Advertisement

ವನಿತಾ ವಿಶ್ವ ಬಾಕ್ಸಿಂಗ್‌: ನಿಖತ್‌, ಲವ್ಲಿನಾ ಮೇಲೆ ನಿರೀಕ್ಷೆ

11:49 PM Mar 15, 2023 | Team Udayavani |

ಹೊಸದಿಲ್ಲಿ: ಬಹು ನಿರೀಕ್ಷೆಯ ವನಿತಾ ವಿಶ್ವ ಬಾಕ್ಸಿಂಗ್‌ ಪಂದ್ಯಾವಳಿ ಗುರುವಾರ ಹೊಸದಿಲ್ಲಿಯಲ್ಲಿ ಆರಂಭವಾಗಲಿದೆ. ಆತಿಥೇಯ ನಾಡಿನ ಸ್ಟಾರ್‌ ಬಾಕ್ಸರ್‌ಗಳಾದ, ವಿಶ್ವ ಚಾಂಪಿಯನ್‌ ನಿಖತ್‌ ಜರೀನ್‌ ಮತ್ತು ಒಲಿಂಪಿಕ್ಸ್‌ ಪದಕ ವಿಜೇತೆ ಲವ್ಲಿನಾ ಬೊರ್ಗೊಹೇನ್‌ ಮೇಲೆ ಎಲ್ಲರೂ ಭಾರೀ ನಿರೀಕ್ಷೆ ಇರಿಸಿಕೊಂಡಿದ್ದಾರೆ.

Advertisement

ಈ ನಡುವೆ 6 ಬಾರಿಯ ವಿಶ್ವ ಚಾಂಪಿಯನ್‌ ಎಂ.ಸಿ. ಮೇರಿ ಕೋಮ್‌ ಗೈರು ಎದ್ದು ಕಾಣುತ್ತಿದೆ. ಅವ ರಿನ್ನೂ ಎಡ ಮೊಣಕಾಲಿನ ಸ್ನಾಯು ಸೆಳೆತದಿಂದ ಚೇತರಿಸಿಕೊಂಡಿಲ್ಲ.

ನೂತನ ತೂಕ ವಿಭಾಗ
ನಿಖತ್‌ ಜರೀನ್‌ ಮತ್ತು ಲವ್ಲಿನಾ ಬೊರ್ಗೊಹೇನ್‌ ಇಬ್ಬರೂ ಇಲ್ಲಿ ನೂತನ ತೂಕ ವಿಭಾಗದಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ. ಮುಂದಿನ ವರ್ಷ ಪ್ಯಾರಿಸ್‌ ಒಲಿಂಪಿಕ್ಸ್‌ ಇರುವುದರಿಂದ ಈ ತೂಕ ವಿಭಾಗದ ಸ್ಪರ್ಧೆ ಇವರಿಬ್ಬರಿಗೂ ಮಹತ್ವದ್ದಾಗಿದೆ. ವಿಶ್ವದ ನಂ.4 ಆಟಗಾರ್ತಿ ನಿಖತ್‌ ಜರೀನ್‌ 52 ಕೆಜಿಯಿಂದ 50 ಕೆಜಿ ವಿಭಾಗಕ್ಕೆ ಇಳಿದಿದ್ದಾರೆ. ಲವ್ಲಿನಾ 69 ಕೆಜಿ ವೆಲ್ಟರ್‌ವೆಟ್‌ನಿಂದ 75 ಕೆಜಿ ಮಿಡ್ಲ್ ವೇಟ್‌ಗೆ ಸ್ಪರ್ಧೆಯನ್ನು ಬದಲಿಸಿಕೊಂಡಿದ್ದಾರೆ. ಇವರ ಹಿಂದಿನ ತೂಕ ವಿಭಾಗದ ಸ್ಪರ್ಧೆಗಳೆರಡನ್ನೂ ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ಕೈಬಿಡಲಾಗಿದೆ.

ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ನೀತು ಗಂಘಾಸ್‌ (48 ಕೆಜಿ), ಕಳೆದ ಸಲದ ಕಂಚಿನ ಪದಕ ವಿಜೇತೆ ಮನೀಷಾ ಮೌನ್‌ (57 ಕೆಜಿ), ಸಾಕ್ಷಿ ಚೌಧರಿ (52 ಕೆಜಿ), ಪ್ರೀತಿ (54 ಕೆಜಿ), ಶಶಿ ಚೋಪ್ರಾ (63 ಕೆಜಿ), ಸನಮಚಾ ಚಾನು (70 ಕೆಜಿ) ಅವರಿಂದಲೂ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ. ಸ್ಪರ್ಧೆ ಭಾರತದಲ್ಲೇ ನಡೆಯುವುದಾದರೂ ಕೆಲವು ಬಲಿಷ್ಠ ಬಾಕ್ಸರ್‌ಗಳ ಸವಾಲನ್ನು ನಮ್ಮವರು ಎದುರಿಸಬೇಕಿದೆ.

ಭಾರತ ವಿಶ್ವ ಚಾಂಪಿಯನ್‌ಶಿಪ್‌ ಕೂಟವನ್ನು ಆಯೋಜಿಸುತ್ತಿರುವುದು ಇದು 3ನೇ ಸಲ. ಆದರೆ ಸಾಕಷ್ಟು ವಿವಾದಗಳಿಂದಾಗಿ ಯುಎಸ್‌ಎ, ಬ್ರಿಟನ್‌, ಐರ್ಲೆಂಡ್‌ ತಂಡಗಳು ಈ ಕೂಟದಿಂದ ಹಿಂದೆ ಸರಿದಿವೆ. ರಷ್ಯಾದ ಉಮರ್‌ ಕ್ರೆಮ್ಲೆವ್‌ ಅಧ್ಯಕ್ಷತೆಯನ್ನು ಹೊಂದಿರುವ ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಮಂಡಳಿ (ಐಬಿಎ), ತಮ್ಮದೇ ಧ್ವಜದ ಅಡಿಯಲ್ಲಿ ರಷ್ಯಾ ಮತ್ತು ಬೆಲರೂಸ್‌ ಬಾಕ್ಸರ್‌ಗಳಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದೇ ಇದಕ್ಕೆ ಕಾರಣ.

Advertisement
Advertisement

Udayavani is now on Telegram. Click here to join our channel and stay updated with the latest news.

Next