Advertisement

ರಾತ್ರಿ ಕರ್ಫ್ಯೂ ವ್ಯರ್ಥ ಪ್ರಯತ್ನ

02:01 AM Dec 24, 2020 | sudhir |

ಬ್ರಿಟನ್ ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಿ ವೈರಸ್‌ ಹರಡುವಿಕೆಯನ್ನು ತಡೆಯುವುದಕ್ಕಾಗಿ ರಾಜ್ಯ ಸರಕಾರ ಜನರ ಓಡಾಟ ತೀರಾ ಕಡಿಮೆಯಿರುವ ರಾತ್ರಿಯ ಸಮಯದಲ್ಲಿ “ಕರ್ಫ್ಯೂ’ ಜಾರಿ ಮಾಡಿದೆ. ಡಿಸೆಂಬರ್‌ 24ರಿಂದ ಜನವರಿ 2ರವರೆಗೆ ರಾತ್ರಿ ಗಂಟೆ 11ರಿಂದ ಮುಂಜಾವ 5ರ ವರೆಗೆ ಜಾರಿಯಲ್ಲಿರಲಿರುವ ಈ “ರಾತ್ರಿ ಕರ್ಫ್ಯೂ’ ಕೋವಿಡ್‌ ಸಾಂಕ್ರಾಮಿಕದ ತಡೆಗೆ ತೆಗೆದು ಕೊಳ್ಳಲಾಗುತ್ತಿರುವ ಕ್ರಮ ಎನ್ನಲಾಗಿದೆ. ಈ “ರಾತ್ರಿ ಕರ್ಫ್ಯೂ’ ಕೋವಿಡ್‌ ಅನ್ನು ಹೇಗೆ ತಡೆಯಬಲ್ಲದು ಎನ್ನುವುದಕ್ಕಂತೂ ಉತ್ತರವಿಲ್ಲ.

Advertisement

ದಿನವೆಲ್ಲ ಜನರು, ರೈಲು, ಬಸ್‌, ವಿಮಾನ ನಿಲ್ದಾಣಗಳಲ್ಲಿ, ಮಾರುಕಟ್ಟೆಗಳಲ್ಲಿ, ಮಾಲ್‌ಗಳಲ್ಲಿ, ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ಕಿಕ್ಕಿರಿದು ತುಂಬುತ್ತಿದ್ದಾರೆ. ಸಾಮಾಜಿಕ ಅಂತರ ಪಾಲನೆಯಂತೂ ಎಲ್ಲೂ ಕಾಣಿಸುತ್ತಲೇ ಇಲ್ಲ. ನಿಜಕ್ಕೂ ಕೋವಿಡ್‌ ಸಾಂಕ್ರಾಮಿಕ ಹರಡುವ ಸಾಧ್ಯತೆ ಇರುವುದು ಈ ಸಮಯಗಳಲ್ಲೋ ಅಥವಾ ಜನರೆಲ್ಲ ಮನೆಗಳಿಗೆ ಹಿಂದಿರುಗಿ, ಕಚೇರಿಗಳೆಲ್ಲ ಬಾಗಿಲು ಹಾಕಿ ರಸ್ತೆಗಳೆಲ್ಲ ಖಾಲಿ ಹೊಡೆಯುವ ರಾತ್ರಿಯ ವೇಳೆಯಲ್ಲೋ? ಇದು ಸಮಸ್ಯೆ ಎಲ್ಲೋ ಇರುವಾಗ, ಪರಿಹಾರವನ್ನು ಇನ್ನೆಲ್ಲೋ ಹುಡುಕುವ ವ್ಯರ್ಥ ಪ್ರಯತ್ನದಂತೆಯೇ ಕಾಣಿಸುತ್ತಿದೆ. ವೈರಸ್‌ ಹೊಸ ಸ್ವರೂಪದ ಸುದ್ದಿ ಹರಡುತ್ತಿದ್ದಂತೆಯೇ ಮೊದಲು ಮಹಾರಾಷ್ಟ್ರ ಸರಕಾರ ರಾತ್ರಿ ಗಂಟೆ 11ರಿಂದ ಬೆಳಗ್ಗೆ 6ರವರೆಗೆ ರಾತ್ರಿ ಕರ್ಫ್ಯೂ ಘೋಷಣೆ ಮಾಡಿದೆ. ಬಹುಶಃ ರಾಜ್ಯ ಸರಕಾರದ ಈ ನಿರ್ಣಯಕ್ಕೂ ಮಹಾರಾಷ್ಟ್ರವೇ ಮಾದರಿಯಾಗಿರಬೇಕು. ಆದರೆ ಇದರ ಅಗತ್ಯ ಹಾಗೂ ಫ‌ಲಪ್ರದದ ಕುರಿತು ಮೊದಲು ಚಿಂತಿಸಬೇಕಿತ್ತೆನಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ರಾತ್ರಿ ಕರ್ಫ್ಯೂ ಜಾರಿ ಮಾಡುವ ವಿಚಾರದಲ್ಲಿ ಸರಕಾರ ತೋರಿಸಿದ ಅತಿಯಾದ ಗೊಂದಲವೂ ಜನಸಾಮಾನ್ಯರಲ್ಲಿ ಅನಗತ್ಯ ಆತಂಕಕ್ಕೆ ಕಾರಣವಾಗಿರುವುದು ಸುಳ್ಳಲ್ಲ. ಒಮ್ಮೆ ರಾತ್ರಿ 10ರಿಂದ ಮುಂಜಾವ 6 ಗಂಟೆಯವರೆಗೆ ಕರ್ಫ್ಯೂ ಎಂದು ಆದೇಶ ಜಾರಿ ಮಾಡಲಾಗಿತ್ತು. ಈ ನಿರ್ಣಯಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಕರ್ಫ್ಯೂ ಸಮಯವನ್ನು ರಾತ್ರಿ 11 ಗಂಟೆಯಿಂದ 5ರ ವರೆಗೆ ಬದಲಿಸಿ, ರಾತ್ರಿ 11 ಗಂಟೆಗೂ ಮುಂಚೆಯೇ ಸಾರ್ವಜನಿಕರು ಬಸ್‌, ರೈಲು, ಆಟೋ, ಟ್ಯಾಕ್ಸಿಯಲ್ಲಿ ಪಯಣಿಸಬಹುದು ಎನ್ನಲಾಗಿದೆ. ಜನಸಂಚಾರ ತೀರಾ ನಗಣ್ಯವೆನ್ನಿಸುವಂತಿರುವ ರಾತ್ರಿಯ ಹೊತ್ತಲ್ಲಿ ಕರ್ಫ್ಯೂ ಜಾರಿ ಮಾಡಿದ್ದರಿಂದಾಗಿ ಸೋಂಕು ಹರಡುವಿಕೆ ಪ್ರಮಾಣ ತಗ್ಗುತ್ತದೆಯೇ? ಯಾವುದೇ ವ್ಯತ್ಯಾಸ ಉಂಟುಮಾಡದ ಇಂಥ ನಿಯಮದ ಜಾರಿಯ ಅಗತ್ಯವೇನಿತ್ತು ಎಂಬ ಪ್ರಶ್ನೆ ಎದುರಾಗುತ್ತದೆ.

ಒಂದೆಡೆ ಬ್ರಿಟನ್ ನಲ್ಲಿ ಕಾಣಿಸಿಕೊಂಡ ಕೋವಿಡ್‌ ರೂಪಾಂತರ ಭಾರತದಲ್ಲಿ ಎಲ್ಲೂ ಪತ್ತೆಯಾಗಿಲ್ಲ ಎಂದು ರಾಜ್ಯ ಸರಕಾರವೇ ಹೇಳುತ್ತಿದೆ. ಇನ್ನೊಂದೆಡೆ ಖುದ್ದು ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌ ಸಹ ವೈರಸ್‌ ಬಗ್ಗೆ ಆತಂಕ ಬೇಡ, ಇದೆಲ್ಲ ಕಾಲ್ಪನಿಕ ಪ್ಯಾನಿಕ್‌. ಇದರಲ್ಲಿ ನೀವು ಭಾಗಿಯಾಗಬೇಡಿ ಎಂದು ದೇಶವಾಸಿಗಳಿಗೆ ಸಂದೇಶ ನೀಡುತ್ತಾರೆ. ಹೀಗಿರುವಾಗ ಹಠಾತ್ತನೆ ಕರ್ಫ್ಯೂ ಜಾರಿ ಮಾಡುತ್ತೇವೆ ಎಂದಾಗ ಸಹಜವಾಗಿಯೇ ಜನರಿಗೆ ಆತಂಕ ಆಗಿತ್ತು. ಆದರೆ ನಿಸ್ಸಂಶಯವಾಗಿಯೂ ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿದ್ದು, ವಿಧಾನಸೌಧದಲ್ಲಿ ಬುಧವಾರವಿಡೀ ನಡೆದ ಗೊಂದಲದ ನಡೆಗಳು. ಇದರ ಬೆನ್ನಲ್ಲೇ, ಬ್ರಿಟನ್‌ ಹೊರತುಪಡಿಸಿ ಉಳಿದ ದೇಶಗಳಿಂದ ಬರುವ ಪ್ರಯಾಣಿಕರಿಗೆ ಯಾವ ಕ್ವಾರಂಟೈನ್‌ ಕ್ರಮವೂ ಇಲ್ಲದಿರುವುದು ಸೋಜಿಗ. ಕೋವಿಡ್‌ನಿಂದಾಗಿ ದೇಶದ ಆರ್ಥಿಕತೆ ದುರ್ಬಲವಾಗಿದೆ. ಇದನ್ನು ಗಮನಿಸಿದರೆ ಮತ್ತೆ ಲಾಕ್‌ಡೌನ್‌ನಂಥ ಕ್ರಮಗಳನ್ನು ಜಾರಿ ಮಾಡಿದರೆ ದೇಶವಾಸಿಗಳ ಆರ್ಥಿಕ ಸ್ಥಿತಿಗೆ ದೊಡ್ಡ ಪೆಟ್ಟು ಬೀಳುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು. ಹೀಗಾಗೇ ಸದ್ಯಕ್ಕೆ ಸರಕಾರದ ಮುಂದಿರುವ ಮಾರ್ಗವೆಂದರೆ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಪಾಲನೆಯಾಗುವುದನ್ನು ಖಾತ್ರಿ ಪಡಿಸುವುದು, ಲಸಿಕೆ ಬರುವವರೆಗೂ ಸುರಕ್ಷತ ಕ್ರಮಗಳ ಪಾಲನೆ ಮುಖ್ಯ ಎಂದು ಜನರಲ್ಲಿ ಜಾಗೃತಿ ಮೂಡಿಸುವುದು.

Advertisement

Udayavani is now on Telegram. Click here to join our channel and stay updated with the latest news.

Next