ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್ ಕುಮಾರಸ್ವಾಮಿಯವರ ವಿವಾಹ ಕಾರ್ಯಕ್ರಮ ಈ ಹಿಂದೆ ನಿಶ್ಚಯಿಸಿದಂತೆ ಎಪ್ರಿಲ್ 17ರಂದೇ ನಡೆಯಲಿದೆ.
ರಾಮನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಪುತ್ರನ ವಿವಾಹ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ನಿಖಿಲ್ ಮದುವೆ ಈ ಹಿಂದೆ ನಿಶ್ಚಯಿಸಿದಂತೆ ಎಪ್ರಿಲ್ 17ರ ಶುಭ ಲಗ್ನದಲ್ಲಿ ನಡೆಯುತ್ತದೆ. ಮನೆಯ ಸದಸ್ಯರ ಸಮ್ಮುಖದಲ್ಲಿಮನೆಯಲ್ಲೇ ಮದುವೆ ನಡೆಯುತ್ತದೆ. ಈ ಕೋವಿಡ್-19 ಸೋಂಕಿನ ಸಮಸ್ಯೆ ಎಲ್ಲಾ ಮುಗಿದ ಮೇಲೆ ಸಮಯ ನೋಡಿ ರಾಮನಗರದಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದರು.
ನಿಖಿಲ್ ಮತ್ತು ರೇವತಿಯವರ ನಿಶ್ಚಿತಾರ್ಥ ಕೆಲವು ತಿಂಗಳ ಹಿಂದೆ ಅದ್ದೂರಿಯಾಗಿ ನಡೆದಿತ್ತು. ನಿಖಿಲ್ ಮದುವೆಯನ್ನು ಚೆನ್ನಪಟ್ಟಣದ ಜಾನಪದ ಲೋಕದಲ್ಲಿ ಅದ್ದೂರಿಯಾಗಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದರು. ನಿಖಿಲ್ ತಾಯಿ ಅನಿತಾ ಕುಮಾರಸ್ವಾಮಿಯವರು ಮಗನ ಮದುವೆ ನಡೆಯುವ ಜಾಗದಲ್ಲಿ ಅದ್ದೂರಿ ಸೆಟ್ ಹಾಕಲು ಗುದ್ದಲಿ ಪೂಜೆಯನ್ನೂ ನೆರವೇರಿಸಿದ್ದರು. ಸುಮಾರು ಎಂಟು ಲಕ್ಷ ಆಹ್ವಾನ ಪತ್ರಿಕೆ ಸಿದ್ದವಾಗಿತ್ತು ಎನ್ನಲಾಗಿದೆ.
ಆದರೆ ಕೋವಿಡ್-19 ಸೋಂಕಿನ ಹಿನ್ನಲೆಯಲ್ಲಿ ಲಾಕ್ ಡೌನ್ ಇರುವ ಕಾರಣ ಸದ್ಯ ಅದೇ ಮುಹೂರ್ತಕ್ಕೆ ಮನೆಯಲ್ಲಿಯೇ ವಿವಾಹ ಕಾರ್ಯಕ್ರಮ ನಡೆಸಲು ನಿಶ್ವಯಿಸಲಾಗಿದೆ.