ಪಣಜಿ: ರಾಜ್ಯದಲ್ಲಿ ಕರೋನಾ ಸೋಂಕು ಹರಡುತ್ತಿರುವುದನ್ನು ನಿಯಂತ್ರಿಸಲು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ಹಲವು ನಿರ್ಬಂಧಗಳನ್ನು ಜಾರಿಗೊಳಿಸಿದ್ದಾರೆ. ಬುಧವಾರರಿಂದಲೇ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಂಡಿದೆ.
ಬುಧವಾರ ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಾವಂತ್- ರಾಜ್ಯದಲ್ಲಿ ಬುಧವಾರ ರಾತ್ರಿಯಿಂದಲೇ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ನೈಟ್ ಕರ್ಫ್ಯೂ ವಿಧಿಸಲಾಗಿದೆ. ನೈಟ್ ಕರ್ಫ್ಯೂ ಸಂದರ್ಬದಲ್ಲಿ ಅಗತ್ಯ ಸೇವೆಗಳಿಗೆ ಯಾವುದೇ ನಿರ್ಬಂಧವಿಲ್ಲ.
ಕ್ಯಾಸಿನೊ, ಸಿನೆಮಾ ಥಿಯೇಟರ್, ಬಾರ್ ಗಳಲ್ಲಿ ಶೇ 50 ರಷ್ಟು ಜನರಿಗೆ ಮಾತ್ರ ಅವಕಾಶವಿರುತ್ತದೆ. ಪುರಸಭೆಯ ಚುನಾವಣೆಗಳು ನಿಗಧಿತ ದಿನಾಂಕದಂದು ನಡೆಯುತ್ತದೆ. ರಾಜ್ಯದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. 10 ಮತ್ತು 12 ನೇಯ ತರಗತಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಹಿತಿ ನೀಡಿದರು.
ಇದನ್ನೂ ಓದಿ :18 ವಯಸ್ಸು ದಾಟಿದ ಎಲ್ಲರಿಗೂ ಉಚಿತ ಲಸಿಕೆ : ಕೇರಳ ಸಿಎಂ ಪಿಣರಾಯಿ ವಿಜಯನ್ ಘೋಷಣೆ
ಬಸ್‍ಗಳಲ್ಲಿ ಶೇ 50 ರಷ್ಟು ಮಾತ್ರ ಪ್ರಯಾಣಿಕರಿಗೆ ಅವಕಾಶವಿದೆ. ಏಪ್ರಿಲ್ 30 ರವರೆಗೆ ಈಗ ಜಾರಿಗೊಳಿಸಿರುವ ಮಾರ್ಗ ಸೂಚಿಗಳಲ್ಲಿ ಅಂದಿನ ಪರಿಸ್ಥಿತಿಯನ್ನು ನೋಡಿಕೊಂಡು ಬದಲಾವಣೆ ಮಾಡಲಾಗುವುದು. ಗೋವಾ ಗಡಿಯಲ್ಲಿ ನಿರ್ಬಂಧ ಹೇರಲು ಸಧ್ಯಕ್ಕೆ ಸಾಧ್ಯವಿಲ್ಲ. ಗೋವಾಕ್ಕೆ ಅಗತ್ಯ ವಸ್ತುಗಳೆಲ್ಲವೂ ಹೊರ ರಾಜ್ಯಗಳಿಂದಲೇ ಬರುತ್ತದೆ. ಗೋವಾದಲ್ಲಿ ಲಾಕ್‍ಡೌನ್ ಜಾರಿಯಾಗುವುದಿಲ್ಲ. ಇದರಿಂದಾಗಿ ಯಾರೂ ಕೂಡ ಭಯಭೀತರಾಗುವ ಅಗತ್ಯವಿಲ್ಲ. ಎಲ್ಲ ಚಟುವಟಿಕೆಗಳೂ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.