ಕೊಪ್ಪಳ: ಸಿಎಂ ಕುಮಾರಸ್ವಾಮಿ 2007ರಲ್ಲಿ ಕೊಪ್ಪಳ ತಾಲೂಕಿನ ಗಡಿ ಗ್ರಾಮ ನಿಲೋಗಿಪುರದಲ್ಲಿ ‘ಗ್ರಾಮ ವಾಸ್ತವ್ಯ’ ಮಾಡಿ ಜನರ ಸಮಸ್ಯೆ ಆಲಿಸಿದ್ದರು. ಆದರೆ, ಸಿಎಂ ವಾಸ್ತವ್ಯದ ಗ್ರಾಮವೇ ದಶಕ ಗತಿಸಿದರೂ ಅಭಿವೃದ್ಧಿ ಕಂಡಿಲ್ಲ. ಚರಂಡಿ, ಕುಡಿಯುವ ನೀರು, ಸಾರಿಗೆ, ಮಹಿಳೆಯರ ಪರದಾಟಕ್ಕೆ ಇನ್ನೂ ಕೊನೆಯಾಗಿಲ್ಲ.
ಸಿಎಂ ಗ್ರಾಮ ವಾಸ್ತವ್ಯಕ್ಕೆ ಬರ್ತಾರೆ ಅಂತಾ ಊರಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಆ ಬಳಿಕವೂ ನಮ್ಮ ನರಳಾಟ ತಪ್ಪಿಲ್ಲ. ಮಹಿಳೆಯರ ಪರಿಸ್ಥಿತಿ ಈಗಲೂ ಹೇಳದಂತಹ ಸ್ಥಿತಿಯಲ್ಲಿದೆ. ಶೌಚಾಲಯಕ್ಕೆ ತೆರಳಬೇಕೆಂದರೂ ಸಂಜೆ, ರಾತ್ರಿವರೆಗೆ ಕಾಯಬೇಕು. ಮನೆ ಮುಂದೆ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಬೇಕೆಂದರೆ ಜಾಗದ ಸಮಸ್ಯೆ. ಕನಿಷ್ಟ ಗ್ರಾಪಂ ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಿಸಿಲ್ಲ.
ತುಂಗಭದ್ರಾ ಹಿನ್ನೀರು ನಿಲೋಗಿಪುರದಿಂದ ಕೇವಲ ಅರ್ಧ ಕಿಮೀ ಅಂತರದಲ್ಲಿದೆ. ಆದರೆ, ನಮ್ಮೂರಿನ ಕೃಷಿ ಭೂಮಿಗೆ ನೀರಾವರಿ ಸೌಲಭ್ಯವಿಲ್ಲ. ಗ್ರಾಮ ವಾಸ್ತವ್ಯ ಮಾಡಿದ್ದ ವೇಳೆ ಸಿಎಂಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದೆವು. ನಮ್ಮ ಬೇಡಿಕೆ ದಶಕ ಕಳೆದರೂ ಯಾರೊಬ್ಬರೂ ಈಡೇರಿಸಿಲ್ಲ.ಮಾರುತೇಶ್ವರ ದೇವಸ್ಥಾನದ ಬಳಿ ಬೋರ್‌ವೆಲ್ ಇದ್ದು, ಅದೇ ನೀರೇ ನಮಗೆ ಕುಡಿಯಲು ಆಸರೆಯಾಗುತ್ತಿದೆ ಎನ್ನುತ್ತಿದ್ದಾರೆ ಜನತೆ.
ಗ್ರಾಮದಲ್ಲಿ ಅಲ್ಲಲ್ಲಿ ಸಿಸಿ ರಸ್ತೆ ನಿರ್ಮಿಸಿದ್ದು ಬಿಟ್ಟರೆ ಮತ್ತೆ ಹೇಳಿಕೊಳ್ಳುವ ಅಭಿವೃದ್ಧಿ ನಡೆದಿಲ್ಲ. ಚರಂಡಿಗಳಂತೂ ಗಬ್ಬೆದ್ದು ನಾರುತ್ತಿವೆ. ಗ್ರಾಪಂ ಕಾರ್ಮಿಕರು ವರ್ಷಕ್ಕೆ ಒಂದು ಬಾರಿ ಚರಂಡಿ ಸ್ವಚ್ಛ ಮಾಡಿದರೂ ಅಚ್ಚರಿ. ಎಲ್ಲೆಂದರಲ್ಲಿ, ಊರು ಮಧ್ಯೆ ಖಾಲಿ ನಿವೇಶನಗಳಲ್ಲೇ ತಿಪ್ಪೆಗುಂಡಿ, ಮೇವಿನ ಬಣವೆ ಹಾಕಿ ನೈರ್ಮಲ್ಯ ಹಾಳು ಮಾಡಿದ್ದಾರೆ. ಹೈಸ್ಕೂಲ್, ಗ್ರಂಥಾಲಯ, ವಸತಿ ನಿಲಯ ಮಂಜೂರು ಮಾಡುವ ಬೇಡಿಕೆ ಇದುವರೆಗೂ ಈಡೇರಿಲ್ಲ.
•ದತ್ತು ಕಮ್ಮಾರ