Advertisement

ಅಖಾಡದಲ್ಲಿ ‘ರೈಡರ್‌’: ನಿಖೀಲ್‌ ಕುಮಾರ್‌ ಹೈವೋಲ್ಟೇಜ್‌ ಸಿನಿಮಾ

09:17 AM Dec 24, 2021 | Team Udayavani |

ನಿಖೀಲ್‌ ಕುಮಾರ್‌ ಅಭಿನಯದ “ರೈಡರ್‌’ ಇಂದು ಬಿಡುಗಡೆಯಾಗುತ್ತಿದೆ. ಸಹಜವಾಗಿಯೇ ಈ ಚಿತ್ರದ ಮೇಲೆ ನಿಖೀಲ್‌ ನಿರೀಕ್ಷೆ ಹೆಚ್ಚಿದೆ. “ರೈಡರ್‌’ ಚಿತ್ರದಲ್ಲಿ ನಿಖೀಲ್‌ ಒಬ್ಬ ಬಾಸ್ಕೆಟ್‌ ಬಾಲ್‌ ಪ್ಲೇಯರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಸ್ಕೆಟ್‌ ಬಾಲ್‌ ಪ್ಲೇಯರ್‌ ಲೈಪ್‌ನಲ್ಲಿ ಏನೇನು ನಡೆಯುತ್ತದೆ ಅನ್ನೋದರ ಸುತ್ತ ಸಿನಿಮಾದ ಕಥೆ ನಡೆಯುತ್ತದೆ. ಇದರಲ್ಲಿ ನಿಖೀಲ್‌ ಅವರದು ಮಧ್ಯಮ ವರ್ಗದ ಹುಡುಗನ ಪಾತ್ರ. ಚಿತ್ರದಲ್ಲಿ ಲವ್‌, ಆ್ಯಕ್ಷನ್‌, ಫ್ಯಾಮಿಲಿ ಸೆಂಟಿಮೆಂಟ್‌, ಎಮೋಶನ್ಸ್‌ ಎಲ್ಲವೂ ಇರಲಿದ್ದು, ಚಿತ್ರದ ಕ್ಯಾರೆಕ್ಟರ್‌ಗಾಗಿ ಒಂದಷ್ಟು ತಯಾರಿ ಮಾಡಿಕೊಂಡು ನಟಿಸಿದ್ದಾರೆ ನಿಖೀಲ್‌.

Advertisement

ಚಿತ್ರದ ಕಥೆ ಕನ್ನಡ ಮತ್ತು ತೆಲುಗು ಎರಡೂ ಭಾಷೆಯ ಆಡಿಯನ್ಸ್‌ಗೂ ತಲುಪುವಂತಿದೆ. ಹಾಗಾಗಿ ಈ ಸಿನಿಮಾವನ್ನು ಕನ್ನಡ, ತೆಲುಗು ಎರಡೂ ಭಾಷೆಯಲ್ಲೂ ಮಾಡಲಾಗಿದೆ. ಕನ್ನಡ, ತೆಲುಗು ಚಿತ್ರರಂಗದ ಪ್ರಸಿದ್ಧ ಕಲಾವಿದರು, ತಂತ್ರಜ್ಞರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಲಹರಿ ಹಾಗೂ ಶಿವನಂದಿ ಬ್ಯಾನರ್‌ನಲ್ಲಿ ಚಂದ್ರು ಮನೋಹರನ್‌ ಹಾಗೂ ಸುನೀಲ್‌ ಗೌಡ ಸೇರಿ ನಿರ್ಮಿಸಿದ್ದಾರೆ. ನಿಖೀಲ್‌ ಅವರನ್ನು ಹೀಗೆಯೇ ತೋರಿಸಬೇಕು, ಈ ತರಹದ್ದೇ ಗೆಟಪ್‌ ಬೇಕು ಕಾರಣಕ್ಕೆ ಯಾವುದಕ್ಕೂ ಕಾಂಪ್ರಮೈಸ್‌ ಆಗದೇ ಸಿನಿಮಾ ನಿರ್ಮಿಸಿದ್ದಾರೆ.

ಈ ಚಿತ್ರವನ್ನು ತೆಲುಗು ನಿರ್ದೇಶಕ ವಿಜಯ್‌ ಕುಮಾರ್‌ ಕೊಂಡ ನಿರ್ದೇಶನ ಮಾಡಿದ್ದಾರೆ. ಇದೊಂದು ಪಕ್ಕಾ ಕಮರ್ಶಿಯಲ್‌ ಎಂಟರ್‌ಟೈನ್ಮೆಂಟ್‌ ಸಿನಿಮಾವಾಗಿದ್ದು, ಪಕ್ಕಾ ಪೈಸಾ ವಸೂಲ್‌ ಸಿನಿಮಾವಾಗಲಿದೆ ಎಂಬ ನಂಬಿಕೆ ಚಿತ್ರತಂಡದ್ದು.

ಹೊಸ ಬಗೆಯ ಪಾತ್ರ

ಚಿತ್ರದ ಬಗ್ಗೆ ಮಾತನಾಡುವ ನಾಯಕ ನಟ ನಿಖೀಲ್‌, “ಇದು ಹೊಸ ಬಗೆಯ ಸಿನಿಮಾ. ಇಡೀ ತಂಡದ ಶ್ರಮದೊಂದಿಗೆ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ. ನನ್ನ ಜೀವನದಲ್ಲಿ ಇದುವರೆಗೂ ಮಾಡಿರುವ ಇಷ್ಟು ಸಿನಿಮಾಗಳಲ್ಲಿ ಇಂಥದ್ದೊಂದು ಪಾತ್ರ ಮಾಡಿರಲಿಲ್ಲ. ನನ್ನಿಂದ ಇಂಥದ್ದೊಂದು ಅಭಿನಯವನ್ನು ತೆಗೆಸಿದ ನಿರ್ದೇಶಕರಿಗೆ ಥ್ಯಾಂಕ್ಸ್‌ ಹೇಳಬೇಕು.

Advertisement

ಇದನ್ನೂ ಓದಿ:‘ಬಡವ ರಾಸ್ಕಲ್‌’ ನಲ್ಲಿ ಡಾಲಿ ಕನಸು

ಇನ್ನು, ಚಿತ್ರದ ಕಥೆ ಆರಂಭವಾದ ಬಗ್ಗೆ ಮಾತನಾಡುವ ಅವರು, “ಊಟಿಯಲ್ಲಿ ಸೀತಾರಾಮ ಕಲ್ಯಾಣ ಚಿತ್ರದ ಶೂಟಿಂಗ್‌ ಸಮಯದಲ್ಲಿ ನನಗೆ ಈ ಲೈನ್‌ ಹೊಳೆಯಿತು. ಇದನ್ನು ಯಾರಿಂದ ಮಾಡಿಸೋದು ಎಂದು ಚರ್ಚೆ ಮಾಡಿದಾಗ, ವಿಜಯ್‌ ಕುಮಾರ್‌ ಕೊಂಡ ಅವರ ಹೆಸರು ಪ್ರಸ್ತಾಪವಾಯಿತು. ತಕ್ಷಣವೇ ಅಲ್ಲೇ ಫೋನ್‌ ಮಾಡಿ, ಅವರು ಬಂದರು. ಹಲವು ದಿನಗಳ ಕಾಲ ಒಟ್ಟಿಗೆ ಅವರ ಜತೆಗೆ ಚರ್ಚೆ ನಡೆಯಿತು. ಅಲ್ಲಿಂದ ಶುರುವಾಯಿತು ರೈಡರ್‌’ ಎನ್ನುವ ನಿಖೀಲ್‌, ಚಿತ್ರದ ಹಾಡುಗಳು ಹಿಟ್‌ ಆದ ಬಗ್ಗೆಯೂ ಖುಷಿಯಿಂದ ಮಾತನಾಡುತ್ತಾರೆ. “ಚಂದಮಾಮ ಎನ್ನುವ ಟ್ಯೂನ್‌ ಹಾಕಿದ್ದಾರೆ, ಕಣ್ಣಲ್ಲಿ ನೀರು ಬರುತ್ತಿದೆ. ಡವ್ವ ಡವ್ವ ಸಾಂಗ್‌ ಸಿನಿಮಾವನ್ನು ಮತ್ತೂಂದು ಲೆವೆಲ್‌ಗೆ ಕೊಂಡೊಯ್ಯುತ್ತದೆ’ ಎನ್ನುತ್ತಾರೆ ನಿಖೀಲ್‌.

ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಿ

ನಿಖೀಲ್‌ ಕುಮಾರ್‌ ಕನ್ನಡ ಸಿನಿಮಾ ಅಭಿಮಾನಿಗಳಲ್ಲಿ ಕನ್ನಡ ಸಿನಿಮಾವನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದ್ದಾರೆ. “ನನ್ನ ಮನವಿ ಏನೆಂದರೆ, ಪರಭಾಷೆಯ ಚಿತ್ರಗಳು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿವೆ. ಪ್ರಚಾರ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ನಾವು ಕನ್ನಡ ಸಿನಿಮಾಗಳನ್ನು ಹೆಚ್ಚೆಚ್ಚು ಪ್ರೋತ್ಸಾಹಿಸಬೇಕು. ಕೇವಲ ನನ್ನ ಚಿತ್ರ ಎಂದು ಹೇಳುತ್ತಿಲ್ಲ. ನನ್ನ ಜೊತೆ ಬರುತ್ತಿರುವ “ಬಡವ ರಾಸ್ಕಲ್‌’ ಸೇರಿ ಎಲ್ಲಾ ಕನ್ನಡ ಸಿನಿಮಾಗಳನ್ನು ನಾವು ನೋಡಿ, ಗೆಲ್ಲಿಸಬೇಕು. ಕನ್ನಡ ಚಿತ್ರಗಳಿಗೆ ಆದ್ಯತೆ ಕೊಡಿ. ಆದ್ಯತೆ ಎಂದರೆ ಒಟಿಟಿ ಅಥವಾ ಟಿವಿಯಲ್ಲಿ ನೋಡುವುದಲ್ಲ. ಮನೆಯಲ್ಲಿ ಕೂತು ನೋಡಿದರೆ, ನಿಮ್ಮ ಚಪ್ಪಾಳೆ, ಶಿಳ್ಳೆ ಕೇಳುವುದಿಲ್ಲ. ದಯವಿಟ್ಟು ಚಿತ್ರಮಂದಿರಕ್ಕೆ ಬನ್ನಿ’ ಎಂದು ಮನವಿ ಮಾಡುತ್ತಾರೆ ನಿಖೀಲ್‌.

Advertisement

Udayavani is now on Telegram. Click here to join our channel and stay updated with the latest news.

Next