Advertisement

ವಿಶ್ವವಿಖ್ಯಾತವಾದ ‘ಕಾರ್ಗಿಲ್‌ ಕಣಜ’ನಿಮ್ಮು ; ಪ್ರಧಾನಿ ಭೇಟಿಯಿಂದ ಪ್ರಸಿದ್ಧಿಯಾದ ಗ್ರಾಮ

02:40 AM Jul 04, 2020 | Hari Prasad |

ಹೊಸದಿಲ್ಲಿ/ಲಡಾಖ್‌: ನಿಮ್ಮು…. ಜಮ್ಮು ಮತ್ತು ಕಾಶ್ಮೀರದ ಪುಟ್ಟ ಗ್ರಾಮ ಕಾರ್ಗಿಲ್‌ ಯುದ್ಧದ ಸನ್ನಿವೇಶದಲ್ಲಿ ಭಾರತೀಯ ಯೋಧರಿಗೆ ಆಶ್ರಯ ನೀಡಿ ಮಹತ್ವದ ಜವಾಬ್ದಾರಿ ಮೆರೆದಿತ್ತು. ಈಗ ಸ್ಥಳ ಭಾರತಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೇ ಚಿರಪರಿಚಿತ. ಅದು ಹೇಗೆ…?

Advertisement

ಅದು ವಿಶ್ವನಾಯಕರಲ್ಲೊಬ್ಬರಾದ ಪ್ರಧಾನಿ ನರೇಂದ್ರ ಮೋದಿಯವರ ಕಮಾಲ್‌! ಶುಕ್ರವಾರ ಲೇಹ್‌ಗೆ ಭೇಟಿ ನೀಡಿದ ಅವರು, ಲೇಹ್‌ನಿಂದ 50 ಕಿ.ಮೀ. ದೂರದಲ್ಲಿರುವ ಈ ಗ್ರಾಮಕ್ಕೆ ಕಾಲಿಟ್ಟು ಬಂದಿದ್ದಾರೆ.

ಅಸಲಿಗೆ, ಇದು ಕೆಲವರಿಗಷ್ಟೇ ತಿಳಿದಿದ್ದ ಊರು. ಯಾರಿಗೆ… ಆ ಊರಿನವರಿಗೆ! ಅದು ಬಿಟ್ಟರೆ ಆ ಹಳ್ಳಿಯ ಹೆಸರು ಕೇಳಿದವರು ನಮ್ಮ ಯೋಧರು. ಅದನ್ನು ಮೀರಿ ಆ ಗ್ರಾಮದ ಹೆಸರನ್ನು ಕೇಳಿದವರೆಂದರೆ, ಅದು ಲೇಹ್‌ಗೆ ಹೋಗಿರುವ ಪ್ರವಾಸಿಗರಿಗೆ. ಅಷ್ಟು ಬಿಟ್ಟರೆ, ಉಳಿದ ಬಹುತೇಕ ಭಾರತೀಯರಿಗೆ ಅದರ  ಪರಿಚಯವೇ ಇರಲಿಲ್ಲ.

ಇಲ್ಲಿಯ ಜನಸಂಖ್ಯೆ 1,100 (2011ರ ಜನಸಂಖ್ಯೆಯ ಪ್ರಕಾರ). ಇಂಡಸ್‌ ಹಾಗೂ ಝಂಸ್ಕಾರ್‌ ನದಿಗಳ ಸಂಗಮದ ಜಾಗ. ಇಲ್ಲಿ ಜಲವಿದ್ಯುದಾಗಾರವೂ ಇದೆ. ವಿದ್ಯುತ್‌ ಉತ್ಪಾದನೆಗಾಗಿ ಕಟ್ಟಲಾಗಿರುವ ಅಣೆಕಟ್ಟಿನ ಹೆಸರು ನಿಮ್ಮು-ಬ್ಯಾಝ್ಗೋ ಡ್ಯಾಂ. ಇಲ್ಲಿ ಪ್ರವಾಸಿಗರು ರ್ಯಾಫ್ಟಿಂಗ್‌ ಕ್ರೀಡೆಯನ್ನೂ ಆಡುತ್ತಾರೆ.

ಕಾರ್ಗಿಲ್‌ಗ‌ೂ ಇದು ಹತ್ತಿರವೇ, ಸಮುದ್ರಮಟ್ಟಕ್ಕಿಂತ ಸುಮಾರು 11,000 ಅಡಿ ಎತ್ತರವಿರುವ ಈ ಗ್ರಾಮದ ಮಹತ್ವದ ಗೊತ್ತಾಗಿದ್ದು 1999ರಲ್ಲಿ ಘಟಿಸಿದ್ದ ಕಾರ್ಗಿಲ್‌ ಯುದ್ಧದಲ್ಲಿ. ಪಾಕಿಸ್ಥಾನದ ಸೇನೆಯ ವಿರುದ್ಧ ಹೋರಾಡುತ್ತಿದ್ದ ಭಾರತೀಯ ಯೋಧರಿಗೆ ಆಶ್ರಯ, ಅಗತ್ಯ ದಾಸ್ತಾನುಗಳಿಗೆ ಜಾಗ ಕಲ್ಪಿಸಿದ್ದೇ ಈ ಗ್ರಾಮ. ಅಸಲಿಗೆ ಇಲ್ಲಿ ಭಾರತೀಯ ಸೇನೆಯ 14ನೇ ಕಾರ್ಪ್ಸ್ ತುಕಡಿಯ ಕೇಂದ್ರ ಕಚೇರಿ ಇದೆ. ಇಲ್ಲಿನ ಮೂಲ ಸೌಕರ್ಯಗಳು ಭಾರತೀಯ ಯೋಧರಿಗೆ ನೆಲವೀಡಾಗಿದೆ.


‘ನಿಮ್ಮುವಿನಲ್ಲಿ ವಿಶಾಲವಾದ ಹೆಲಿಪ್ಯಾಡ್‌ ಇದೆ. ಒಟ್ಟಿಗೆ ನಾಲ್ಕು ಹೆಲಿಕಾಪ್ಟರ್‌ಗಳು ಇಲ್ಲಿ ಇಳಿಯಬಹುದು. ಪ್ರಧಾನಿ­ಯಂಥ ಗಣ್ಯ ವ್ಯಕ್ತಿಗಳು ಭಾಗವಹಿಸುವ ಸಮಾರಂಭಗಳನ್ನು ನಿರ್ವಹಿಸುವಷ್ಟು ಜಾಗ, ಮೂಲಭೂತ ಸೌಕರ್ಯಗಳು ಇಲ್ಲಿವೆ.

Advertisement

ಇದೆಲ್ಲವನ್ನೂ ಮನದಟ್ಟು ಮಾಡಿಕೊಂಡೇ ಪ್ರಧಾನಿಯವರ ಭೇಟಿಯನ್ನು ನಿಗದಿಗೊಳಿಸಲಾಯಿತು’ ಎಂದು ಇಂಡೋ ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ನ (ಐಟಿಬಿಪಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾದರ್ನ್ ಆರ್ಮಿಯ ಮಾಜಿ ಕಮಾಂಡರ್‌ ಡಿ.ಎಸ್‌. ಹೂಡಾ ಮಾತನಾಡಿ, “ಗಡಿ ಭಾಗದ ವೃತ್ತಾಂತವನ್ನು ವಿವರಿಸಲು ನಿಮು ಸೂಕ್ತವಾದ ಪ್ರದೇಶ. ಇಲ್ಲಿ ಪ್ರಧಾನಿಯಂಥ ಗಣ್ಯ ವ್ಯಕ್ತಿಗೆ ಗಡಿ ಪ್ರದೇಶದ ಬಗ್ಗೆ ವಿವರಣೆ ನೀಡಬಹುದಲ್ಲದೆ, ಅವರಿಗೆ ವಿಷಯ ಮನದಟ್ಟು ಮಾಡಿ­ಸಲು ಇದು ಸೂಕ್ತವಾದ ಪ್ರದೇಶವಾಗಿದೆ” ಎಂದಿದ್ದಾರೆ.

ವಾರ್ಡ್‌ಗಳಿಗೆ ಹುತಾತ್ಮರ ಹೆಸರು
ದೇಶದ ಅತಿ ದೊಡ್ಡ ಕೋವಿಡ್ 19 ಕೇರ್‌ ಸೆಂಟರ್‌ ಎನಿಸಿರುವ ದೆಹಲಿಯ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಆಸ್ಪತ್ರೆಯ ವಾರ್ಡ್‌ಗಳಿಗೆ, ಜೂ. 15ರಂದು ಗ್ಯಾಲ್ವಾನ್‌ನಲ್ಲಿ ಚೀನದ ಸೈನಿಕರಿಂದ ಹುತಾತ್ಮರಾದ ಭಾರತದ 20 ಯೋಧರ ಹೆಸರುಗಳನ್ನು ಇಡಲು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಿರ್ಧರಿಸಿದೆ.

ದಕ್ಷಿಣ ದೆಹಲಿಯ ರಾಧಾ ಸೋಮಿ ಸತ್ಸಂಗ ಮಂದಿರವನ್ನು 1,000 ಹಾಸಿಗೆ ಸಾಮರ್ಥ್ಯದ ಕೊರೊನಾ ಕೇರ್‌ ಸೆಂಟರ್‌ ಆಗಿ ಪರಿವರ್ತಿಸಲಾಗಿದ್ದು, ಅದಕ್ಕೆ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಆಸ್ಪತ್ರೆ ಎಂದು ಹೆಸರಿಡಲಾಗಿದೆ.


ಭಾರತಕ್ಕೆ ಜಪಾನ್‌ ಬೆಂಬಲ
ಗಡಿಬಿಕ್ಕಟ್ಟಿನಲ್ಲಿ ಜಪಾನ್‌ ಭಾರತದ ಬೆಂಬಲಕ್ಕೆ ನಿಂತಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್‌ ಶ್ರಿಂಗ್ಲಾರನ್ನು ಭೇಟಿ ಮಾಡಿದ ಬಳಿಕ ಜಪಾನ್‌ ರಾಯಭಾರಿ ಸಾತೋಶಿ ಸುಜುಕಿ ಈ ನಿಲುವು ವ್ಯಕ್ತಪಡಿಸಿದ್ದಾರೆ.

‘ಶಾಂತಿಯುತ ವಾತಾವರಣಕ್ಕೆ ಒತ್ತುಕೊಡುವ ಭಾರತ ನಿಲುವನ್ನು ಜಪಾನ್‌ ಶ್ಲಾಘಿಸುತ್ತದೆ. ಲಡಾಖ್‌ ಬಿಕ್ಕಟ್ಟು ಶಾಂತಿಯುತವಾಗಿ ಬಗೆಹರಿಯಲಿ ಎಂದು ಆಶಿಸುತ್ತಿದೆ ಎಂದು ಟ್ವೀಟ್‌ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉತ್ತರಾಖಾಂಡ ಗಡಿಯುದ್ದಕ್ಕೂ ಇರುವ ಬಿಒಪಿಗಳು
ಭಾರತದ ಗಡಿಯಂಚಿನಲ್ಲಿರುವ ಭೂ ಭಾಗಗಳನ್ನು ತನ್ನ ಗಡಿಯೊಳಗೆ ಇರುವಂತೆ ಭೂಪಟವನ್ನು ಇತ್ತೀಚೆಗೆ ಪ್ರಕಟಿಸಿದ್ದ ನೇಪಾಲ, ಈಗ ಭಾರತದ ಗಡಿಯುದ್ದಕ್ಕೂ ಹೊಸದಾದ ನಾಲ್ಕು ಬಾರ್ಡರ್‌ ಪೋಸ್ಟ್‌ಗಳನ್ನು (ಬಿಒಪಿ) ಸ್ಥಾಪಿಸಿದೆ. ಇವೂ ಸೇರಿ, ಮೇ 8ರಿಂದ ಇಲ್ಲಿಯವರೆಗೆ ನೇಪಾಲ, ಗಡಿಯಲ್ಲಿ 7 ಪೋಸ್ಟ್‌ ಗಳನ್ನು ನಿರ್ಮಿಸಿದಂತಾಗಿದೆ.

ಈ ಎಲ್ಲಾ ಬಾರ್ಡರ್‌ ಪೋಸ್ಟ್‌ಗಳೂ ಭಾರತದ ಉತ್ತರಾಖಾಂಡ ರಾಜ್ಯದ ಗಡಿ ಭಾಗಕ್ಕೆ ಹೊಂದಿಕೊಂಡಂತಿರುವುದು ಗಮನಾರ್ಹ. ನೇಪಾಲ ಗಡಿ ಭಾಗದಲ್ಲಿ ಭಾರತ, ತನ್ನ ವ್ಯಾಪ್ತಿಯೊಳ­ಗಿನ ಪ್ರದೇಶದಲ್ಲಿ ಘಟಿಯಾಬಗಾರ್‌-ಲಿಪುಲೇಖ್‌ ಸಂಪರ್ಕ ರಸ್ತೆಯನ್ನು ಮೇ 8ರಂದು ಉದ್ಘಾಟಿಸಿತು. ಅಲ್ಲಿಂದ ಇಲ್ಲಿಯವರೆಗೆ ನೇಪಾಲದ ಕಡೆಯಿಂದ ಈ ಪೋಸ್ಟ್‌ಗಳ ನಿರ್ಮಾಣವಾಗಿದೆ.

ಇಂದು ಓಲಿ ಭವಿಷ್ಯ ನಿರ್ಧಾರ?
ನೇಪಾಲ ಪ್ರಧಾನಿ ಕೆ.ಪಿ. ಓಲಿಯವರ ರಾಜಕೀಯ ಭವಿಷ್ಯ ಇದೇ ಶನಿವಾರ ನಿರ್ಧಾರವಾಗಲಿದೆ. ನೇಪಾಲ ಕಮ್ಯೂನಿಸ್ಟ್‌ ಪಾರ್ಟಿಯ (ಎನ್‌ಸಿಪಿ) ಸ್ಥಾಯಿ ಸಮಿತಿ ಸಭೆ ನಡೆಯಲಿದ್ದು, ಅವರನ್ನು ಪ್ರಧಾನಿ ಪಟ್ಟದಲ್ಲಿ ಮುಂದುವರಿಸಬೇಕೇ, ಬೇಡವೇ ಎಂದು ನಿರ್ಧರಿಸಲಿದ್ದಾರೆ.


ರಾಯಭಾರಿಯ ತುಪ್ಪ ಸುರಿವ ಕೆಲಸ
ಭಾರತದೊಂದಿಗೆ ವಿವಾದದ ಬೆಂಕಿ ಹಚ್ಚೋದು, ಅದಕ್ಕೆ ತುಪ್ಪ ಸುರಿಯೋದು…

– ನೇಪಾಲದ ಚೀನ ರಾಯಭಾರಿ ಹೌ ಯಾಂಗಿ ಈ ಎರಡೂ ಕೆಲಸವನ್ನು ಒಟ್ಟೊಟ್ಟಿಗೆ ಮಾಡುತ್ತಿದ್ದಾರೆ. ವಿವಾದಿತ ನಕ್ಷೆಯ ಹಿಂದಿನ ಸೂತ್ರಧಾರಿಯಾಗಿದ್ದ ಹೌ ಈಗ ನೇಪಾಲವನ್ನು ಭಾರತದ ವಿರುದ್ಧ ರೊಚ್ಚಿಗೇಳಿಸಲು ಹಗಲುರಾತ್ರಿ ಷಡ್ಯಂತ್ರ ರೂಪಿಸುತ್ತಿದ್ದಾರೆ.

ನೇಪಾಲದ ಮುಖಂಡರನ್ನು ಹೌ ಈ ಒಂದು ವಾರದಲ್ಲಿ ಸರದಿ ಪ್ರಕಾರ ಬುಟ್ಟಿಗೆ ಹಾಕಿಕೊಂಡಿದ್ದಾರೆ. ನೇಪಾಲ ಅಧ್ಯಕ್ಷೆ ದೇವಿ ಭಂಡಾರಿಯನ್ನು ವಿಶೇಷ ಔತಣ ಕೂಟಕ್ಕೆ ಆಹ್ವಾನಿಸಿದ್ದಾರೆ. ಪ್ರವಾಸ ಸಚಿವ ಯೋಗೇಶ್‌ ಭಟ್ಟಾರೈ ಅವರೊಂದಿಗೆ ಭರ್ಜರಿ ಔಟ್‌ಡೋರ್‌ ಫೋಟೋಶೂಟ್‌ ನಡೆಸಿ, ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ.


ಅಮೆರಿಕ ಸಂಸದರ ಟೀಕೆ
ಚೀನಕ್ಕೆ ಅಮೆರಿಕ ಮತ್ತೆ ಛೀಮಾರಿ ಹಾಕಿದೆ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನೇತೃತ್ವದ ಚೀನ ಭಾರತದ ಮೇಲೆ ಆಕ್ರಮಣಕಾರಿ ವಿದೇಶಾಂಗ ನೀತಿಯನ್ನು ಹೆಚ್ಚಿಸಿದೆ. ಗಡಿಯಲ್ಲಿ ಶಾಂತಿ ನೆಲೆಸುವುದನ್ನು ಕಮ್ಯುನಿಸ್ಟ್‌ ಚೀನ ತಡೆಯುತ್ತಿದೆ ಎಂದು ಯುಎಸ್‌ ಸಂಸದರ ಆಯೋಗ ಆರೋಪಿಸಿದೆ.

“ಹೊಸದಿಲ್ಲಿ ಮತ್ತು ಚೀನ ಇತ್ತೀಚಿನ ವರ್ಷಗಳಲ್ಲಿ ಸರಣಿ ಒಪ್ಪಂದಗಳಿಗೆ ಸಹಿಹಾಕಿವೆ. ಆದರೆ ಚೀನ ಎಲ್‌ಎಸಿಯಲ್ಲಿ ಗಡಿನಿಯಮ ಪಾಲಿಸುತ್ತಿಲ್ಲ. ಜಿನ್‌ಪಿಂಗ್‌ ಅಧಿಕಾರ ವಹಿಸಿಕೊಂಡ ಮೇಲಂತೂ ಈ ಉಪಟಳ ಇನ್ನೂ ಹೆಚ್ಚಾಗಿದೆ’ ಎಂದು ಕಟುವಾಗಿ ಟೀಕಿಸಿದೆ.

ಭಾರತದ ಸುದ್ದಿವಾಹಿನಿಗೆ ಚೀನ ನಿರ್ಬಂಧ
59 ಆ್ಯಪ್‌ಗಳ ಸರ್ಜಿಕಲ್‌ ಸ್ಟ್ರೈಕ್‌ಗೆ ಪ್ರತೀಕಾರವಾಗಿ ಚೀನ ಭಾರತದ ‘ವಿಯಾನ್‌’ ಸುದ್ದಿವಾಹಿನಿಯ ವೆಬ್‌ಸೈಟನ್ನು ನಿರ್ಬಂಧಿಸಿದೆ. ಚೀನದ ಅಂತರ್ಜಾಲ ವಾಚ್‌ಡಾಗ್‌ ಆಗಿರುವ ಗ್ರೇಟ್‌ಫೈರ್‌.ಆರ್ಗ್‌ “ಭಾರತದ ವಿಯಾನ್‌ ಚಾನಲ್‌ನ ಜಾಲತಾಣ ಪ್ರವೇಶ ಚೀನದಲ್ಲಿ ಇನ್ನು ಲಭ್ಯವಿರುವುದಿಲ್ಲ’ ಎಂದು ಹೇಳಿಕೊಂಡಿದೆ.

ದಕ್ಷಿಣ ಏಷ್ಯಾದಲ್ಲಿ ಹೆಚ್ಚು ಪ್ರಭಾವ ಹೊಂದಿದ್ದ ವಿಯಾನ್‌ ಸುದ್ದಿವಾಹಿನಿಗೆ ಚೀನದಲ್ಲಿ ಸಾಕಷ್ಟು ವೀಕ್ಷಕರಿದ್ದರು. ಚೀನದಲ್ಲಿನ ಕೋವಿಡ್ 19 ಕರ್ಮಕಾಂಡದ ಬಗ್ಗೆ ಬೆಚ್ಚಿಬೀಳಿಸುವ ವರದಿಗಳನ್ನು ವಿಯಾನ್‌ ಪ್ರಸಾರ ಮಾಡಿತ್ತು. ಆಗಲೂ ವಿಯಾನ್‌ ವಿರುದ್ಧ ಚೀನ ಆಕ್ರೋಶ ಹೊರಹಾಕಿತ್ತು.


ಶಿವಸೇನೆ ಶಹಬ್ಟಾಶ್‌
ಶಿವಸೇನೆ ಪ್ರಧಾನಿ ಮೋದಿ ಅವರ ಎಲ್‌ಎಸಿ ಭೇಟಿಯನ್ನು ಮುಕ್ತ ಕಂಠದಿಂದ ಸ್ವಾಗತಿಸಿದೆ. ‘ಇಂಥ ಸಂದಿಗ್ಧ ಸ್ಥಿತಿಯಲ್ಲಿ ಮೋದಿ ಅವರ ಲೇಹ್‌ ಭೇಟಿ ಅತಿಮುಖ್ಯವಾಗಿದೆ. ಸೈನಿಕರ ಜತೆ ನಿಲ್ಲುವ ಮೂಲಕ ಒಗ್ಗಟ್ಟಿನ ಸಂದೇಶ ರವಾನಿಸಿದಂತಾಗಿದೆ’ ಎಂದು ಶ್ಲಾಘಿಸಿದೆ.

ವೀರ್‌ ಭೋಗ್ಯ ವಸುಂಧರ ಎಂಬ ಮೋದಿಯವರ ಮಾತುಗಳು ಭಾರತದ 130 ಕೋಟಿ ಜನರ ಭಾವನೆ ಸಂಕೇತ. ಅಷ್ಟೇ ಅಲ್ಲ, ಭಾರತೀಯ ಯೋಧರ ಆತ್ಮಸ್ಥೈರ್ಯವನ್ನು ಹೆಚ್ಚಿಸುವಂಥ ನುಡಿಗಳು.
– ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ

ಇನ್ನು ಮುಂದೆ ಚೀನ ಅಲ್ಲದೆ ಪಾಕಿ ಸ್ತಾನದಿಂದಲೂ ಯಾವುದೇ ಉಪಕರಣಗಳನ್ನು ಆಮದು ಮಾಡಿಕೊಳ್ಳುವುದಿಲ್ಲ. ದೇಶೀಯವಾಗಿ ವಿದ್ಯುತ್‌ ಉಪಕರಣಗಳನ್ನು, ಬಿಡಿಭಾಗಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
– ಆರ್‌.ಕೆ. ಸಿಂಗ್‌, ಇಂಧನ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next