Advertisement

ಭವಿಷ್ಯದಲ್ಲಿ ರಾಮನಗರದಿಂದ ನಿಖಿಲ್‌ ಸ್ಪರ್ಧೆ: ಎಚ್‌ಡಿಡಿ ಸುಳಿವು

09:47 PM Mar 03, 2020 | Team Udayavani |

ರಾಮನಗರ: ಮುಂಬರುವ ವಿಧಾನಸಭಾ ಚುನಾವಣೆಗೆ ರಾಮನಗರ ಕ್ಷೇತ್ರದಿಂದ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸುವ ಸೂಚನೆಯನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ನೀಡಿದ್ದಾರೆ. ರಾಮನಗರದ ಹೊರ ವಲಯದಲ್ಲಿರುವ ಜಾನಪದ ಲೋಕದ ಬಳಿಯ ಖಾಸಗಿ ಭೂಮಿಯಲ್ಲಿ ನಿಖಿಲ್‌-ರೇವತಿ ವಿವಾಹ ಸಿದ್ಧತೆ ಕಾರ್ಯ ವೀಕ್ಷಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಇಲ್ಲಿನ ಜನರ ಆಶೀರ್ವಾದವಿದ್ದರೆ ನಿಖಿಲ್‌ ರಾಮನಗರದಿಂದ ಸ್ಪರ್ಧಿಸಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. ಹಾಸನಕ್ಕೆ ರೇವಣ್ಣ, ಪ್ರಜ್ವಲ್‌ ಸೀಮಿತರಾಗಿದ್ದಾರೆ, ರಾಮನಗರದಲ್ಲಿ ನಾನು ಮತ್ತು ಕುಮಾರಸ್ವಾಮಿ ಸೀಮಿತರಾಗಿದ್ದೆವು. ಮುಂದೆ ಜನಾಭಿಪ್ರಾಯಕ್ಕೆ ಮಣಿಯಬೇಕಾಗಿದೆ. ಜನರ ಆರ್ಶಿವಾದವಿದ್ದರೆ ನಿಖಿಲ್‌ ಇಲ್ಲಿಂದ ಸ್ಪರ್ಧೆ ಮಾಡಬಹುದು ಎಂದರು.

ರಾಮನಗರದಲ್ಲಿ ನಿಖಿಲ್‌ ಮದುವೆ ಮಾಡುತ್ತಿರುವುದು ರಾಜಕೀಯಗಳಿಕೆಗಾಗಿ ಎಂಬ ಆಕ್ಷೇಪಗಳು ಕೇಳಿ ಬಂದಿವೆ ಎಂದು ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು, ತಮ್ಮ ಕುಟುಂಬದಿಂದ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದು, ನಿಖಿಲ್‌ ಮಾತ್ರ. ಹೀಗಾಗಿ ಆತನ ಮದುವೆಗೆ ಸಾಕಷ್ಟು ಮಂದಿಯನ್ನು ಕರೆಯಬೇಕಾಗಿದೆ. ಬೆಂಗಳೂರಿನಲ್ಲಿ ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ಇಲ್ಲಿ ಮದುವೆ ಮಾಡುತ್ತಿರುವುದಾಗಿ ತಿಳಿಸಿದರು.

ಮದುವೆ ಸರಳವಾಗಿ ನಡೆಯಲಿದೆ. ದೊಡ್ಡ ಪ್ರಮಾಣದಲ್ಲಿ ಇಲ್ಲ. ಊಟ ಒಂದು ಪ್ಲೇಟಿಗೆ 3ರಿಂದ 4 ಸಾವಿರ ಇಲ್ಲ. 200 ರೂ. ನಿಗದಿ ಮಾಡುವವರಿದ್ದಾರೆ. ಜೆಡಿಎಸ್‌ ಬಲಗೊಳಿಸುವ ವಿಚಾರದಲ್ಲಿ ಪ್ರಶಾಂತ್‌ ಕಿಶೋರ್‌ ಸಂಪರ್ಕದಲ್ಲಿರುವ ಕುಮಾರಸ್ವಾಮಿ ಮಾತನಾಡುತ್ತಾರೆ. ಮಧು ಬಂಗಾರಪ್ಪ ವಿಚಾರದಲ್ಲಿ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು ನನಗೆವಯಸ್ಸಾಗಿದ್ದು, ರಾಜಕೀಯವನ್ನು ಮಕ್ಕಳು ಮುಂದುವರೆಸಲಿದ್ದಾರೆ ಎಂದರು.

ನಿಖಿಲ್‌ ಮದುವೆಗೂ ಆತನ ರಾಜಕೀಯ ಭವಿಷ್ಯಕ್ಕೂ ಸಂಬಂಧವಿಲ್ಲ: ರಾಮನಗರದಲ್ಲಿ ಪುತ್ರ ನಿಖಿಲ್‌ ವಿವಾಹ ಮಾಡುತ್ತಿರುವುದು ತಮ್ಮ ಪರ್ಸನಲ್‌ ಕಮಿಟ್ಮೆಂಟ್‌, ಮದುವೆಗೂ ನಿಖಿಲ್‌ ರಾಜಕೀಯ ಭವಿಷ್ಯಕ್ಕೂ ಯಾವುದೆ ಸಂಬಂಧವಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ನಗರದ ಹೊರವಲಯದಲ್ಲಿರುವ ಜಾನಪದ ಲೋಕದ ಬಳಿಯ ಖಾಸಗಿ ಜಮೀನಿನಲ್ಲಿ ಪುತ್ರನ ಮದುವೆ ತಯಾರಿ ವೀಕ್ಷಿಸಲು ಆಗಮಿಸಿದ್ದ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ನಿಖಿಲ್‌ ರಾಜಕೀಯ ಭವಿಷ್ಯದ ವಿಚಾರದಲ್ಲಿ ದೈವದಾಟ ಏನೋ ಗೊತ್ತಿಲ್ಲ. ಮಂಡ್ಯಕ್ಕೆ ಹೋಗೋದು ಬೇಡ ಎಂದು ನಾನು ಹೇಳಿದ್ದೆ, ಆದರೆ ಕೆಲವೊಮ್ಮೆ ದೈವ ನಮನ್ನು ಕರೆದುಕೊಂಡು ಹೋಗುತ್ತದೆ. ಭವಿಷ್ಯದಲ್ಲೂ ನಿಖಿಲ್‌ನ ರಾಜಕೀಯ ಭವಿಷ್ಯದ ಬಗ್ಗೆಯೂ ದೈವದ ಆಟ ಗೊತ್ತಿಲ್ಲ. ರಾಜಕೀಯವಾಗಿ ಜನ್ಮ ನೀಡಿದ ರಾಮನಗರ, ಚನ್ನಪಟ್ಟಣ ಜನರ ನಡುವೆ ಮಗನ ಮದುವೆ ಮಾಡಲು ನಿಶ್ಚಯಿಸಿರುವುದಾಗಿ ತಿಳಿಸಿದರು.

ಉಡುಗೂರೆ ನಿರ್ಧಾರ ತಮ್ಮದಲ್ಲ: ಪುತ್ರ ನಿಖಿಲ್‌ ಮದುವೆಯ ಆಮಂತ್ರಣದ ಜೊತೆಗೆ ಪಂಚೆ, ಸೀರೆ ಉಡುಗೂರೆ ಕೊಡುವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅದು ತಮ್ಮ ನಿರ್ಧಾರವಲ್ಲ. ಮದುವೆಯನ್ನು ಕಾರ್ಯಕರ್ತರೇ ನಿಂತು ಮಾಡುತ್ತಿರುವ ಸಮಾರಂಭ, ಕೆಲವು ಕಾರ್ಯಕರ್ತರು ಪಂಚೆ, ಸೀರೆ ಕೊಡುವುದಾಗಿ ಹೇಳಿದ್ದಾರೆ. ಅದನ್ನು ಅವರೇ ತೀರ್ಮಾನ ಮಾಡ್ತಾರೆ ಎಂದು ಸ್ಪಷ್ಟ ಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next