Advertisement

ಮತ್ತೆ ರಾತ್ರಿ ಕರ್ಫ್ಯೂ ಜಪ : ಮುಂಬಯಿ, ಪುಣೆ ಬಳಿಕ ಮ.ಪ್ರದೇಶ, ಗುಜರಾತ್‌ನಲ್ಲೂ ಜಾರಿ

07:13 AM Mar 17, 2021 | Team Udayavani |

ಹೊಸದಿಲ್ಲಿ: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ರಾತ್ರಿ ಕರ್ಫ್ಯೂ ಜಾರಿಯಾಗುತ್ತಿದೆ. ಮುಂಬಯಿ, ಪುಣೆ ಬೆನ್ನಲ್ಲೇ ಈಗ ಮಧ್ಯಪ್ರದೇಶ, ಗುಜರಾತ್‌ನ ಕೆಲವು ಜಿಲ್ಲೆಗಳು ಕಟ್ಟುನಿಟ್ಟಾಗಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿವೆ.
ಭೋಪಾಲ, ಇಂದೋರ್‌ಗಳಲ್ಲಿ ಮಾ. 17ರಿಂದ ಇದು ಜಾರಿಗೊಳ್ಳಲಿದೆ. ಜತೆಗೆ ಗ್ವಾಲಿಯರ್‌, ಜಬಲ್ಪುರ, ಉಜ್ಜಯಿನಿ, ರತ್ಲಾಮ್‌, ಛಿಂದ್ವಾರಾ, ಬುರ್ಹಾನ್‌ಪುರ, ಬೇತುಲ್‌, ಖಾರ್ಗಾಂವ್‌ಗಳಲ್ಲಿ ಬಿಗಿ ನಿಯಮ ಜಾರಿಗೊಂಡಿದೆ. ರಾತ್ರಿ 10ರ ಬಳಿಕ ಎಲ್ಲ ಅಂಗಡಿ ಮುಚ್ಚಲು ಸೂಚಿಸಲಾಗಿದೆ.

Advertisement

ಇನ್ನೊಂದೆಡೆ ಗುಜರಾತ್‌ನ 4 ನಗರಗಳಲ್ಲಿ ಕರ್ಫ್ಯೂ ಅವಧಿ ಹೆಚ್ಚಿಸಲಾಗಿದೆ. ಅಹ್ಮದಾಬಾದ್‌, ಸೂರತ್‌, ವಡೋದರ, ರಾಜ್‌ ಕೋಟ್‌ಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಕರ್ಫ್ಯೂ ಇರಲಿದೆ.

24,492 ಹೊಸ ಪ್ರಕರಣ
ಸತತ 6ನೇ ದಿನ ದೇಶದಲ್ಲಿ ಸೋಂಕು ಸಂಖ್ಯೆ 20 ಸಾವಿರ ದಾಟಿದೆ. 24 ತಾಸುಗಳಲ್ಲಿ 24,492 ಮಂದಿಗೆ ಕೊರೊನಾ ದೃಢಪಟ್ಟಿದೆ.

ಒಂದೇ ದಿನ 30 ಲಕ್ಷ ಮಂದಿಗೆ ಲಸಿಕೆ
ಲಸಿಕೆ ನೀಡಿಕೆಯನ್ನೂ ಹೆಚ್ಚಿಸಲಾಗಿದ್ದು, ಸೋಮವಾರ ದೇಶದಲ್ಲಿ 30 ಲಕ್ಷಕ್ಕೂ ಅಧಿಕ ಮಂದಿ ಲಸಿಕೆ ಪಡೆದಿದ್ದಾರೆ.

ರಾಜ್ಯ ನಿರ್ಬಂಧ: ಇಂದು ನಿರ್ಧಾರ
ಬೆಂಗಳೂರು: ಪ್ರಧಾನಿ ಮೋದಿ ಮತ್ತು ಸಿಎಂಗಳ ಸಭೆಯ ಬಳಿಕ ರಾಜ್ಯದಲ್ಲಿ ಕಠಿನ ನಿಯಮ ಜಾರಿ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್‌ ತಿಳಿಸಿದರು. ಬುಧವಾರ ಕರ್ನಾಟಕ ಸಹಿತ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಪ್ರಧಾನಿ ಮೋದಿ ಸಭೆ ನಡೆಸಲಿದ್ದಾರೆ.

Advertisement

ಸಾವಿರ ದಾಟಿದ ಸೋಂಕು
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಮಂಗಳವಾರ ಮತ್ತೆ ಒಂದು ಸಾವಿರ ಗಡಿ ದಾಟಿದೆ. ಮಂಗಳವಾರ 1,135 ಮಂದಿಗೆ ಸೋಂಕು ತಗಲಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷ ಡಿ. 25ರಂದು 1,005 ಪ್ರಕರಣಗಳು ವರದಿಯಾಗಿದ್ದವು.

ಆ ಬಳಿಕ ಪ್ರಕರಣಗಳು ಇಳಿಮುಖವಾಗುತ್ತ ಸಾಗಿ 200ರ ಆಸುಪಾಸಿಗೆ ತಲುಪಿದ್ದವು.

ಮಂಗಳವಾರ ಅತೀ ಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲಿ 710, ಮೈಸೂರು 58, ದಕ್ಷಿಣ ಕನ್ನಡದಲ್ಲಿ 50ರಷ್ಟು ದಾಖಲಾಗಿವೆ.

ಮಹಾರಾಷ್ಟ್ರಕ್ಕೆ ಕಠಿನ ಎಚ್ಚರಿಕೆ
ಮುಂಬಯಿ: ಕೊರೊನಾದ ಘೋರ ಸವಾಲು ಎದುರಿಸಲು ಸಜ್ಜಾಗುವಂತೆ ಮಹಾರಾಷ್ಟ್ರಕ್ಕೆ ಕೇಂದ್ರ ಸರಕಾರ ಕಠಿನ ಎಚ್ಚರಿಕೆ ನೀಡಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರು ಮಂಗಳವಾರ ಮಹಾರಾಷ್ಟ್ರ ಸರಕಾರದ ಮುಖ್ಯ ಕಾರ್ಯದರ್ಶಿಗೆ ಈ ಕುರಿತು ಕಟು ಶಬ್ದಗಳಲ್ಲಿ ಪತ್ರ ಬರೆದಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾದ 2ನೇ ಅಲೆ ಆರಂಭ ಹಂತದಲ್ಲಿದೆ. ಆದರೂ ಅಲ್ಲಿ ಸೋಂಕುಪೀಡಿತರ ಪತ್ತೆ, ಪರೀಕ್ಷೆ, ಸಂಪರ್ಕ ತಡೆಗೆ ಸರಕಾರ ಹೆಚ್ಚು ಗಮನ ನೀಡುತ್ತಿಲ್ಲ. ನಗರ ಮತ್ತು ಗ್ರಾಮೀಣ- ಎರಡೂ ಭಾಗಗಳಲ್ಲೂ ಜನ ಕೊರೊನಾ ಮಾರ್ಗಸೂಚಿಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ರಾಜೇಶ್‌ ಭೂಷಣ್‌ ಆರೋಪಿಸಿದ್ದಾರೆ.

ಕೇಂದ್ರ ತಂಡ ಮಾ. 7-11ರ ವರೆಗೆ ಮಹಾರಾಷ್ಟ್ರ ಪ್ರವಾಸ ಕೈಗೊಂಡಿತ್ತು. ಕೊರೊನಾ ಹೆಚ್ಚುತ್ತಿರುವ ಸೂಚನೆ ಇದ್ದರೂ ರಾಜ್ಯ ಸರಕಾರದ ನಿರ್ಲಕ್ಷ್ಯವನ್ನು ರಾಜೇಶ್‌ ಭೂಷಣ್‌ ಖಂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next