ಮಂಡ್ಯ: ಕಳೆದ ಲೋಕಸಭೆ ಚುನಾವಣೆಯಲ್ಲಿ ತಾಂತ್ರಿಕವಾಗಿ ನಾನು ಸೋತಿದ್ದರೂ ಅದರ ಹಿಂದೆ ಕೆಲ ಪಕ್ಷಗಳ ಕುತಂತ್ರವೂ ಸೇರಿತ್ತು. ಪ್ರಸ್ತುತ ಸನ್ನಿವೇಶದಲ್ಲಿ ಸೋಲಿನ ಬಗ್ಗೆ ಪರಾಮರ್ಶೆ ಮಾಡುವುದು ಬೇಡ. ಮುಂದೆ ಒಳ್ಳೆಯ ಅವಕಾಶಗಳು ಸಿಗುವ ನಿರೀಕ್ಷೆ ಇದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ೩೩ನೇ ಹುಟ್ಟುಹಬ್ಬದ ಸಮಾರಂಭ ಹಾಗೂ 33 ಪ್ರಗತಿಪರ ರೈತರನ್ನು ಸನ್ಮಾನಿಸಿ ಮಾತನಾಡಿದ ಅವರು, 2014 ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಪುಟ್ಟರಾಜು ಅವರು 5.25 ಲಕ್ಷ ಮತಗಳನ್ನು ಗಳಿಸಿ ಜಯ ಗಳಿಸಿದ್ದರು. 2019 ಲೋಕಸಭಾ ಚುನಾವಣೆಯಲ್ಲಿ ನಾನು 5.75 ಲಕ್ಷ ಮತಗಳನ್ನು ತೆಗೆದುಕೊಂಡಿದ್ದೇನೆ ಎಂದರು.
ಕಳೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನನ್ನ ಸೋಲಿನ ಬಗ್ಗೆ ವಿಮರ್ಶೆ ಮಾಡುವುದು ಬೇಡ. ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸ ವಿಟ್ಟು ರಾಜ್ಯ ಯುವ ಘಟಕದ ಜವಾಬ್ದಾರಿ ವಹಿಸಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸಬೇಕಾದ ಹೊಣೆಗಾರಿಕೆ ನನ್ನ ಮೇಲಿದ್ದು, ತಾವೆಲ್ಲರೂ ನನಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
ರೈತ ಮತ್ತು ಜನಪರ ನಿಲುವನ್ನು ಹೊಂದಿರುವ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಕುಟುಂಬದಿಂದ ಬಂದಿರುವ ನನಗೆ ರಾಮನಗರ, ಚನ್ನಪಟ್ಟಣ ಹಾಗೂ ಮಂಡ್ಯ ಜಿಲ್ಲೆಯ ಜನರು ಅತೀವ ಪ್ರೀತಿ-ವಿಶ್ವಾಸವನ್ನು ತೋರಿಸುತ್ತಿದ್ದಾರೆ. ಇದಕ್ಕೆ ಎಂದಿಗೂ ನಾನು ಚಿರಋಣಿಯಾಗಿದ್ದೇನೆ. ಜಿಲ್ಲೆಯ ರೈತರು ಹಾಗೂ ಜನರ ಹಿತ ಕಾಪಾಡಲು ನಾನು ಸದಾ ಬದ್ಧನಾಗಿದ್ದೇನೆ. ಈ ವಿಚಾರದಲ್ಲಿ ಎಂಥ ಸಮಯದಲ್ಲೂ ಸ್ಪಂದಿಸಲು ಸಿದ್ಧನಿದ್ದೇನೆ. ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದ ಸಂದರ್ಭದಲ್ಲಿ ಮೃತ ರೈತರ ಕುಟುಂಬಗಳಿಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ನೆರವಾಗಿದ್ದರು. ಅವರ ಮಾರ್ಗದರ್ಶನದಲ್ಲೇ ನಾನು ಮುನ್ನಡೆಯುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ನಿಖಿಲ್‌ಕುಮಾರಸ್ವಾಮಿ ಭತ್ತದ ರಾಶಿಗೆ ಪೂಜೆ ಸಲ್ಲಿಸಿದರು. ನಂತರ ಅಂಬೇಡ್ಕರ್, ನಾಲ್ವಡಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಸಮಾರಂಭದಲ್ಲಿ 33 ಪ್ರಗತಿಪರ ರೈತರನ್ನು ಅಭಿನಂದಿಸಲಾಯಿತು.
ಶಾಸಕರಾದ ಸಿ.ಎಸ್.ಪುಟ್ಟರಾಜು, ಕೆ.ಸುರೇಶ್‌ಗೌಡ, ಕೆ.ಅನ್ನದಾನಿ, ಡಿ.ಸಿ.ತಮ್ಮಣ್ಣ ಎನ್.ಅಪ್ಪಾಜಿಗೌಡ, ಕೆ.ಟಿ.ಶ್ರೀಕಂಠೇಗೌಡ ಮಾತನಾಡಿದರು. ಮಾಜಿ ಶಾಸಕಿ ಕಲ್ಪನಾಸಿದ್ದರಾಜು, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಅಶೋಕ್, ಸದಸ್ಯರಾದ ಎಚ್.ಟಿ.ಮಂಜು, ಕಂಸಾಗರ ರವಿ ಸೇರಿದಂತೆ ಮತ್ತಿತರರಿದ್ದರು.