ಮಂಡ್ಯ: ನಾಗಮಂಗಲ ತಾಲೂಕಿನ ಬದ್ರಿಕೊಪ್ಪಲು ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಉಂಟಾದ ಗಲಭೆ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದ ಗ್ರಾಮ ತೊರೆದಿದ್ದ ಗ್ರಾಮದ ನಿವಾಸಿ, ಮೃತ ಕಿರಣ್ ಅಂತಿಮ ದರ್ಶನವನ್ನು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಡೆದರು. ಬಳಿಕ ಪೋಷಕರಿಗೆ ಸಾಂತ್ವನ ಹೇಳಿ, ಆರ್ಥಿಕ ಸಹಾಯ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾಗಮಂಗಲದಲ್ಲಿ ನಡೆದಿರುವಂಥ ಘಟನೆ ಜೀರ್ಣಿಸಿಕೊಳ್ಳಲು ಆಗುವುದಿಲ್ಲ. 28 ವರ್ಷದ ಕಿರಣ್ ಎಂಬ ಯುವಕ ಬಹಳ ಉತ್ಸುಕತೆಯಿಂದ ಪ್ರತಿ ವರ್ಷ ಗಣೇಶ ವಿಸರ್ಜನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು. ಬಿ.ಕಾಂ ಓದಿದ್ದ ಕಿರಣ್‌ಗೆ ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡರು ಯಾವುದಾದರೂ ಕಂಪನಿಯಲ್ಲಿ ಕೆಲಸ ಕೊಡಿಸಬೇಕೆಂಬ ವಿಷಯವನ್ನು ಕುಮಾರಸ್ವಾಮಿ ಬಳಿ ಪ್ರಸ್ತಾಪಿಸಿದ್ದರೆಂದು ತಿಳಿಸಿದರು.
ಗಲಭೆಯಿಂದ ಕಿರಣ್‌ಗೆ ಮಾನಸಿಕವಾಗಿ ನೋವಾಗಿತ್ತು. ಕಿರಣ್ ತಂದೆಯವರು ಮತ್ತು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನು ನೋಡಿ ಕಿರಣ್ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದಾರೆ. ಇದು ನಿಜಕ್ಕೂ ದುಃಖಕರ ಸಂಗತಿ ಎಂದರು.
ಕಿರಣ್ ಪತ್ನಿಗೆ ಕೆಲಸ ಕೊಡಿಸುವ ಭರವಸೆ: ಕಿರಣ್‌ಗೆ ಸಣ್ಣ ಮಗುವಿದೆ. ಆತನ ಹೆಂಡತಿ ಸಹ ಕಂಗಾಲಾಗಿದ್ದಾರೆ. ಅವರ ಜತೆ ಕುಮಾರಣ್ಣ ದೂರವಾಣಿ ಮೂಲಕ ಮಾತನಾಡಿ, ಕಿರಣ್ ಪತ್ನಿಗೆ ಕೆಲಸಕೊಡಿಸುವ ಭರವಸೆ ನೀಡಿದ್ದಾರೆಂದು ನಿಖಿಲ್ ತಿಳಿಸಿದರು.