ನಿಖೀಲ್ ಕುಮಾರ್ ಅಭಿನಯದ “ರೈಡರ್’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಮೊದಲ ಹಂತವಾಗಿ ಚಿತ್ರದ “ಡವ್ವ ಡವ್ವ’ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಾಲ್ಕು ಮಿಲಿಯನ್ ವೀವ್ಸ್‌ನೊಂದಿಗೆ ಹಾಡು ಮುನ್ನುಗ್ಗುತ್ತಿದೆ. ನಿಖೀಲ್ ಕೂಡಾ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ.
ಇತ್ತೀಚೆಗೆ ಚಿತ್ರದ ಹಾಡು ಬಿಡುಗಡೆಯಲ್ಲಿ ನಿಖೀಲ್ ಈ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೊರಹಾಕಿದರು. ಎಲ್ಲಾ ಓಕೆ, ಈ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ನವೆಂಬರ್.
ಹೌದು, ನವೆಂಬರ್ ಮೊದಲ ಅಥವಾ ಎರಡನೇ ವಾರ “ರೈಡರ್’ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಲಹರಿ ಸಂಸ್ಥೆ ನಿರ್ಮಿಸುತ್ತಿರುವ ಈ ಚಿತ್ರವನ್ನು ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಪಕ್ಕಾ ಕಮರ್ಶಿಯಲ್ ಎಂಟರ್‌ಟೈನ್ಮೆಂಟ್ ಸಿನಿಮಾವಾಗಿದ್ದು, ನಿಖೀಲ್ ಇಲ್ಲಿ ಒಬ್ಬ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಸಿನಿಮಾಗಳು ಗೆದ್ದರೂ ಸಂಭ್ರಮಿಸುವ ಮೂಡ್‌ನಿಂದ ದೂರ ..
ಬಾಸ್ಕೆಟ್ ಬಾಲ್ ಪ್ಲೇಯರ್ ಲೈಫ್ ನಲ್ಲಿ ಏನೇನು ನಡೆಯುತ್ತದೆ ಅನ್ನೋದರ ಸುತ್ತ ಸಿನಿಮಾದ ಕಥೆ ನಡೆಯುತ್ತದೆ. ಇದರಲ್ಲಿ ನಿಖೀಲ್ ಅವರದು ಮಧ್ಯಮ ವರ್ಗದ ಹುಡುಗನ ಪಾತ್ರ. ಇದರಲ್ಲಿ ಲವ್, ಆ್ಯಕ್ಷನ್, ಫ್ಯಾಮಿಲಿ ಸೆಂಟಿಮೆಂಟ್, ಎಮೋಶನ್ಸ್ ಎಲ್ಲವೂ ಇರಲಿದ್ದು, ಚಿತ್ರದ ಕ್ಯಾರೆಕ್ಟರ್‌ಗಾಗಿ ಒಂದಷ್ಟು ತಯಾರಿ ಮಾಡಿಕೊಂಡು ನಟಿಸಿದ್ದಾರೆ ನಿಖೀಲ್.
ಚಿತ್ರದ ಕಥೆ ಕನ್ನಡ ಮತ್ತು ತೆಲುಗು ಎರಡೂ ಭಾಷೆಯ ಆಡಿಯನ್ಸ್‌ಗೂ ತಲುಪುವಂತಿದೆ. ಹಾಗಾಗಿ ಈ ಸಿನಿಮಾವನ್ನು ಕನ್ನಡ, ತೆಲುಗು ಎರಡೂ ಭಾಷೆಯಲ್ಲೂ ಮಾಡಲಾಗಿದೆ. ಕನ್ನಡ, ತೆಲುಗು ಚಿತ್ರರಂಗದ ಪ್ರಸಿದ್ಧ ಕಲಾವಿದರು, ತಂತ್ರಜ್ಞರು ಸಿನಿಮಾದಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ನಡೆದ ಚಿತ್ರದ “ಡವ್ವ ಡವ್ವ’ ಹಾಡು ಬಿಡುಗಡೆಯಲ್ಲಿ ಚಿತ್ರ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಟಿ.ಎ.ಶರವಣ ಸೇರಿದಂತೆ ಅನೇಕ ಅತಿಥಿಗಳು ಆಗಮಿಸಿ ಶುಭಕೋರಿದರು. ಜೊತೆಗೆ ಇಡೀ ಚಿತ್ರತಂಡ ತಮ್ಮ ಅನುಭವ ಹಂಚಿಕೊಂಡಿತು.