ಆನಂದ್ ಸಿಂಗ್ ಅವರಿಗೆ ಅರಣ್ಯ, ಜೀವಿಶಾಸ್ತ್ರ -ಪರಿಸರ ಖಾತೆ
Advertisement
ಬೆಂಗಳೂರು: ಖಾತೆ ಹಂಚಿಕೆಯಾದ 24 ತಾಸುಗಳಲ್ಲೇ ಒಂಬತ್ತು ಸಚಿವರ ಖಾತೆಗಳು ಅದಲುಬದಲಾಗಿವೆ! ಖಾತೆ ಹಂಚಿಕೆಯ ಅನಂತರ ಬಹಿರಂಗವಾಗಿ ಬೇಸರ ವ್ಯಕ್ತಪಡಿಸದ ಸಚಿವರು ರಾತೋ ರಾತ್ರಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪ್ರಭಾವಿ ಖಾತೆಗಳಿಗೆ ಪಟ್ಟುಹಿಡಿದುದೇ ದಿಢೀರ್ ಬದಲಾವಣೆಗೆ ಕಾರಣ.
Related Articles
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಮವಾರ ಖಾತೆ ಹಂಚಿಕೆ ಮಾಡಿದ ಬಗ್ಗೆ ಡಾ| ಕೆ. ಸುಧಾಕರ್ ಮಾತ್ರ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಉಳಿದಂತೆ ಯಾರೂ ಬೇಸರವನ್ನು ಬಹಿರಂಗವಾಗಿ ತೋರ್ಪಡಿಸಿರಲಿಲ್ಲ. ಆದರೆ ಸೋಮವಾರ ರಾತ್ರಿ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಪ್ರಭಾವಿ ಖಾತೆಗೆ ಒತ್ತಡ ಹೇರಿದ್ದಾರೆ.
Advertisement
ಬಿ.ಸಿ. ಪಾಟೀಲ್, ಆನಂದ್ ಸಿಂಗ್ ಮತ್ತು ಕೆ. ಗೋಪಾಲಯ್ಯ ಸೋಮವಾರ ರಾತ್ರಿ ಯಡಿಯೂರಪ್ಪ ಅವರ ಡಾಲರ್ ಕಾಲನಿ ನಿವಾಸಕ್ಕೆ ದೌಡಾಯಿಸಿ ಈಗಿರುವ ಖಾತೆಗಿಂತ ಉತ್ತಮ ಖಾತೆ ನೀಡಬೇಕು ಎಂದು ಪಟ್ಟುಹಿಡಿದರು. ಹೀಗಾಗಿ ಯಡಿಯೂರಪ್ಪ ಸಚಿವರ ಮನವಿಗೆ ಮಣಿಯಬೇಕಾಯಿತು. ಸಚಿವ ಶಿವರಾಮ ಹೆಬ್ಟಾರ್ ಮಂಗಳವಾರ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಹೆಚ್ಚುವರಿ ಜವಾಬ್ದಾರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ.
ಪ್ರಥಮ ದರ್ಜೆ ಸಚಿವತಮಗೆ ವಹಿಸಿರುವ ಖಾತೆ ಬಗ್ಗೆ ಬಿ.ಸಿ. ಪಾಟೀಲ್ ಟ್ವಿಟರ್‌ನಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದರು. ಸಮರ್ಪಣ ದಿನ ಫೆ. 11, ಅಪ್ರತಿಮ ದೇಶಭಕ್ತ, ವಿದ್ವಾಂಸ, ಸಂಘಟನ ಕಾರ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯಂದು, ನನ್ನ ಗೌರವ ನಮನಗಳು ಎಂದು ಸಚಿವ ಬಿ.ಸಿ. ಪಾಟೀಲ್ ಮಂಗಳವಾರ ಬೆಳಗ್ಗೆ 10.45ಕ್ಕೆ ಟ್ವೀಟ್ ಮಾಡಿದ್ದರು. ಈ ಸಂಬಂಧ ಪೋಸ್ಟ್ ಹಾಕಿರುವ ಬಿ.ಸಿ.ಪಾಟೀಲ್, ತಮ್ಮ ಹೆಸರಿನ ಕೆಳಗೆ ಪ್ರಥಮ ದರ್ಜೆ ಸಚಿವರು ಎಂಬುದಾಗಿ ನಮೂದಿಸಿದ್ದರು. ತಮಗೆ ಹಂಚಿಕೆಯಾಗಿದ್ದ ಅರಣ್ಯ ಖಾತೆ ಹೆಸರು ಉಲ್ಲೇಖೀಸದೆ ಪ್ರಥಮ ದರ್ಜೆ ಸಚಿವ ಎಂಬುದಾಗಿ ಪೋಸ್ಟ್ ಹಾಕುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು. ಖಾತೆ ಪುನರ್ ಹಂಚಿಕೆ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಬಿ.ಸಿ. ಪಾಟೀಲ್, ಕೃಷಿ ಖಾತೆ ಸಿಕ್ಕಿದ್ದರಿಂದ ರೈತರ ಜತೆಗೆ ಇರುತ್ತೇನೆ. ಈ ಖಾತೆ ಸಿಗದೆ ಇರುತ್ತಿದ್ದರೆ ಪ್ರಾಣಿಗಳ ಜತೆ ಇರುತ್ತಿದ್ದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಕೆಲವು ಸಚಿವರ ಖಾತೆ ಬದಲಾವಣೆ ಮಾಡಿದ್ದರೆ ಇನ್ನು ಕೆಲವು ಸಚಿವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿದ್ದಾರೆ. ಆ ಮೂಲಕ ಖಾತೆ ಹಂಚಿಕೆ ಬಗ್ಗೆ ಅಪಸ್ವರ ಮುಂದುವರಿಯದಂತೆ ತಡೆಯುವ ನಿಟ್ಟಿನಲ್ಲಿ ಆರಂಭದಲ್ಲೇ ಕ್ರಮ ಕೈಗೊಂಡಿದ್ದಾರೆ. ಯಡಿಯೂರಪ್ಪ ಅವರ ಶಿಫಾರಸಿನಂತೆ ರಾಜ್ಯಪಾಲರು ಅಧಿಸೂಚನೆ ಹೊರಡಿಸಿದ್ದಾರೆ. ಬೇಸರ ವ್ಯಕ್ತಪಡಿಸಿದ್ದವರು ಮೌನ
ಸಚಿವ ಡಾ| ಕೆ. ಸುಧಾಕರ್ ಸೋಮವಾರ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದರು. ಅನಂತರ ಅವರು ಅಪಸ್ವರ ತೆಗೆದಂತಿಲ್ಲ. ಆದರೆ ಖಾತೆ ಹಂಚಿಕೆ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸದವರೇ ರಾತೋರಾತ್ರಿ ಸಿಎಂ ಮೇಲೆ ಒತ್ತಡ ಹೇರಿ ಪ್ರಭಾವಿ ಖಾತೆ ಪಡೆದುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಮೂಲ ಬಿಜೆಪಿಗರಲ್ಲಿ ಬೇಸರ
ಮುಖ್ಯಮಂತ್ರಿಗಳು ತಮ್ಮ ಪರಮಾಧಿಕಾರ ಬಳಸಿ ಮಾಡಿರುವ ಖಾತೆ ಹಂಚಿಕೆ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಿರುವುದು ಮೂಲ ಬಿಜೆಪಿಗರಲ್ಲಿ ಬೇಸರಕ್ಕೆ ಕಾರಣವಾಗಿದೆ. ಸಚಿವ ಸ್ಥಾನಕ್ಕೆ ಒತ್ತಡ ಹೇರಿ ಬಳಿಕ ಖಾತೆ ಹಂಚಿಕೆಯಾದ 24 ತಾಸುಗಳೊಳಗೆ ಬದಲಾವಣೆ ಮಾಡಿಸಿಕೊಳ್ಳುವುದು ಉತ್ತಮ ಸಂಪ್ರದಾಯವಲ್ಲ. ಇದರಿಂದ ಒತ್ತಡ ತಂತ್ರಗಳಿಗೆ ಮಣೆ ಹಾಕಿದಂತಾಗಲಿದ್ದು, ಆಡಳಿತದ ಮೇಲೆ ಪರಿಣಾಮ ಬೀರುವ ಅಪಾಯವಿದೆ ಎಂಬ ಆತಂಕ ಪಕ್ಷದ ವಲಯದಿಂದ ಕೇಳಿಬಂದಿದೆ.