ನಟ ಕಂ ರಾಜಕಾರಣಿ ನಿಖಿಲ್ ಕುಮಾರ್ “ಸೀತಾರಾಮ ಕಲ್ಯಾಣ’ ಚಿತ್ರದ ಬಳಿಕ, ಚಿತ್ರರಂಗಕ್ಕಿಂತ ಜೋರಾಗಿ ರಾಜಕೀಯ ಅಂಗಳದಲ್ಲೇ ಸದ್ದು ಮಾಡಿ ಸುದ್ದಿಯಾಗಿದ್ದೇ ಹೆಚ್ಚು. ಇದರ ನಡುವೆ ನಿಖಿಲ್ ಕುಮಾರ್ ಅಭಿನಯದ ಮುಂದಿನ ಚಿತ್ರದ ಬಗ್ಗೆ ಆಗಾಗ್ಗೆ ಒಂದಷ್ಟು ಅಂತೆ-ಕಂತೆ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ನಿಖಿಲ್ ಕುಮಾರ್ ಮುಂದಿನ ಚಿತ್ರ ಯಾವಾಗ ಶುರುವಾಗಬಹುದು? ಯಾವ ಸಬ್ಜೆಕ್ಟ್ ನಿಖಿಲ್ ಆಯ್ಕೆ ಮಾಡಿಕೊಳ್ಳಬಹುದು?
ಚಿತ್ರದಲ್ಲಿ ನಿಖಿಲ್ ಜೊತೆಗೆ ಯಾರೆಲ್ಲ ಇರಬಹುದು? ಹೀಗೆ ಒಂದಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಇವೆಲ್ಲದರ ನಡುವೆ ಕೆಲ ದಿನಗಳ ಹಿಂದಷ್ಟೆ ನಿಖಿಲ್ “ಹೆಬ್ಬುಲಿ’, “ಪೈಲ್ವಾನ್’ ಚಿತ್ರಗಳ ಖ್ಯಾತಿಯ ನಿರ್ದೇಶಕ ಎಸ್. ಕೃಷ್ಣ ಜೊತೆ ಸೇರಿಕೊಳ್ಳುವ ಮೂಲಕ, ತಮ್ಮ ಮುಂದಿನ ಚಿತ್ರದ ನಿರ್ದೇಶಕರು ಯಾರು ಎಂಬ ಗುಟ್ಟನ್ನು ಬಿಟ್ಟುಕೊಟ್ಟಿದ್ದರು. ಆದರೆ ಆ ಚಿತ್ರ ಯಾವುದು, ಯಾವಾಗ ಸೆಟ್ಟೇರಲಿದೆ ಎನ್ನುವ ಮಾಹಿತಿಗಳು ಮಾತ್ರ ಬಹಿರಂಗವಾಗಿರಲಿಲ್ಲ.
ಇದೀಗ ನಿಖಿಲ್ ಕುಮಾರ್ ಮತ್ತು ಕೃಷ್ಣ ಕಾಂಬಿನೇಶನ್‌ನ ಹೊಸಚಿತ್ರದ ಬಗ್ಗೆ ಮತ್ತೂಂದು ಸುದ್ದಿ ಹರಿದಾಡುತ್ತಿದೆ. ಈ ಸುದ್ದಿಯ ಪ್ರಕಾರ ನಿಖಿಲ್ ಮತ್ತು ಕೃಷ್ಣ ಕಾಂಬಿನೇಶನ್‌ನ ಈ ಚಿತ್ರ ನೈಜ ಘಟನೆ ಆಧಾರಿತವಾಗಿದ್ದು, ಸದ್ಯದ ಮಾಹಿತಿ ಪ್ರಕಾರ ನಿಖಿಲ್ ಮತ್ತು ನಿರ್ದೇಶಕ ಕೃಷ್ಣ ಇಬ್ಬರೂ ಈ ನೈಜ ಘಟನೆ ಆಧಾರಿತ ಕಥೆಯನ್ನು ಕೈಗೆತ್ತಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಈ ವರೆಗೆ ನಿಖಿಲ್ ಕುಮಾರ್ ಮತ್ತು ಕೃಷ್ಣ ಮಾಡಿದ ಎಲ್ಲ ಚಿತ್ರಗಳಿಗಿಂತ ಸಂಪೂರ್ಣ ವಿಭಿನ್ನವಾಗಿ ಈ ಚಿತ್ರ ಮೂಡಿ ಬರಲಿದೆ ಎನ್ನಲಾಗುತ್ತಿದೆ. ಇಲ್ಲಿಯವರೆಗೆ ಕಾಲೇಜ್ ಹುಡುಗನಾಗಿ, ಲವರ್‌ಬಾಯ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ನಿಖಿಲ್ ಕೂಡ ಈ ಚಿತ್ರದಲ್ಲಿ ಬೇರೆಯದೇ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ಯಾವ ತರಹದ ಚಿತ್ರ, ನಿಖಿಲ್ ಗೆಟಪ್ ಹೇಗಿರಬಹುದು ಎನ್ನುವ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.
ಮೂಲಗಳ ಪ್ರಕಾರ, ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ತಮ್ಮ ಮುಂದಿನ ಚಿತ್ರಕ್ಕಾಗಿ ನಿಖಿಲ್ ಒಂದಷ್ಟು ಕಸರತ್ತು ಕೂಡ ಆರಂಭಿಸಿದ್ದು, ಹೊಸ ಗೆಟಪ್‌ಗಾಗಿ ತೆರೆಮರೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ವರ್ಷ ತೆರೆಗೆ ಬಂದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ “2.0′ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ “ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆ ಈ ಚಿತ್ರವನ್ನು ಕೂಡ ಬಹುಕೋಟಿ ವೆಚ್ಚದಲ್ಲಿ ಮತ್ತು ಬಹುಭಾಷೆಗಳಲ್ಲಿ ನಿರ್ಮಿಸಲು ಯೋಜಿಸಿದ್ದು,
ಚಿತ್ರತಂಡದ ಪ್ಲಾನ್ ಪ್ರಕಾರ ಮುಂದಿನ ಜನವರಿಯ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಚಿತ್ರ ಅದ್ಧೂರಿಯಾಗಿ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಟ್ಟಾರೆ ಸದ್ಯದ ಮಟ್ಟಿಗೆ ಚಿತ್ರದ ಬಗ್ಗೆ ಚಿತ್ರತಂಡ ಯಾವ ಗುಟ್ಟನ್ನೂ ಬಿಟ್ಟುಕೊಡದಿರುವುದರಿಂದ, ಈ ಚಿತ್ರದ ಬಗ್ಗೆ ಕೊಂಚ ಹೆಚ್ಚಾಗಿಯೇ ಒಂದಷ್ಟು ಸುದ್ದಿಗಳು ಹರಿದಾಡುತ್ತಿದ್ದು, ಚಿತ್ರ ಅಧಿಕೃತವಾಗಿ ಸೆಟ್ಟೇರಿದ ಮೇಲಷ್ಟೆ ಹರಿದಾಡುತ್ತಿರುವ ಒಂದಷ್ಟು ಅಂತೆ-ಕಂತೆಗಳಿಗೆ ಉತ್ತರ ಸಿಗಲಿದೆ.