● ತಿರುಮಲೆ ಶ್ರೀನಿವಾಸ್
ಮಾಗಡಿ ತಾಲೂಕಿನ ಗೊರೂರು ಬಳಿ ಬಿಬಿಎಂಪಿ ಕಸವಿಲೇವಾರಿ ಘಟಕ ಸ್ಥಾಪನೆ ಸದ್ಯಕ್ಕೆ ನಿಂತಿದೆ. ಮಠಾಧೀಶರು ಮತ್ತು ರಾಜಕಾರಣಿಗಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಹೋರಾಟ ಫಲವಾಗಿ ಕಸ ವಿಲೇವಾರಿ ಘಟಕ ಸ್ಥಾಪನೆ ಸಂಚು ವಿಫಲವಾಗಿದೆ. ಆದರೂ ಬೆಂಗಳೂರು- ಮಾಗಡಿ ಮುಖ್ಯರಸ್ತೆ ಬದಿ ಕದ್ದುಮುಚ್ಚಿ ತಂದು ಸುರಿದು ಬೆಂಕಿ ಹಚ್ಚುವ ಕೆಲಸ ಮಾತ್ರ ನಿಂತಿಲ್ಲ. ಇದರಿಂದ ಸುತ್ತಮುತ್ತಲ ಜನತೆ ನೆಮ್ಮದಿಯೂ ಇಲ್ಲದಂತಾಗಿದೆ. ದುರ್ವಾಸನೆ ನಡುವೆ ವಾಹನ ಸವಾರರು ಮೂಗು ಮುಚ್ಚಿಕೊಂಡು ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಬಿಎಂಪಿಯಿಂದ ತ್ಯಾಜ್ಯ ವಿಲೇವಾರಿ: ಬಿಬಿಎಂಪಿಯ ತ್ಯಾಜ್ಯಗಳನ್ನು ಹಾಗೂ ಕೈಗಾರಿಕೆಗಳ ಅಪಾಯಕಾರಿ ತ್ಯಾಜ್ಯಗಳನ್ನು ಪ್ರಸಿದ್ಧ ತಿಮ್ಮಗೊಂಡನಹಳ್ಳಿ ಜಲಾಶಯದ ಬಳಿ, ತಾವರೆಕೆರೆ, ಹೊನ್ನಾಪುರ ಕೆರೆಯಂಗಳದ ಮಾರ್ಗದುದ್ದಕ್ಕೂ ರಾತ್ರೋರಾತ್ರಿ ತಂದು ಸುರಿಯುತ್ತಿರುವ ಪರಿಪಾಠ ನಡೆದಿದೆ. ತ್ಯಾಜಕ್ಕೆ ಬೆಂಕಿ ಹಚ್ಚುವುದರಿಂದ ಹೊಗೆ ಸೂಸಿ ಇಲ್ಲಿನ ಸುತ್ತಮುತ್ತಲ ಪರಿಸರದ ಮೇಲೆ ತೀವ್ರ ಹಾನಿಕರ ಉಂಟಾಗುತ್ತಿದೆ. ನಿತ್ಯ ವಾಹನ ಸವಾರರು ಪ್ರಯಾಣಿಕರು ಈ ಹೊಗೆಯ ನಡುವೆ ವಾಹನ ಚಲಿಸಲಾಗದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ರಸ್ತೆ ಬದಿ, ಆಸುಪಾಸು, ಖಾಸಗಿ ಜಮೀನು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ರಸ್ತೆಯಲ್ಲಿ ಸಂಚರಿಸುವ ಉನ್ನತ ಅಧಿಕಾರಿಗಳು, ರಾಜಕಾರಿಣಿಗಳಿಗೆ ಈ ಅವಾಂತರ ಕಣ್ಣಿಗೆ ಕಾಣದೆ ಇರುವುದು ವಿಪರ್ಯಾಸ.
ವಾಹನ ಸವಾರರು, ಪ್ರಯಾಣಿಕರಿಗೆ ಕಿರಿಕಿರಿ: ಕೋಳಿ, ಮಾಂಸದ ಅಂಗಡಿ ಮತ್ತು ಹೋಟೆಲ್ ಮಾಲೀಕರು ತ್ಯಾಜ್ಯವನ್ನು ಚೀಲದಲ್ಲಿ ತುಂಬಿಕೊಂಡು ರಾತ್ರೊರಾತ್ರಿ ತಂದು ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ಸುರಿದು ಬೆಂಕಿ ಹಚ್ಚಿ ಹೋಗುತ್ತಿದ್ದಾರೆ. ಇಂತಹ ಕಡೆಯಂತೂ ವಾಹನ ಸವಾರರು ಮೂಗು ಮುಚ್ಚಿಕೊಂಡು ಸಂಚರಿಸು ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಆಹಾರ ಹುಡಕಿಕೊಂಡು ಬರುವ ನಾಯಿಗಳು ಕಸದ ಚೀಲವನ್ನು ರಸ್ತೆ ಎಳೆದು ತಂದು ಹರಡುತ್ತಿವೆ ಎನ್ನಲಾಗುತ್ತಿದೆ.
Advertisement
ಮಾಗಡಿ: ಬೆಂಗಳೂರು- ಮಾಗಡಿ ಮುಖ್ಯರಸ್ತೆ ಕಸದ ಕೊಟ್ಟಿಯಾಗುವ ಮುನ್ನ ಅಧಿಕಾರಿಗಳು ಮುಂಜಾಗ್ರತೆ ವಹಿಸಿ ತಡೆಯುವಂತೆ ನಾಗರಿಕರ ಆಗ್ರಹವಾಗಿದೆ. ಬೆಂಗಳೂರು- ಮಾಗಡಿ ಮಾರ್ಗದ ಮುಖ್ಯರಸ್ತೆ ಬದಿಯಲ್ಲಿ ದೂರದ ನಗರ ಪ್ರದೇಶದಿಂದ ರಾತ್ರೋರಾತ್ರಿ ಕದ್ದುಮುಚ್ಚಿ ಕಸ ವಿಲೇವಾರಿ ಮಾಡಿ, ಆ ಕಸದ ರಾಶಿಗೆ ಬೆಂಕಿ ಹಚ್ಚುವ ಛಾಳಿ ಮಾತ್ರ ಇನ್ನೂ ನಿಂತಿಲ್ಲ.
Related Articles
Advertisement
ಬೆಂಕಿ ಹಚ್ಚುವ ಮೂಲಕ ಸಾಕ್ಷಿ ನಾಶ: ಕಸದ ರಾಶಿಯಲ್ಲಿನ ಸಾಕ್ಷಿಗಳ ಆಧಾರದ ಮೇಲೆಯೇ ಈ ಕಸ ವಿಲೇವಾರಿ ಎಲ್ಲಿಂದ ಮಾಡುತ್ತಾರೆ ಎಂಬುದನ್ನು ಪತ್ತೆ ಹಚ್ಚಲು ಕಷ್ಟದ ಕೆಲಸವಲ್ಲ. ಈ ಕಾರಣದಿಂದಲೇ ಕದ್ದು ಮುಚ್ಚಿ ಕಸದ ರಾಶಿಗೆ ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯರೇ ಹೇಳುತ್ತಾರೆ. ಸ್ಥಳೀಯ ಪಂಚಾಯ್ತಿಗಳು ಅಥವಾ ವಿವಿಧ ಸಂಘ -ಸಂಸ್ಥೆಗಳ ಪದಾಧಿಕಾರಿಗಳು ಎಚ್ಚೆತ್ತುಕೊಂಡರೆ ಕಸ ವಿಲೇವಾರಿಗೆ ಕಡಿವಾಣ ಕಷ್ಟವಾಗುವುದಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಕಸದಿಂದ ಜಲಾಶಯದ ನೀರು ಕಲುಷಿತ: ಈ ಮಾರ್ಗದ ರಸ್ತೆಯಲ್ಲಿಯೇ ಪ್ರಸಿದ್ಧ ತಿಪ್ಪಗೊಂಡನಹಳ್ಳಿ ಜಲಾಶಯವಿದೆ. ವಿಷಕಾರಿ ಕಸವನ್ನು ತಂದು ಸುರಿಯುತ್ತಿರುವುದರಿಂದ ಜಲಾಶಯದ ನೀರು ಕಲುಷಿತವಾಗುವ ಆತಂಕದ ಜೊತೆಗೆ ಜಲಾಶಯದ ಆಸುಪಾಸಿನ ಗ್ರಾಮಗಳಲ್ಲಿ ವಾಸಿಸುವ ಜನರು ತತ್ತರಿಸಿಹೋಗಿದ್ದಾರೆ. ಕಸದ ರಾಶಿಗೆ ಬೆಂಕಿ ಹಚ್ಚುವುದರಿಂದ ವಾಯು ಮಾಲಿನ್ಯ ಉಂಟಾಗುತ್ತಿದೆ. ಆದರೂ, ಜನಪ್ರತಿನಿಧಿಗಳಾಗಲಿ, ಸಂಬಂಧಪಟ್ಟ ಪರಿಸರ ಮಾಲಿನ್ಯ ಇಲಾಖೆಯ ಅಧಿಕಾರಿಗಳಾಗಲಿ, ಜಲಮಂಡಲಿ ಎಂಜಿನಿಯರ್‌ಗಳಾಗಲಿ ಈ ಬಗ್ಗೆ ಯಾರು ತಲೆ ಕೆಡಿಸಿಕೊಂಡಿಲ್ಲ. ಏಕೆಂದರೆ ಅವರು ಇಲ್ಲಿ ವಾಸಿಸುತ್ತಿಲ್ಲ. ಇಲ್ಲಿ ವಾಸಿಸುವವರು ಗ್ರಾಮೀಣ ಬಡ ಜನತೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ತಡೆಯದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರು- ಮಾಗಡಿ ಮುಖ್ಯರಸ್ತೆ ಕಸದ ತೊಟ್ಟಿಯಾಗುವುದರಲ್ಲಿ ಸಂಶಯವಿಲ್ಲ. ಇನ್ನು ಮುಂದಾದರೂ ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತು ಕಸ ವಿಲೇವಾರಿ ತಡೆಯಬೇಕಿದೆ ಎಂಬುದು ಸುತ್ತಮುತ್ತಲ ನಾಗರಿಕರ ಆಶಯವಾಗಿದೆ.