Advertisement

JDS: ನಿಖಿಲ್‌ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕೆ ?

10:06 PM Dec 02, 2023 | Team Udayavani |

ಬೆಂಗಳೂರು: ಚುನಾವಣಾ ರಾಜಕಾರಣದ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ನೀಡಿರುವ ಹೇಳಿಕೆ ಬೆನ್ನಲ್ಲೇ ಜೆಡಿಎಸ್‌ನಲ್ಲಿ ಒಂದಿಷ್ಟು ಬೆಳವಣಿಗೆಗಳು ಪ್ರಾರಂಭವಾಗಿದ್ದು, ಎರಡು ಲೋಕಸಭಾ ಕ್ಷೇತ್ರದಲ್ಲಿ “ಕುಟುಂಬದ ಕುಡಿ”ಗಳ ಸ್ಪರ್ಧೆ ಸಾಧ್ಯತೆ ದಟ್ಟವಾಗಿದೆ.

Advertisement

ಹಾಸನ ಲೋಕಸಭಾ ಕ್ಷೇತ್ರದಿಂದ ತಾವು ಸ್ಪರ್ಧಿಸುವ ಇಚ್ಛೆ ಹೊಂದಿಲ್ಲ ಎಂಬ ದೇವೇಗೌಡರ ಹೇಳಿಕೆಯಿಂದ ಪ್ರಜ್ವಲ್‌ ರೇವಣ್ಣ ಅವರ ಹಾದಿ ಸುಗಮವಾಗಿದೆ. ಇಲ್ಲವಾದರೆ ಪ್ರಜ್ವಲ್‌ ಸೂಕ್ತ ಕ್ಷೇತ್ರಕ್ಕಾಗಿ ಪರದಾಡುವ ಸಾಧ್ಯತೆ ಇತ್ತು. ಇದರೊಂದಿಗೆ ನಿಖಿಲ್‌ ಕುಮಾರಸ್ವಾಮಿಯವರಿಗೂ ಮತ್ತೂಮ್ಮೆ ಅದೃಷ್ಟ ಪರೀಕ್ಷೆ ಮಾಡುವುದಕ್ಕೆ ಅವಕಾಶ ಲಭಿಸಿದ್ದು, ಮಂಡ್ಯದಿಂದ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ.

ಜೆಡಿಎಸ್‌ ಮೂಲಗಳ ಪ್ರಕಾರ ದೇವೇಗೌಡರು ಈ ಹೇಳಿಕೆ ನೀಡುವುದಕ್ಕೆ ಮುನ್ನವೇ ಮಂಡ್ಯದಿಂದ ನಿಖಿಲ್‌ ಅವರನ್ನು ಮತ್ತೂಮ್ಮೆ ಕಣಕ್ಕಿಳಿಸುವ ಬಗ್ಗೆ ಸಾಕಷ್ಟು ಚರ್ಚೆ ಹಾಗೂ ಸಿದ್ಧತೆ ತೆರೆಮರೆಯಲ್ಲಿ ನಡೆದಿದೆ. ಕಳೆದೊಂದು ತಿಂಗಳಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅತಿ ಹೆಚ್ಚು ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ನಡೆಸಿದ್ದು, ನಿಖಿಲ್‌ ಪರ ವಾತಾವರಣ ಮೂಡಿಸುವ ಪ್ರಯತ್ನ ನಡೆಸಿದ್ದಾರೆ.

ಬಿಜೆಪಿ ಜತೆಗಿನ ಮೈತ್ರಿ ಕೂಡಾ ನಿಖಿಲ್‌ ಸ್ಪರ್ಧೆಗೆ ಬಲ ನೀಡಿದೆ. ವಿಪಕ್ಷ ನಾಯಕ ಆರ್‌.ಅಶೋಕ, ಸಿ.ಪಿ.ಯೋಗೇಶ್ವರ ಸೇರಿ ಹಲವರು ಬೆಂಬಲ ಸೂಚಿಸಿದ್ದು, ಮಂಡ್ಯ ಜಿಲ್ಲೆಯ ಒಕ್ಕಲಿಗ ನಾಯಕರು ಕುಮಾರಸ್ವಾಮಿ ನಿರ್ಧಾರಕ್ಕೆ ಇದುವರೆಗೆ ವಿರೋಧ ವ್ಯಕ್ತಪಡಿಸಿಲ್ಲ. ಇದರ ಜತೆಗೆ ಕಾಂಗ್ರೆಸ್‌ಗೆ ಸೂಕ್ತ ಅಭ್ಯರ್ಥಿ ಕೊರತೆ ಕಾಡುತ್ತಿದೆ. ಆದರೆ ಹಾಲಿ ಸಂಸದೆ ಸುಮಲತಾ ಅಂಬರೀಶ್‌ ಭವಿಷ್ಯವೇನು? ಎಂಬ ಪ್ರಶ್ನೆ ಸೃಷ್ಟಿಯಾಗಿದೆ. ಮೂಲಗಳ ಪ್ರಕಾರ ಸುಮಲತಾ ಅವರಿಗೆ ಆ ಕ್ಷಣದ ಬೆಳವಣಿಗೆ ಆಧರಿಸಿ ಬೆಂಗಳೂರು ಉತ್ತರ ಅಥವಾ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯುವಂತೆ ಸೂಚಿಸಬಹುದೆಂದು ಹೇಳಲಾಗುತ್ತಿದೆ. ಆಗ ಜಾತಿ ಸಮೀಕರಣ ಪ್ರಶ್ನೆ ಉದ್ಭವವಾಗಲಿದ್ದು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪಿ.ಸಿ.ಮೋಹನ್‌ ತುಸು ಕಷ್ಟ ಎದುರಿಸಬೇಕಾಗಬಹುದೆಂಬ ಮಾತು ಬಿಜೆಪಿ ವಲಯದಿಂದಲೇ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next