“ಕುರುಕ್ಷೇತ್ರ’ದ ನಂತರ ನಿಖಿಲ್, ಡ್ಯಾನ್ಸ್ ಮಾಸ್ಟರ್ ಹರ್ಷ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಚಿತ್ರ ಯಾವಾಗ ಶುರುವಾಗುತ್ತದೆ, ಚಿತ್ರದ ಹೆಸರೇನು, ಯಾರೆಲ್ಲಾ ಇರುತ್ತಾರೆ ಎಂಬ ಪ್ರಶ್ನೆಗಳು ಇದ್ದೇ ಇದ್ದವು. ಈಗ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ನಿಖಿಲ್ ಅಭಿನಯದ ಹೊಸ ಚಿತ್ರಕ್ಕೆ “ಸೀತಾರಾಮ ಕಲ್ಯಾಣ’ ಎಂಬ ಹೆಸರಿಡಲಾಗಿದ್ದು, ಚಿತ್ರದ ಮುಹೂರ್ತ ನಾಳೆ (ನವೆಂಬರ್ 29ಕ್ಕೆ) ಬಸವನಗುಡಿಯಲ್ಲಿರುವ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿದೆ.
ಆ ನಂತರ ಡಿಸೆಂಬರ್ 10ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಹೌದು, ನಿಖಿಲ್ ಅಭಿನಯದ “ಸೀತಾರಾಮ ಕಲ್ಯಾಣ’ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ನಾಳೆ ಚಿತ್ರದ ಮುಹೂರ್ತ ನಡೆಯಲಿದೆ. ಈ ಚಿತ್ರವನ್ನು ಚೆನ್ನಾಂಬಿಕಾ ಫಿಲಂಸ್‌ನಡಿ ಅನಿತಾ ಕುಮಾರಸ್ವಾಮಿ ನಿರ್ಮಿಸಿದರೆ, ಹರ್ಷ ನಿರ್ದೇಶಿಸಲಿದ್ದಾರೆ. ಇನ್ನು ಹರ್ಷ ಅವರ “ಅಂಜನೀಪುತ್ರ’ದಲ್ಲಿ ಜೊತೆಯಾಗಿದ್ದ ಛಾಯಾಗ್ರಾಹಕ ಸ್ವಾಮಿ ಮತ್ತು ಸಂಗೀತ ನಿರ್ದೇಶಕ ರವಿ ಬಸ್ರೂರು, ಈ ಚಿತ್ರದಲ್ಲೂ ಜೊತೆಯಾಗುತ್ತಿದ್ದಾರೆ.
ರಾಮ್-ಲಕ್ಷ್ಮಣ್ ಸಾಹಸ ಸಂಯೋಜನೆ ಮಾಡಿದರೆ, ಸುನೀಲ್ ಗೌಡ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಹರ್ಷ ಜೊತೆಗೆ ಹರೀಶ್ ಎನ್ನುವವರು ಕಥೆ ಮತ್ತು ಚಿತ್ರಕಥೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಚೆನ್ನಾಂಬಿಕಾ ಫಿಲಮ್ಸ್‌ನಡಿ “ಸೂರ್ಯವಂಶ’ ಮತ್ತು “ಚಂದ್ರ ಚಕೋರಿ’ ತರಹದ ಕೌಟುಂಬಿಕ ಮತ್ತು ಗ್ರಾಮೀಣ ಸೊಗಡಿನ ಚಿತ್ರಗಳು ಬಿಡುಗಡೆಯಾಗಿದ್ದವು. “ಸೀತಾರಾಮ ಕಲ್ಯಾಣ’ ಸಹ ಅದೇ ಮಾದರಿಯ ಚಿತ್ರವಂತೆ.
ಇಲ್ಲಿ ಸೆಂಟಿಮೆಂಟ್ ಜೊತೆಗೆ ಆ್ಯಕ್ಷನ್ ಸಹ ಜೋರಾಗಿರಲಿದೆಯಂತೆ. ಬೆಂಗಳೂರು, ಮೈಸೂರು, ಮಂಡ್ಯ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ಇನ್ನು ಚಿತ್ರದಲ್ಲಿ ಏಳೆಂಟು ವಿಶೇಷ ಸೆಟ್‌ಗಳನ್ನು ಹಾಕಿ, ಅಲ್ಲೇ ಚಿತ್ರೀಕರಣ ಮಾಡಲಾಗುತ್ತದಂತೆ. “ಸೀತಾರಾಮ ಕಲ್ಯಾಣ’ ಚಿತ್ರಕ್ಕೆ ಸದ್ಯಕ್ಕೆ ಆಯ್ಕೆಯಾಗಿರುವುದು ಇಬ್ಬರೇ ಕಲಾವಿದರು. ಒಬ್ಬರು ನಿಖಿಲ್ ಆದರೆ, ಇನ್ನೊಬ್ಬರು ಅವರ ತಂದೆ ಪಾತ್ರ ಮಾಡುತ್ತಿರುವ ಶರತ್ ಕುಮಾರ್. ಮಿಕ್ಕಂತೆ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಚಿತ್ರದ ನಾಯಕಿ ಹಾಗೂ ಇತರೆ ಕಲಾವಿದರ ಆಯ್ಕೆ ಪೂರ್ತಿಯಾಗಲಿದೆ.
ಡಿ 16ಕ್ಕೆ ಅಭಿಮನ್ಯು ಟೀಸರ್: ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರದಲ್ಲಿ ನಿಖಿಲ್ ಕುಮಾರ್, ಅಭಿಮನ್ಯು ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದುವರೆಗೂ ಸುಮಾರು 70 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾಗಿದೆ. ಅಭಿಮನ್ಯುವಿನ ಟೀಸರ್ ಕಟ್ ಮಾಡಲಾಗುತ್ತಿದ್ದು, ಡಿಸೆಂಬರ್ 16ರಂದು (ಅಂದು ನಿಖಿಲ್ ತಂದೆ ಎಚ್.ಡಿ. ಕುಮಾರಸ್ವಾಮಿ ಅವರ ಹುಟ್ಟುಹಬ್ಬ) ಬಿಡುಗಡೆಯಾಗುತ್ತಿದೆ. ಈ ಟೀಸರ್ ಮೂಲಕ ತಮ್ಮ ತಂದೆಯ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡಲು ಹೊರಟಿದ್ದಾರೆ ನಿಖಿಲ್.