Advertisement
ಆಗ ಅಲ್ಲಿಯೇ ಒಣಗಿ ನಿಂತಿದ್ದ ಒಂದು ಬಿದಿರು ಆಮೆಯನ್ನು ಕರೆಯಿತು. “”ಆಮೆಯಣ್ಣ, ನೆನಪಿಲ್ಲವೆ? ಎಷ್ಟೋ ವರ್ಷಗಳ ಹಿಂದೆ ನೀನು ನನ್ನ ಬೀಜಗಳನ್ನು ತಂದು ಇಲ್ಲಿ ಹಾಕಿದ್ದೆ. ನಾನೀಗ ಮಕ್ಕಳು, ಮರಿಗಳೊಂದಿಗೆ ಸುಖವಾಗಿದ್ದೇನೆ. ಎಷ್ಟು ಉದ್ದವಾಗಿದ್ದೇನೆ ನೋಡು. ನಿನಗೆ ತಾಳೆಹಣ್ಣುಗಳನ್ನು ಕೊಯ್ಯಬೇಕಾಗಿದೆ ತಾನೆ? ಎತ್ತಿಕೋ ನನ್ನನ್ನು. ಬೇಕಾದಷ್ಟು ಹಣ್ಣುಗಳನ್ನು ಕಿತ್ತು ಹಾಕುತ್ತೇನೆ” ಎಂದು ಹೇಳಿತು. ಆಮೆ ಸಂತೋಷದಿಂದ ಬಿದಿರನ್ನು ಎತ್ತಿಕೊಂಡಿತು. ಅದು ಮರದಲ್ಲಿದ್ದ ಹಲವು ಹಣ್ಣುಗಳನ್ನು ಉದುರಿಸಿ ಹಾಕಿತು.
Related Articles
Advertisement
“”ಇನ್ನು ಮೇಲೆ ಬರಗಾಲ ಇದೆಯೆಂದು ಯಾರೂ ಕಂಗೆಡುವುದು ಬೇಡ. ದಿನವೂ ನನ್ನ ಮನೆಗೆ ಬನ್ನಿ. ಹೊಟ್ಟೆ ತುಂಬ ಊಟ ಮಾಡಿಹೋಗಿ” ಎಂದು ಆಮೆ ಪ್ರಾಣಿಗಳಿಗೆ ಹೇಳಿತು. ಡ್ರಮ್ ಬಾರಿಸಿ ತಿಂಡಿಗಳನ್ನು ತರಿಸಿ ಅವುಗಳಿಗೂ ಕೊಟ್ಟು ಸುಖವಾಗಿತ್ತು. ಆದರೆ ಈ ವಿಷಯ ಆನೆಗೆ ಗೊತ್ತಾಯಿತು. ಎಂಥ ಅನ್ಯಾಯ! ಇಡೀ ಕಾಡು ಊಟವಿಲ್ಲದೆ ಬಳಲುತ್ತಿರುವಾಗ ಈ ಆಮೆಯೊಂದು ಸುಖವಾಗಿರಬೇಕೆ? ಎಂದು ಅದಕ್ಕೆ ಕೋಪ ಬಂತು. ಆಮೆಯನ್ನು ಹುಡುಕಿಕೊಂಡು ನೆಟ್ಟಗೆ ಅದರ ಮನೆಗೆ ಬಂದಿತು.
ಆಗ ಆಮೆ ಡ್ರಮ್ ಬಾರಿಸುತ್ತ ಇತ್ತು. ಸಣ್ಣ ಪುಟ್ಟ ಪ್ರಾಣಿಗಳು ಕುಳಿತುಕೊಂಡು ಬಗೆಬಗೆಯ ತಿಂಡಿಗಳನ್ನು ಮೆಲ್ಲುತ್ತ ಇದ್ದವು. ಇದನ್ನು ನೋಡಿ ಆನೆಗೆ ತಾಳಲಾಗದ ಕೋಪ ಬಂದಿತು. “”ಏನಿದು ಮೋಸ? ನೀವೆಲ್ಲರೂ ತಿನ್ನುವಾಗ ನಾವು ಉಪವಾಸವಿರಬೇಕೆ? ಒಳ್ಳೆಯ ಮಾತಿನಲ್ಲಿ ನನಗೂ ಏನಾದರೂ ಕೊಡುತ್ತೀಯೋ ಅಲ್ಲ, ನಿನ್ನನ್ನು ಈ ಕಾಡಿನಿಂದಲೇ ಓಡಿಸಿಬಿಡಬೇಕಾ?” ಎಂದು ಗರ್ಜಿಸಿತು.
ಆಮೆಯು, “”ಇದಕ್ಕೆಲ್ಲ ಕೋಪ ಮಾಡಿಕೊಳ್ಳುವುದೇಕೆ ಆನೆಯಣ್ಣ? ನಾನು ನನಗೆ ಸಿಕ್ಕಿದ ಸೌಕರ್ಯವನ್ನು ನಾನೊಬ್ಬನೇ ಬಳಸಿಕೊಳ್ಳದೆ ಬೇರೆಯವರಿಗೂ ಕೊಟ್ಟು ಹಸಿವು ನೀಗಿಸುತ್ತಿದ್ದೇನಲ್ಲವೆ? ಬಾ, ನೀನೂ ಪಂಕ್ತಿಯಲ್ಲಿ ಕುಳಿತುಕೋ. ಊಟ ಮಾಡು” ಎಂದು ಕರೆಯಿತು. ಆನೆ ಊಟಕ್ಕೆ ಕುಳಿತಿತು. ಊಟ ರುಚಿಯಾಗಿಯೇ ಇತ್ತು. ಆದರೆ ಆಮೆ ಬಡಿಸುತ್ತಿದ್ದ ತಿಂಡಿಗಳು ಅದಕ್ಕೆ ಸಾಕಾಗಲಿಲ್ಲ. “”ನೀನು ಹೀಗೆ ತಡವಾಗಿ ಸ್ವಲ್ಪ ಸ್ವಲ್ಪ ತಂದುಕೊಟ್ಟರೆ ಹಸಿವಿನಿಂದ ನನ್ನ ಪ್ರಾಣ ಹೋಗುತ್ತದೆ ಅಷ್ಟೇ. ಬೇಗ ಬೇಗ ಡ್ರಮ್ ಬಡಿದು ಆಹಾರ ಶೀಘ್ರವಾಗಿ ಬರುವಂತೆ ಮಾಡು” ಎಂದು ಅವಸರಿಸಿತು. ಆಮೆ ಡ್ರಮ್ ಬಡಿಯುವ ವೇಗ ಹೆಚ್ಚಿಸಿದರೂ ಅದು ಸಾಲದೆಂದೇ ಆನೆಗೆ ತೋರಿತು. ತಾನೇ ಎದ್ದುಬಂದಿತು. ಆಮೆಯ ಕೈಯಿಂದ ಡ್ರಮ್ ಬಡಿಯುವ ಕೋಲನ್ನು ಕಿತ್ತುಕೊಂಡು ಒಂದೇ ಸವನೆ ಬಡಿಯತೊಡಗಿತು.
ಆನೆ ಬಡಿಯುವ ರಭಸ ತಾಳಲಾಗದೆ ಕೋಲು ಮುರಿದು ಹೋಯಿತು. ಇದರಿಂದ ಆಹಾರ ಬರುವುದು ನಿಂತುಹೋಯಿತು. ಆಮೆಗೆ ದುಃಖವಾಯಿತು. “”ಅವಸರ ಮಾಡಿ ಎಲ್ಲ ಹಾಳು ಮಾಡಿಬಿಟ್ಟೆ. ತುಂಬ ಕಷ್ಟಪಟ್ಟು ಸಂಪಾದಿಸಿದ್ದೆ. ಕೆಲವು ಪ್ರಾಣಿಗಳ ಹಸಿವು ಶಮನಕ್ಕೆ ಸಹಾಯವೂ ಆಗಿತ್ತು” ಎಂದು ದುಃಖ ಪಟ್ಟಿತು. ಆನೆ, “”ಅದಕ್ಕೆ ಯಾಕೆ ದುಃಖೀಸುವೆ? ಆ ಡ್ರಮ್ ಎಲ್ಲಿಂದ ಬಂತು, ಯಾರು ಕೊಟ್ಟರು ಎಂಬುದನ್ನು ಹೇಳು. ಅವರ ಬಳಿಗೆ ಹೋಗಿ ಇದರ ಅಪ್ಪನಂತಹ ಡ್ರಮ್ ತಂದು ಇಡೀ ಕಾಡಿಗೆ ಸಾಕು ಸಾಕೆನಿಸುವಷ್ಟು ಊಟ ಹಂಚುತ್ತೇನೆ ನೋಡು” ಎಂದು ಮೀಸೆ ತಿರುವಿತು.
ಆಮೆ ತನಗೆ ಡ್ರಮ್ ಕೊಟ್ಟ ದೆವ್ವವಿರುವ ಸ್ಥಳವನ್ನು ಆನೆಗೆ ವಿವರಿಸಿತು. ಆನೆ ನೆಟ್ಟಗೆ ನದಿಯ ಬಳಿಗೆ ಹೋಯಿತು. ಹಣ್ಣುಗಳು ತುಂಬಿಕೊಂಡಿದ್ದ ತಾಳೆಮರದ ಬುಡಕ್ಕೆ ಸೊಂಡಿಲು ಹಾಕಿ ಗಡಗಡನೆ ಅಲ್ಲಾಡಿಸಿತು. ಹಣ್ಣುಗಳು ದೊಬದೊಬನೆ ಬೀಳತೊಡಗಿದವು. ಆಗ ಮರವು ನೋವಿನಿಂದ, “”ಅಣ್ಣ, ಎಲ್ಲ ಕಡೆ ಬರಗಾಲ ಕಾಡುತ್ತಿದೆ. ಹಕ್ಕಿಗಳಿಗೆ, ಪ್ರಾಣಿಗಳಿಗೆ ನನ್ನ ಹಣ್ಣುಗಳು ಆಹಾರವಾಗುತ್ತಿವೆ. ಎಲ್ಲವನ್ನೂ ಒಮ್ಮೆಲೇ ಕೆಡವಿ ಖಾಲಿ ಮಾಡುವ ಬದಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ತೆಗೆದುಕೋ” ಎಂದು ಬೇಡಿಕೊಂಡಿತು. ಅದರ ಮಾತಿಗೆ ಆನೆ ಜಗ್ಗಲಿಲ್ಲ. “”ಅಧಿಕ ಪ್ರಸಂಗಿ, ಸುಮ್ಮನಿರು. ನನ್ನನ್ನು ತಡೆಯಲು ಬಂದರೆ ನಿನ್ನನ್ನು ಮುರಿದುಹಾಕುತ್ತೇನೆ” ಎಂದು ಬೆದರಿಸಿತು.
ಹಣ್ಣು ಕಿತ್ತ ಬಳಿಕ ಆನೆ ದೆವ್ವವಿರುವ ಹೊಂಡವೆಲ್ಲಿದೆ ಎಂದು ಹುಡುಕಿ ಅದರೊಳಗೆ ಇಳಿಯಿತು. ಅಲ್ಲಿ ದೆವ್ವ ಮಲಗಿ ನಿದ್ರೆ ಮಾಡುತ್ತ ಇತ್ತು. ಆನೆ ಕಾಲಿನಿಂದ ತುಳಿದು ಅದನ್ನು ಎಬ್ಬಿಸಿತು. “”ನಾನು ಕೊಯಿದ ತಾಳೆಹಣ್ಣುಗಳನ್ನೆಲ್ಲ ತಿಂದು ಏನೂ ಅರಿಯದವರ ಹಾಗೆ ಕಳ್ಳನಿದ್ರೆಗೆ ಜಾರಿದ್ದೀಯಲ್ಲ? ಏಳು ಏಳು. ನನ್ನ ಹಣ್ಣು ತಿಂದುದಕ್ಕೆ ಪ್ರತಿಫಲವಾಗಿ ದೊಡ್ಡದೊಂದು ಡ್ರಮ್ ಕೊಟ್ಟುಬಿಡು” ಎಂದು ಜೋರು ಮಾಡಿತು.
ದೆವ್ವಕ್ಕೆ ಆಶ್ಚರ್ಯವಾಯಿತು. “”ನಾನು ಒಂದು ಹಣ್ಣು ಕೂಡ ತಿಂದಿಲ್ಲ” ಎಂದು ಹೇಳಿತು. ಆದರೂ ಆನೆ ಕೇಳಲಿಲ್ಲ. “”ನನಗೊಂದು ಡ್ರಮ್ ಕೊಡು. ಇಲ್ಲವಾದರೆ ನಿನ್ನನ್ನು ಕಾಲಿನಿಂದ ತುಳಿದು ಜಜ್ಜಿ ಹಾಕುತ್ತೇನೆ” ಎಂದು ಹೆದರಿಸಿತು. ದೆವ್ವ ಅಲ್ಲಿ ಸಾಲುಸಾಲಾಗಿದ್ದ ಡ್ರಮ್ಮುಗಳನ್ನು ತೋರಿಸಿತು. “”ಬೇಕಾದುದನ್ನು ಆರಿಸಿಕೋ. ನಿನ್ನ ಅದೃಷ್ಟದಲ್ಲಿ ಏನು ಬರೆದಿದೆಯೋ ಅದು ಸಿಗುತ್ತದೆ” ಎಂದು ಸುಮ್ಮನಾಯಿತು.
ಆನೆ ಭಾರವಾದ ಒಂದು ದೊಡ್ಡ ಡ್ರಮ್ ಎತ್ತಿಕೊಂಡು ಕಾಡಿಗೆ ಬಂದಿತು. ಹುಲಿ, ಸಿಂಹ, ಜಿರಾಫೆ, ತೋಳ ಮೊದಲಾದ ಎಲ್ಲ ಪ್ರಾಣಿಗಳನ್ನೂ ಕರೆಯಿತು. “”ಇನ್ನು ಮುಂದಕ್ಕೆ ಬರಗಾಲದ ಮಾತೇ ಇಲ್ಲ. ಅಂತಹ ವಿಶೇಷವಾದ ಆಸ್ತಿಯನ್ನು ಕಷ್ಟಪಟ್ಟು ಸಂಪಾದಿಸಿ ತಂದಿದ್ದೇನೆ. ಯಾರಿಗೆ ಯಾವ ತಿಂಡಿ ಬೇಕು ಎಂದು ಸ್ಮರಿಸಿಕೊಂಡು ಕಣ್ಣುಗಳನ್ನು ಮುಚ್ಚಿಕೊಳ್ಳಿ. ಅರೆಕ್ಷಣದಲ್ಲಿ ಘಮಘಮಿಸುವ ತಿಂಡಿ ತುಂಬಿದ ತಾಟುಗಳು ನಿಮ್ಮ ಮುಂದಿರುತ್ತವೆ” ಎಂದು ಹೇಳಿ ದಬದಬನೆ ಡ್ರಮ್ ಬಾರಿಸಲು ಆರಂಭಿಸಿತು.
ಮರುಕ್ಷಣವೇ ಝೊಯ್ ಎಂದು ಸದ್ದು ಮಾಡುತ್ತ ಲಿಂಬೆಹಣ್ಣಿನಷ್ಟು ದೊಡ್ಡ ಗಾತ್ರದ ಕಣಜಗಳು ರಾಶಿರಾಶಿಯಾಗಿ ಎದ್ದುಬಂದುವು. ಅದು ತಿಂಡಿಗಳು ಬರುವ ಸದ್ದು ಎಂದು ಭಾವಿಸಿ ಆನೆ ಇನ್ನಷ್ಟು ಉತ್ಸಾಹದಿಂದ ಡ್ರಮ್ ಬಡಿಯಿತು. ಅದರಿಂದ ಕಣಜಗಳು ಸಾವಿರ ಸಂಖ್ಯೆಯಲ್ಲಿ ಬಂದು ಕಣ್ಮುಚ್ಚಿ ಕುಳಿತಿದ್ದ ಪ್ರಾಣಿಗಳಿಗೆ ಕುಟುಕತೊಡಗಿದವು. ನೋವು ತಾಳಲಾಗದೆ ಕಣ್ತೆರೆದು ನೋಡಿದಾಗ ಕಣಜಗಳ ದಾಳಿ ಕಂಡು “”ಅಯ್ಯಯ್ಯೋ ಸತ್ತೇಹೋದೆವು” ಎಂದು ಬೊಬ್ಬೆ ಹಾಕುತ್ತ ದಿಕ್ಕು ಸಿಕ್ಕತ್ತ ಓಡಿಹೋದವು. ಆನೆಯನ್ನೂ ಕಣಜಗಳು ಬಿಡಲಿಲ್ಲ. ಅದರ ಮೇಲೆ ದಾಳಿ ಮಾಡಿ ಕಚ್ಚಿದಾಗ ಅದು ಅವುಗಳಿಂದ ಪಾರಾಗಲು ಓಡಿಹೋಗಿ ಒಂದು ನದಿಗೆ ಧುಮುಕಿ ಅಲ್ಲಿರುವ ಕೆಸರಿನ ಹೊಂಡದಲ್ಲಿ ಮುಳುಗಿತು. ಆಮೇಲೆ ಡ್ರಮ್ಮಿನ ಕಡೆಗೆ ತಲೆ ಹಾಕಲಿಲ್ಲ.
ಪ. ರಾಮಕೃಷ್ಣ ಶಾಸ್ತ್ರಿ