Advertisement

ನೀಲಗಿರಿ ಎಂಬ ಬಕಾಸುರ

09:27 AM Jul 10, 2019 | Suhan S |

ಧಾರವಾಡ: ಒಂದು ನೀಲಗಿರಿ ಸಸಿ ನೆಟ್ಟರೆ ಹರಿಯುವ ಹಳ್ಳಕ್ಕೆ ಒಂದು ನೀರೆತ್ತುವ ಪಂಪ್‌ಸೆಟ್ ಇಟ್ಟಂತೆ. ದಿನವೊಂದಕ್ಕೆ 15 ಮೀಟರ್‌ ಎತ್ತರದ ಒಂದು ನೀಲಗಿರಿ ಗಿಡ ಬರೊಬ್ಬರಿ 20 ಲೀಟರ್‌ ನೀರು ಕುಡಿಯುತ್ತದೆ. ಇನ್ನು ಲಕ್ಷ ಲಕ್ಷ ಸಂಖ್ಯೆಯಲ್ಲಿ ನೆಟ್ಟಿರುವ ನೀಲಗಿರಿಗೆ ದಿನಕ್ಕೆ ಎಷ್ಟು ಕೋಟಿ ಲೀಟರ್‌ ನೀರು ಬೇಕಾಗಬಹುದು ನೀವೇ ಊಹಿಸಿ.

Advertisement

ಇದು ನೀಲಗಿರಿ ಎಂಬ ಜಲಬಕಾಸುರನಿಗೆ ಜಿಲ್ಲೆಯ ಜೀವ ಸಂಕುಲ ಮತ್ತು ಅಂತರ್ಜಲ ಬಲಿಯಾದ ದುರಂತ ಕತೆ.

ಜಿಲ್ಲೆಯಲ್ಲಿ ಮೊದಲು ನೈಸರ್ಗಿಕ ಕಾಡು ಮತ್ತು ದೇಶಿ ಸಸ್ಯಗಳ ಸಂಪತ್ತು ಅಧಿಕವಾಗಿತ್ತು. 80ರ ದಶಕದಲ್ಲಿ ಕಂದಾಯ ಇಲಾಖೆಗೆ ಸೇರಿದ ಸುಮಾರು 5 ಸಾವಿರ ಎಕರೆಗೂ ಅಧಿಕ ಜಾಗದಲ್ಲಿ ನೀಲಗಿರಿ ತೋಪುಗಳನ್ನು ಬೆಳೆಸಲಾಯಿತು. ನೀಲಗಿರಿ ಬೆಳೆದ ಸ್ಥಳದಲ್ಲಿ ಇಂದು ಬೇರೆ ಯಾವ ಸಸ್ಯವೂ ಜೀವಂತವಾಗಿಲ್ಲ. ಅದೊಂದು ಗೂಂಡಾ ಬೆಳೆಯಾಗಿ ಸೆಟೆದು ನಿಂತಿದೆಯಷ್ಟೇ.

ಮೊದಲು ಇಲ್ಲಿನ ಸಣ್ಣ ಕೆರೆ ಕುಂಟೆಗಳು,ಒರತೆ ಮತ್ತು ನೀರಿನ ಬಾವಿಗಳಲ್ಲಿ ಜನವರಿ ತಿಂಗಳಿನವರೆಗೂ ತಿಳಿಯಾದ ಮತ್ತು ಕುಡಿಯಲು ಯೋಗ್ಯವಾದ ಅಂತರ್ಜಲವಿರುತ್ತಿತ್ತು. ಯಾವಾಗ ನೀಲಗಿರಿ ತೋಪುಗಳು ಎತ್ತರಕ್ಕೆ ಬೆಳೆಯಲಾರಂಭಿಸಿದವೋ, ಅದರ ಹತ್ತು ಪಟ್ಟು ಆಳಕ್ಕೆ ಅಂತರ್ಜಲ ಕುಸಿಯುತ್ತ ಹೋಯಿತು. ಇದೀಗ ನೀಲಗಿರಿ ತೋಪುಗಳ ಸುತ್ತಲಿನ ಭೂಮಿಯಲ್ಲಿ ಕನಿಷ್ಠ 400 ಅಡಿಗೆ ಅಂತರ್ಜಲ ಕುಸಿದು ಹೋಗಿದೆ. ಬಾವಿಗಳು ಬತ್ತಿ ಹೋಗಿವೆ. ಕೊಳವೆ ಬಾವಿಗಳು ಕೂಡ ಮಳೆಗಾಲದಲ್ಲಿ ಮಾತ್ರ ನೀರು ಹೊರ ಹಾಕುತ್ತಿವೆ. ಬರಗಾಲ ದೂರದ ಮಾತು, ಬೇಸಿಗೆ ಕಾಲ ಬಂತೆಂದರೆ ಸಾಕು ಬೋರ್‌ವೆಲ್ಗಳು ಬಿಕ್ಕಳಿಕೆ ಶುರು ಮಾಡುತ್ತಿವೆ. ಪೇಪರ್‌ಮಿಲ್ ಮತ್ತು ಮನೆ ಬಳಕೆ, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಅಗ್ಗಕ್ಕೆ ಸಿಕ್ಕುವ ನೀಲಗಿರಿ ಕಟ್ಟಿಗೆ ಉತ್ತಮ ಎಂದು ಬಿಂಬಿಸಿಯೇ ಇದನ್ನು ಎಲ್ಲೆಂದರಲ್ಲಿ ನೆಡಲಾಗಿದೆ. ಜಿಲ್ಲೆಯಲ್ಲಿನ ಸೂಕ್ಷ್ಮ ಜೀವಿಗಳ ವಲಯಗಳೆಲ್ಲವೂ ನೀಲಗಿರಿ ಮತ್ತು ಅಕೇಶಿಯಾದಿಂದ ಆವೃತವಾದ ನಂತರ ಅಲ್ಲಿನ ಜೈವಿಕ ಪರಿಸರವೇ ದಿಕ್ಕೆಟ್ಟು ಹೋಗಿದೆ. ಬಣದೂರು ವ್ಯಾಪ್ತಿಯಲ್ಲಿ ಅತೀ ಹೆಚ್ಚು ನವಿಲುಗಳು ಓಡಾಡುತ್ತಿದ್ದ ಕಾಡಿನ ಮಧ್ಯ ಆಕೇಶಿಯಾ ತೋಪುಗಳು ಮೇಲೆದ್ದಿದ್ದರಿಂದ ಅಲ್ಲಿ ನವಿಲು, ಜಿಂಕೆಗಳ ಸಂಖ್ಯೆಯೇ ಕುಸಿದು ಹೋಗಿದೆ.

ಕಾಡಿನ ಮಧ್ಯ ತೂರಿ ಬಂದ ನೀಲಗಿರಿ: ಬರೀ ನೆಡುತೋಪುಗಳಿಗೆ ಸೀಮಿತವಾಗಿದ್ದರೆ ನೀಲಗಿರಿ ನಂತರದ ಬರ ಕಾಮಗಾರಿಗಳ ಸಂದರ್ಭದಲ್ಲಿ ಜಿಲ್ಲೆಯ ಪಶ್ಚಿಮಘಟ್ಟದ ಕಾಡುಗಳನ್ನು ಆವರಿಸಿಕೊಂಡಿತು. ಇಲ್ಲಿನ ಹೊಲ್ತಿಕೋಟೆ, ಹುನಸಿಕುಮರಿ, ಕಲಕೇರಿ, ಬಣದೂರಿನಲ್ಲಿರುವ ಸಾಗವಾನಿ ಮತ್ತು ಕರಿಮತ್ತಿಯ ದಟ್ಟಾರಣ್ಯದ ಮಧ್ಯದಲ್ಲಿಯೇ ನೀಲಗಿರಿ ಗಿಡಗಳನ್ನು ನೆಟ್ಟು ಪೋಷಿಸಲಾಯಿತು. ಅರಣ್ಯದ ಮಧ್ಯದ ಗುಂಡಿಗಳಲ್ಲಿ ನಿಲ್ಲುತ್ತಿದ್ದ ಮತ್ತು ತೆಳುವಾಗಿ ಹರಿಯುತ್ತಿದ್ದ ನೀರನ್ನೆಲ್ಲ ನೀಲಗಿರಿ ಗಿಡಮರಗಳು ಸೀಟಿ ಕುಡಿದು ಅಲ್ಲಿಯೂ ಅಂತರ್ಜಲ ಕುಸಿಯುವಂತೆ ಮಾಡಿವೆ.

Advertisement

80ರ ದಶಕದಲ್ಲಿ ಅಂದಿನ ರಾಜ್ಯದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಮಾಡಿದ ಅತೀ ದೊಡ್ಡ ತಪ್ಪೊಂದರ ಪರಿಣಾಮ ಧಾರವಾಡ ಜಿಲ್ಲೆ ಮಾತ್ರವಲ್ಲ, ಇಡೀ ರಾಜ್ಯವೇ ಇಂದು ತೊಂದರೆ ಅನುಭವಿಸುವಂತಾಗಿದೆ. ನೀಲಗಿರಿಯ ತೊಂದರೆಗಳು ಮನದಟ್ಟಾಗಲು ಮೂರು ದಶಕ ಬೇಕಾಯಿತು. ಇದೀಗ ಸರ್ಕಾರ 2017ರಲ್ಲಿ ನೀಲಗಿರಿ ಮತ್ತು ಅಕೇಶಿಯಾ ಬೆಳೆಸುವುದು ಮತ್ತು ನೆಡುವುದನ್ನು ನಿಷೇಧಿಸಿದೆ. ಆದರೆ ನೆಟ್ಟ ಗಿಡಗಳನ್ನು ಬೇರು ಸಮೇತ ಕೀಳಲು ಇನ್ನು 3 ದಶಕಗಳು ಬೇಕೆನ್ನುತ್ತಿದ್ದಾರೆ ಪರಿಸರ ತಜ್ಞರು ಮತ್ತು ಅರಣ್ಯ ಇಲಾಖೆ.

ಹಳ್ಳಿಗರ ಬದುಕು ಕಿತ್ತ ನೀಲಗಿರಿ: ದಡ್ಡ ಕಮಲಾಪೂರ ಎಂಬ ಪುಟ್ಟಯ ಎಲ್ಲಾ ಕುಟುಂಬಗಳು ಹೈನುಗಾರಿಕೆ ಮತ್ತು ಕುರುಚಲು ಕಾಡಿನ ನೇರಳೆ, ಕವಳಿ, ಶಿವಪರಗಿ, ಪರಗಿ ಹಣ್ಣುಗಳು, ತೊಂಡೆ, ಅಡವಿ ಮಡಿವಾಳ, ಹಾಗಲುಕಾಯಿಗಳನ್ನೇ ಆಯ್ದುಕೊಂಡು ತಂದು ಉಪ ಜೀವನ ಸಾಗಿಸುತ್ತಿದ್ದರು. 80ರ ದಶಕದಲ್ಲಿ ಈ ಭಾಗದಲ್ಲಿ ನೆಟ್ಟ ನೀಲಗಿರಿ ತೋಪುಗಳಿಂದ ಇಲ್ಲಿನ ಕುರುಚಲು ಕಾಡೆಲ್ಲವೂ ಮಾಯವಾಗಿದೆ ಅಷ್ಟೇಯಲ್ಲ, ಅಲ್ಲಿಗ ಬರೀ ಕಾಂಗ್ರೆಸ್‌, ಯುಪಟೋರಿಯಂ ಕಸ ರಾಕ್ಷಸ ಸ್ವರೂಪ ಪಡೆದಿದೆ.

ವೀರಾಪುರ, ರಾಮಾಪುರ, ಕಲ್ಲಾಪುರ‌, ದುರ್ಗದ ಕೇರಿ, ಕನ್ನಿಕೊಪ್ಪ ಸೇರಿದಂತೆ ಅನೇಕ ಗ್ರಾಮಗಳಲ್ಲಿನ ಸರ್ಕಾರಿ ಜಾಗೆಯಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ನೆಟ್ಟಿರುವ ನೀಲಗಿರಿ ಈಗಾಗಲೇ ಮೂರು ಬಾರಿ ಕಟಾವ್‌ ಆಗಿದ್ದು, ಮತ್ತೆ ಬೆಳೆದು ನಿಂತಿದೆ. ಕಟಾವ್‌ ನಂತರ ಒಂದಕ್ಕೆ ಮೂರು ಟಿಸಿಳು ಒಡೆಯುವ ನೀಲಗಿರಿ ಅಂತರ್ಜಲವನ್ನು ವಿಪರೀತವಾಗಿ ಹೀರುತ್ತಿದ್ದು, ಈ ಜಾಗದಲ್ಲಿ ಮತ್ತೆ ದೇಶಿ ಕಾಡು ಹುಟ್ಟಬೇಕಾದರೆ ದಶಕಗಳೇ ಕಾಯಬೇಕು.

ಸರ್ಕಾರ ನೀಲಗಿರಿಯನ್ನೇನೋ ನಿಷೇಧಿಸಿದೆ. ಆದರೆ ಇರುವ ನೀಲಗಿರಿ ತೋಪುಗಳನ್ನು ಬೇರು ಸಮೇತ ಕಿತ್ತು ಹಾಕುವುದು ಸವಾಲಾಗಿದೆ. ಒಂದು ನೀಲಗಿರಿ ಬೆಳೆಸಲು ತಗಲುವ ವೆಚ್ಚ 10 ರೂ.ಗಳಾದರೆ, ಬೇರು ಸಮೇತ ಕಿತ್ತು ಹಾಕಲು 200 ರೂ. ವ್ಯಯಿಸಬೇಕಿದೆ. ಇದು ಸದ್ಯಕ್ಕಂತೂ ಅಸಾಧ್ಯ. ಕಟಾವು ಮಾಡಿದ ಗಿಡದಿಂದ ಕನಿಷ್ಠ 5 ರೆಂಬೆಗಳು ಐದೇ ವರ್ಷದಲ್ಲಿ 10 ಮೀಟರ್‌ ಎತ್ತರಕ್ಕೆ ಬೆಳೆದು ನಿಲ್ಲುವ ಶಕ್ತಿ ನೀಲಗಿರಿ ಸಸ್ಯಕ್ಕಿದೆ. ಹೀಗಾಗಿ ನೀಲಗಿರಿ ಎಂಬ ರಕ್ತಬೀಜಾಸುರನ ಅಂತ್ಯವಾಗಲು ದಶಕಗಳೇ ಬೇಕು.

ಕಳೆದ ವರ್ಷದಿಂದ ನಾವು ನೀಲಗಿರಿ ಸಸ್ಯವನ್ನು ಬೆಳೆಸುತ್ತಿಲ್ಲ. ನಮ್ಮ ನರ್ಸರಿಗಳಲ್ಲಿ ಎಲ್ಲಾ ದೇಶಿ ಸಸಿಗಳನ್ನೇ ಬೆಳೆಸಲಾಗುತ್ತಿದೆ. ಹುಣಸೆ, ಹಲಸು, ಹೊಂಗೆ ಸೇರಿದಂತೆ ಅನೇಕ ಜಾತಿಯ ಹಣ್ಣಿನ ಸಸಿಗಳನ್ನು ಬೆಳೆಸಿ ವಿತರಿಸಲಾಗಿದೆ. ಆದರೆ ಈಗಾಗಲೇ ನೆಟ್ಟ ನೀಲಗಿರಿ ಬಗ್ಗೆ ಸರ್ಕಾರವೇ ಕ್ರಮ ವಹಿಸಬೇಕಿದೆ. • ವೀರೇಶ ಪಟ್ಟಣಶೆಟ್ಟಿ, ಧಾರವಾಡ ಅರಣ್ಯ ವಲಯ ನರ್ಸರಿ ಮುಖ್ಯಸ್ಥರು.
ನೀಲಗಿರಿ ಮತ್ತು ಆಕೇಶಿಯಾ ಸಸಿಗಳನ್ನು ಸರ್ಕಾರ ಯಾವ ಯೋಜನೆಗಳ ರೂಪದಲ್ಲಿ ತಂದು ಹಾಕಿತೋ ಗೊತ್ತಿಲ್ಲ. ಆದರೆ ಇವು ಗೂಂಡಾ ಬೆಳೆಗಳು. ಇವು ಅನ್ಯ ಸಸ್ಯ ಸಂಕುಲ ಬೆಳೆಯಲು ಬಿಡುವುದೇ ಇಲ್ಲ. ಇನ್ನು ಅವುಗಳನ್ನು ಬರೀ ಕತ್ತರಿಸಿದರೆ ಅವು ನಾಶವಾಗುವುದೂ ಇಲ್ಲ. ಬೇರು ಸಮೇತ ಕಿತ್ತು ಹಾಕೋದು ಇನ್ನೂ ಕಷ್ಟ. • ಪ್ರಕಾಶ ಭಟ್, ಪರಿಸರ ತಜ್ಞ
•ಬಸವರಾಜ ಹೊಂಗಲ್
Advertisement

Udayavani is now on Telegram. Click here to join our channel and stay updated with the latest news.

Next