ಬೆಂಗಳೂರು: ರೂಪಾಂತರಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮತ್ತೆ ರಾತ್ರಿ ಕರ್ಪ್ಯೂ ವಿಚಾರ ಮುನ್ನೆಲೆಗೆ ಬರುತ್ತಿದೆ. ಆದರೆ ರಾಜ್ಯ ಸಂಪುಟ ಸಚಿವರುಗಳಲ್ಲೇ ಈ ಬಗ್ಗೆ ಗೊಂದವಿದೆ.
ನೈಟ್ ಕರ್ಫ್ಯೂ ಮುಗಿದ ಅಧ್ಯಾಯ, ಮತ್ತೆ ನೈಟ್ ಕರ್ಫ್ಯೂ ಜಾರಿಯಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ನೀಡಿದರೆ ರಾತ್ರಿ ಕರ್ಪ್ಯೂ ಜಾರಿ ಅಗತ್ಯವಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳುತ್ತಾರೆ.
ಆರೋಗ್ಯ ಸಚಿವ ಕೆ ಸುಧಾಕರ್ ಮಾತನಾಡಿ ನೈಟ್ ಕರ್ಫ್ಯೂ ಮುಗಿದ ಅಧ್ಯಾಯ, ಮತ್ತೆ ನೈಟ್ ಕರ್ಫ್ಯೂ ಜಾರಿಯಿಲ್ಲ. ಈಗ ಇರುವುದು ಹೊಸ ವರ್ಷಕ್ಕೆ ನಿಯಮಗಳನ್ನು ಬಿಗಿ ಮಾಡುವ ವಿಚಾರ ಅಷ್ಟೇ ಎನ್ನುತ್ತಾರೆ.
ಇದನ್ನೂ ಓದಿ:ನೂತನ ಸೋಂಕಿನ ಆತಂಕ: ಜನವರಿ 7ರವರೆಗೆ ಬ್ರಿಟನ್ ವಿಮಾನಗಳಿಗೆ ನಿರ್ಬಂಧ: ಭಾರತ
ಆದರೆ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ ರಾಜ್ಯದಲ್ಲಿ ಬ್ರಿಟನ್ ಸೋಂಕು ಹೆಚ್ಚಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಗಳಲ್ಲಿ ಸೋಂಕು ಹರಡದಂತೆ ಎಚ್ಚರ ವಹಿಸಬೇಕಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾತ್ರಿ ಕರ್ಪ್ಯೂ ಜಾರಿ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರ ಜತೆ ಚರ್ಚಿಸಲಾಗುವುದು ಎಂದಿದ್ದಾರೆ.
ಸೋಂಕು ತಡೆಯಲು ಮತ್ತಷ್ಟು ನಿರ್ಬಂಧಗಳನ್ನು ಹೇರಬೇಕಿದೆ. ಬ್ರಿಟನ್ ವೈರಸ್ ವೇಗವಾಗಿ ಹಬ್ಬುವ ಸೋಂಕಾಗಿದೆ. ಸದ್ಯಕ್ಕೆ ಬೆಂಗಳೂರು ಸೇರಿದಂತೆ ಯಾವುದೇ ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡುವ ಪರಿಸ್ಥಿತಿ ಇಲ್ಲ ಎಂದಿದ್ದಾರೆ.
ರಾತ್ರಿ ಕರ್ಫ್ಯೂ ವಿಚಾರದಲ್ಲಿ ಸಚಿವರ ಗೊಂದಲದ ಹೇಳಿಕೆಗಳು ರಾಜ್ಯ ಜನತೆಯನ್ನು ಗೊಂದಲಕ್ಕೆ ಈಡು ಮಾಡಿದೆ.