ಮಂಜೂರಾದ ಯೋಜನೆ ಕೈಬಿಡಲು ಜನರಿಂದ ನಿಂದನೆಗಳು ಕಾರಣ ಎಂದು ಸರ್ಕಾರ ಹೇಳುತ್ತಿದೆ. ನಿಂದನೆಯ ಕಾರಣಕ್ಕೆ ಸರ್ಕಾರ ಯೋಜನೆ ಕೈಬಿಡಬಾರದು. ಬದಲಾಗಿ ಯೋಜನೆ ವಿರುದ್ಧ ಕೇಳಿಬರುತ್ತಿರುವ ನಿಂದನೆಗಳು ಅಥವಾ ವಾದಗಳೇ ಸುಳ್ಳು ಎಂದು ಸಾಬೀತು ಮಾಡಬೇಕು.
ಯಾವುದೋ ಒಂದು ವರ್ಗದ ವಿರೋಧಕ್ಕೆ ಇಡೀ ಯೋಜನೆಯನ್ನೇ ಏಕಾಏಕಿ ಕೈಬಿಡುವುದು ಎಷ್ಟು ಸರಿ? ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾತ್ರವಲ್ಲ; ಎಂಇಎಸ್, ಜ್ಞಾನಜ್ಯೋತಿ, ನಾಗಾರ್ಜುನ, ಸಿಂಧಿ ಕಾಲೇಜು, ಕಾವೇರಿ ಪ್ರಥಮದರ್ಜೆ ಮತ್ತು ಪಿಯು ಕಾಲೇಜು ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳು, ನೂರಾರು ಬಡಾವಣೆಗಳು ಇಲ್ಲಿವೆ.
ಆ ಜನ ಎದುರಿಸುತ್ತಿರುವ ಸಮಸ್ಯೆಯ ಅರಿವು ಯೋಜನೆ ವಿರೋಧಿಸುವವರಿಗೆ ಇದೆಯೇ? ಪರೀಕ್ಷಾ ಸಮಯದಲ್ಲಿ ಆ ಭಾಗದ ಶಾಲಾ ಮಕ್ಕಳನ್ನು ಎರಡೂವರೆ ತಾಸು ಮುಂಚಿತವಾಗಿಯೇ ಪೋಷಕರು ಶಾಲೆಗೆ ಬಿಟ್ಟು ಹೋಗುವ ಸ್ಥಿತಿ ಇದೆ. ವಿದ್ಯಾರ್ಥಿಗಳು ನಿತ್ಯ ಮೂರು ತಾಸು ಹೆಬ್ಟಾಳ ರಸ್ತೆಯಲ್ಲಿ ಕಳೆಯುತ್ತಾರೆ. ಇದನ್ನು ಯಾರಿಗೆ ಹೇಳುವುದು?
ಉಕ್ಕಿನ ಸೇತುವೆಯೇ ಆಗಬೇಕು ಎಂಬ ಹಠ ನಮ್ಮದಲ್ಲ. ಕಾಂಕ್ರೀಟ್ ಸೇತುವೆ ಅಥವಾ ಮೆಟ್ರೋ ಮಾರ್ಗ ನಿರ್ಮಿಸಲಿ. ಅಲ್ಲಿಯವರೆಗೆ ಈ ಮಾರ್ಗದಲ್ಲಿ ತುಂಬಾ ಸಮಸ್ಯೆ ಇರುವ ಜಾಗಗಳಾದ ಮೇಕ್ರಿ ವೃತ್ತ, ಕಾವೇರಿ ಜಂಕ್ಷನ್, ಹೆಬ್ಟಾಳದ ಎಸ್ಟೀಮ್ ಮಾಲ್ ಬಳಿ ರಸ್ತೆ ವಿಸ್ತರಣೆ ಮಾಡಿ, ತಾತ್ಕಾಲಿಕ ಪರಿಹಾರ ನೀಡಬೇಕು.
ಇದಲ್ಲದೆ, ಖಾಸಗಿ ಬಸ್‌ಗಳನ್ನು ಯಲಹಂಕ ಬಳಿಯೇ ಸ್ಥಗಿತಗೊಳಿಸಿ, ಬಿಎಂಟಿಸಿ ಬಸ್‌ಗಳನ್ನು ಈ ಮಾರ್ಗದಲ್ಲಿ ಎಂದಿನಂತೆ ಸಂಚರಿಸಲು ಅವಕಾಶ ಕಲ್ಪಿಸಬೇಕು. ಆಗ, ತಕ್ಕಮಟ್ಟಿಗೆ ವಾಹನದಟ್ಟಣೆ ನಿಯಂತ್ರಣಕ್ಕೆ ಬರುತ್ತದೆ.
ಡಾ.ಇ.ವಿ.ರಾಜೇಶ್, ಪ್ರಾಂಶುಪಾಲರು, ಕಾವೇರಿ ಬಿಇಡಿ ಕಾಲೇಜು, ಸಹಕಾರ ನಗರ