ದಾಂಡೇಲಿ: ನಗರದ ವಿರ್ನೋಲಿ ವಲಯಾರಣ್ಯಾಧಿಕಾರಿಯವರ ಕಚೇರಿಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸವನ್ನು ನಿರ್ವಹಿಸಿದ್ದ ರಾತ್ರಿ ಕಾವಲುಗಾರ ಮೃತಪಟ್ಟ ಘಟನೆ ಸೆ.5ರ ಮಂಗಳವಾರ ಬೆಳಿಗ್ಗೆ ನಡೆದಿದೆ.
ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಕಾವಲುಗಾರ ರಮೇಶ್ ನಾರಾಯಣ್ ಧರಣಿ ಎಂಬವರೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಇವರು ಎಂದಿನಂತೆ ವಿರ್ನೋಲಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ರಾತ್ರಿಯೂ ಕಾವಲುಗಾರರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಆದರೆ ಇಂದು ಮಂಗಳವಾರ ಬೆಳಿಗ್ಗೆ ರಮೇಶ್ ನಾರಾಯಣ್ ಧರಣಿ ಅವರು ಮಲಗಿದ್ದಲ್ಲೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಬೆಳಿಗ್ಗೆ ವಲಯಾರಣ್ಯಾಧಿಕಾರಿಗಳ ಕಚೇರಿಗೆ ಅಧಿಕಾರಿಗಳು, ಸಿಬ್ಬಂದಿಗಳು ಬಂದಂತಹ ಸಂದರ್ಭದಲ್ಲಿ ರಮೇಶ್ ನಾರಾಯಣ್ ಧರಣಿ ಅವರು ಮೃತ ಪಟ್ಟಿರುವುದು ತಿಳಿದುಬಂದಿದೆ.
ತಕ್ಷಣವೇ ನಗರದ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಲಾಗಿತ್ತು. ಸ್ಥಳಕ್ಕೆ ಪಿಎಸ್ಐ ಐ.ಆರ್. ಗಡ್ಡೆಕರ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಇದೀಗ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದೆ. ಕುಟುಂಬಸ್ಥರ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಆಕ್ರಂದನ ಮುಗಿಲು ಮುಟ್ಟಿದೆ.
ಮೂಲತ: ವಿರ್ನೋಲಿ ಗ್ರಾಮದ ನಿವಾಸಿಯಾಗಿರುವ ಮೃತರು ನಗರದ ಬೈಲ್ ಪಾರ್ ನಲ್ಲಿರುವ ಅರಣ್ಯ ವಸತಿ ಗೃಹದಲ್ಲಿ ವಾಸವಾಗಿದ್ದರು. ಮೃತರು ಪತ್ನಿ ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ.