್ರ ಬಿ.ಸಿ.ರೋಡಿನಿಂದ ಕ್ರೀಡಾಂಗಣಕ್ಕೆ ಕೇವಲ ಆರು ಕಿ.ಮೀ. ದೂರವಿದೆ. ಬಜ್ಪೆ ವಿಮಾನ ನಿಲ್ದಾಣ, ಮಂಗಳೂರು ರೈಲು ನಿಲ್ದಾಣಕ್ಕೆ ಅರ್ಧ ಗಂಟೆಯಲ್ಲಿ ತಲುಪುದಕ್ಕೆ ಸಾಧ್ಯವಿದೆ. ಸಾಕಷ್ಟು ಖಾಸಗಿ ಸರ್ವಿಸ್ ಬಸ್‌ಗಳು ಇಲ್ಲಿಂದ ನಗರ ಕೇಂದ್ರಕ್ಕೆ ಸಂಪರ್ಕ ಹೊಂದಿದ್ದು ಭವಿಷ್ಯದ ಯುವ ಕ್ರೀಡಾಪಟುಗಳ ಸಾಧನೆ, ತಯಾರಿಗೆ ಪೂರಕ ವೇದಿಕೆ ಕಲ್ಪಿಸಲಿದೆ.
ಸೌಲಭ್ಯಗಳುತಳ ಅಂತಸ್ತಿನಲ್ಲಿ ಕ್ರೀಡಾಳುಗಳಿಗೆ 77.26 ಮೀ. ಉದ್ದದ 18.31 ಮೀ. ಅಗಲದ ಪೆವಿಲಿಯನ್, ಕ್ರೀಡಾ ಚಟುವಟಿಕೆಗಳ ಪೂರಕ ಕಟ್ಟಡ ನಿರ್ಮಾಣ, ಮಲ್ಟಿ ಜಿಮ್, ಪುರುಷರ, ಮಹಿಳೆಯರ ಲಾಕರ್ ಕೊಠಡಿ, ಡ್ರೆಸ್ಸಿಂಗ್ ಕೊಠಡಿ, ಶೌಚಾಲಯ ಸೇರಿದೆ. ಆಡಳಿತಾತ್ಮಕ ವಿಭಾಗದಲ್ಲಿ 40 ಮೀ. ಉದ್ದ , 12 ಮೀ. ಅಗಲದ ಆಡಳಿತ ವಿಭಾಗದ ಕಟ್ಟಡ ನಿರ್ಮಾಣ, ಕಾನ್ಫರೆನ್ಸ್ ಹಾಲ್, ವರ್ಕ್ ಸೆಷನ್ ಕೊಠಡಿ, ಸಿಬಂದಿ ಕೊಠಡಿ, ಪುರುಷ ಮತ್ತು ಮಹಿಳೆಯರ ಶೌಚಾಲಯಗಳಿಗೆ ಅವಕಾಶ ಕಲ್ಪಿಸಿದೆ. ಕ್ರೀಡಾಂಗಣದ ಸುತ್ತಲೂ ರಕ್ಷಣೆಗಾಗಿ 1.50 ಮೀ. ಎತ್ತರಕ್ಕೆ ಆರ್‌ಸಿಸಿ ಫ್ರೀಕಾಸ್ಟ್ ಕಂಬ ಸಹಿತ ಜಿ.ಐ. ವಯರ್ ತಂತಿ ಬೇಲಿ ಅಳವಡಿಕೆ ಯೋಜನೆ ರೂಪಿಸಿದೆ. 500 ಮೀ. ಉದ್ದಕ್ಕೆ 0.60 ಮೀ.ನಂತೆ 1. 35 ಮೀ. ಅಳತೆಯ ಸಿಮೆಂಟ್ ಕಾಂಕ್ರೀಟ್ ಚರಂಡಿಯನ್ನು ಟ್ರ್ಯಾಕ್ ಸುತ್ತಲೂ ಒದಗಿಸಲು ಯೋಜನೆಯಲ್ಲಿ ರೂಪಿಸಿದೆ. ಇಲ್ಲಿನ ಮಣ್ಣನ್ನು ಸಮತಟ್ಟು ಮಾಡಿ ಅದರಿಂದಲೇ 400 ಮೀ. ಟ್ರ್ಯಾಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ಮಂಗಳೂರಿಂದ ಕ್ರೀಡಾಂಗಣಕ್ಕೆ ನೇರ ಸಂಪರ್ಕಿಸುವ ಬೈತುರ್ಲಿ-ನೀರುಮಾರ್ಗ-ಕಲ್ಪನೆ ಜಿಲ್ಲಾ ಮುಖ್ಯರಸ್ತೆಯಿಂದ 500 ಮೀ. ಉದ್ದದ ದ್ವಿಪಥ ಕೂಡು ರಸ್ತೆಯನ್ನು ಒಂದು ಮೋರಿ ಸಹಿತ ನಿರ್ಮಿಸಲು ಉದ್ದೇಶಿಸಲಾಗಿದೆ. ಕ್ರೀಡಾ ನಿವೇಶನದ ದಕ್ಷಿಣ ಭಾಗಕ್ಕೆ ಸೈಜ್ ಸ್ಟೋನ್ ಮೆಸ್ ಮಾದರಿ ತಡೆಗೋಡೆಯನ್ನು ಮೆಟ್ಟಿಲು ಸಹಿತ ಕಾಲುದಾರಿಯನ್ನು ಒದಗಿಸಲು ಕ್ರಮ ಕೈಗೊಂಡಿದೆ. ಕ್ರೀಡಾಂಗಣಕ್ಕೆ ವಿದ್ಯುತ್ ಸಂಪರ್ಕ, ನೀರು ಸರಬರಾಜು, ಸಮಯೋಚಿತ ಇತರ ಉದ್ದೇಶಕ್ಕೆ ಅನುದಾನ ವಿಂಗಡಿಸಿ ನೀಡಲಾಗಿದೆ. ಅಭಿವೃದ್ಧಿ ಕಾರ್ಯ
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕ ಎಲ್ಲ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಕ್ಕೆ ಬಂದಿವೆ. ಕೆಲವು ಅನುಷ್ಠಾನದಲ್ಲಿವೆ. ಇನ್ನು ಕೆಲವು ಹಂತಹಂತದಲ್ಲಿ ರೂಪುಗೊಳ್ಳುವುದು. ಜಿಲ್ಲಾ ಕೇಂದ್ರದಲ್ಲಿ ಇರುವಂತಹ ಕಚೇರಿಗಳಲ್ಲಿ ಬಹುತೇಕ ಬಂಟ್ವಾಳ ಕ್ಷೇತ್ರಕ್ಕೆ ಬಂದಿದೆ. ಇದರಿಂದ ಸಾರ್ವಜನಿಕರು ಜಿಲ್ಲಾ ಕೇಂದ್ರಕ್ಕೆ ಹೋಗಿ ಅಲೆದಾಡುವ, ಕೆಲಸಗಳಿಗೆ ಕಾದು ನಿಲ್ಲುವ ಸಮಯ, ಆರ್ಥಿಕ ವೆಚ್ಚ, ಶ್ರಮವನ್ನು ಕಡಿಮೆ ಮಾಡಿದಂತೆ ಆಗಿದೆ. ಕ್ರೀಡಾಂಗಣ ನಿರ್ಮಾಣ ನನ್ನ ಅಪೇಕ್ಷೆ ವಿಚಾರವಾಗಿತ್ತು.
– ಬಿ. ರಮಾನಾಥ ರೈ
ಜಿಲ್ಲಾ ಉಸ್ತುವಾರಿ ಸಚಿವರು ರಾಜಾ ಬಂಟ್ವಾಳ