ಗೌರಿಬಿದನೂರು: ರಾಜ್ಯಕ್ಕೆ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ಕಾಂಗ್ರೆಸ್ ಬಿಜೆಪಿ ಎರಡೂ ಪಕ್ಷಗಳಿಗೂ ಬದ್ಧತೆಯಿಲ್ಲ. ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಿವೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗುಡುಗಿದರು.
ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಉತ್ತರ ಪಿನಾಕಿನಿ ನದಿ ನೀರು ಸಂಗ್ರಹ ಮಾಡಿ ಜನತಾ ಜಲಧಾರೆ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ರಾಜ್ಯ ಮತ್ತು ರಾಷ್ಟ್ರಕ್ಕೆ ಹಲವು ನೀರಾವರಿ ಯೋಜನೆಗಳನ್ನು ನೀಡಿದ್ದಾರೆ. ನೀರಾವರಿ ವಿಚಾರದಲ್ಲಿ ನಮ್ಮ ಪಕ್ಷ ತೋರಿರುವ ಬದ್ಧತೆಯನ್ನು ರಾಷ್ಟ್ರೀಯ ಪಕ್ಷಗಳು ತೋರುತ್ತಿಲ್ಲ. ಈ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಎರಡೂ ಪಕ್ಷಗಳು ನಾಟಕವಾಡುತ್ತಿವೆ ಎಂದರು. ಬಿ
ಬಿಜೆಪಿಯಿಂದ ಬೆಂಕಿ ಹಚ್ಚುವ ಕೆಲಸ: ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದೇಶದ ಮುಸ್ಲಿಂ- ಕ್ರೈಸ್ತರು ಯಾರಿಗೂ ಬೇಡವಾಗಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಹಿಂದೂ ಪರ ಸಂಘಟ ನೆಗಳು ಸಾಮರಸ್ಯ ಹಾಳು ಮಾಡುತ್ತಿವೆ. ಅಧಿಕಾರದ ಆಸೆಗಾಗಿ ಜನರನ್ನು ಬೀದಿಗೆ ಬಿಟ್ಟು ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಮುಖ್ಯ ಮಂತ್ರಿ ಸುಮ್ಮನೆ ನೋಡಿಕೊಂಡು ಕುಳಿತಿದ್ದಾರೆ. ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾ ರೆಡ್ಡಿ ಮಾತನಾಡಿ, ರಾಜ್ಯದ ನೀರಾವರಿ ಯೋಜನೆಗಳಿಗೆ ಮಾಜಿ ಪ್ರಧಾನಿ ದೇವೇಗೌಡರು ಹೆಚ್ಚಿನ ಕೊಡುಗೆ ನೀಡಿದ್ದಾರೆ. ಜನ ಸಂಪನ್ಮೂಲ ಸಚಿವರೇ ವಿಧಾನಸಭೆ ಅಧಿವೇಶನದಲ್ಲಿ ಹೇಳಿದ್ದಾರೆ. ಇದು ನೀರಾವರಿ ಬಗ್ಗೆ ದೇವೇಗೌಡರಿಗೆ ಹಾಗೂ ನಮ್ಮ ಪಕ್ಷಕ್ಕೆ ಇರುವ ಬದ್ಧತೆಯನ್ನು ತೋರಿಸುತ್ತದೆ. ಅಂತಾರಾಜ್ಯ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳು ತೋರುತ್ತಿರುವ ರಾಜಕೀಯ ಧೋರಣೆಯಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಜಲ ವಿವಾದ ಇತ್ಯರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಪಂ ಮಾಜಿ ಅಧ್ಯಕ್ಷ ಸಿ.ಆರ್. ನರಸಿಂಹ ಮೂರ್ತಿ ಮಾತನಾಡಿ, ಸುಳ್ಳು ಆಶ್ವಾಸನೆಗಳನ್ನು ನೀಡಿ ದೇಶದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನುಡಿದಂತೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿಲ್ಲ. ಪೆಟ್ರೋಲ್ -ಡೀಸೆಲ್ ಬೆಲೆಗಳನ್ನು ಚಿನ್ನದ ದರಕ್ಕೆ ಏರಿಕೆ ಮಾಡಿರುವುದರಿಂದ ದಿನ ನಿತ್ಯದ ವಸ್ತುಗಳು ಗಗನಕ್ಕೇರಿ ಜನ ಸಾಮಾನ್ಯರ ಜೀವನ ಬೀದಿಗೆ ಬೀಳುವಂತಾಗಿದೆ ಎಂದರು.
ಪಕ್ಷದ ತಾಲೂಕು ಅಧ್ಯಕ್ಷ ಸಿ. ಮಂಜುನಾಥ ರೆಡ್ಡಿ ಮಾತನಾಡಿ ರಾಜ್ಯದಲ್ಲಿ ಈ ಹಿಂದೆ ಜೆಡಿಎಸ್ ಸರ್ಕಾರದ ಅವಧಿಯಲ್ಲಿ ನೀರಾವರಿ ಯೋಜನೆ ಗಳಿಗೆ ಒತ್ತು ನೀಡಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ಮು ಆಡಳಿತಕ್ಕೆ ತಂದರೆ ಮುಂದಿನ 5 ವರ್ಷದ ಅಧಿಕಾರದ ಅವಧಿಯಲ್ಲಿ ಬಾಕಿ ಮತ್ತು ಹೊಸ ನೀರಾವರಿ ಯೋಜನೆಗಳನ್ನು ಪೂರ್ಣಗೊಳಸಿ ಸಮಗ್ರ ಜಲ ಸಂರಕ್ಷಣೆ ಮಾಡುವ ಕುರಿತು ಜನರಿಗೆ ವಾಗ್ಧಾನ ಮಾಡಲು ಈ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಮಾಜಿ ಶಾಸಕ ಬಚ್ಚೇಗೌಡ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ರೋಷನ್ ಅಬ್ಟಾಸ್ ಮಾತನಾಡಿದರು. ವಿಧಾನಪರಿಷತ್ ಸದಸ್ಯ ಗೋವಿಂದರಾಜು, ಮಾಜಿ ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ, ಜಿಲ್ಲಾಧ್ಯಕ್ಷ ಕೆ. ಎಂ. ಮುನೇಗೌಡ, ರಾಜ್ಯ ಪಕ್ಷದ ಕಾರ್ಯದರ್ಶಿ ಸೈಯದ್ ರೋಷನ್ ಅಬ್ಟಾಸ್, ಸಮೃದ್ಧಿ ಮಂಜುನಾಥ್, ಇಡಗೂರು ನವೀನ್ ಇತರರಿದ್ದರು.
ಜೆಡಿಎಸ್‌ಗೆ ಸಂಪೂರ್ಣ ಅಧಿಕಾರ ನೀಡಿ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರದಲ್ಲಿದ್ದಾಗ ರೈತ ಪರ, ಜನಪರವಾಗಿ ಕೆಲಸ ಮಾಡಿದೆ. ರಾಷ್ಟ್ರೀಯ ಪಕ್ಷಗಳ ನಡುವಳಿಕೆ ಗಮನದಲ್ಲಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಐದು ವರ್ಷಗಳ ಕಾಲ ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳಕ್ಕೆ ಸಂಪೂರ್ಣ ಅಧಿಕಾರ ನೀಡಿ. ರಾಜ್ಯಕ್ಕೆ ನೀರಾವರಿ ಸೇರಿದಂತೆ ಇತರೆ ವಿಚಾರಗಳಲ್ಲಿ ಆಗುತ್ತಿರುವ ಅನ್ಯಾಯಗಳಿಗೆ ಉತ್ತರ ಸಿಗಲಿದೆ ಎಂದು ನಿಖಿಲ್ ತಿಳಿಸಿದರು.