Advertisement
“”ಬೇರೇನಲ್ಲ, ಹೇಗಿದ್ದರೂ ಸಾಯುತ್ತೀರಿ. ವೃಥಾ ಈ ದೇಹವನ್ನು ಮಣ್ಣು ಮಾಡುವ ಬದಲು ಬದುಕಿದ್ದಾಗಲೇ ಯಾರಾದರೂ ದೊಡ್ಡ ವ್ಯಕ್ತಿಗಳಿಗೆ ದಾನವಾಗಿ ಕೊಡಬಹುದು. ನಮ್ಮಂತಹ ಮಾಂಸಾಹಾರಿಗಳ ಹಸಿವು ನೀಗಲು ನಿಮ್ಮ ನಶ್ವರವಾದ ಶರೀರ ಸದ್ಬಳಕೆಯಾದರೆ ಸ್ವರ್ಗದಲ್ಲಿ ನಿಮಗೆ ದೊಡ್ಡ ಸ್ಥಾನ ಸಿಗುವುದು ಖಂಡಿತ” ಎಂದು ಬಣ್ಣದ ಮಾತುಗಳನ್ನು ಹೇಳಿತು ಸಿಂಹ. ಅದರ ಮಾತಿನ ಉದ್ದೇಶ ಎಲ್ಲ ಪ್ರಾಣಿಗಳಿಗೂ ಅರ್ಥವಾಯಿತು. ಅಳಿಲು ಪಿಳಿಪಿಳಿ ಕಣ್ಣು ಬಿಡುತ್ತ, “”ದೊರೆಯೇ, ಬರಗಾಲ ಬಂತು ಎಂದ ಕೂಡಲೇ ಯಾರಾದರೂ ಸಾಯಲು ಸಿದ್ಧರಾಗುತ್ತಾರೆಯೆ? ದೇವರು ದೊಡ್ಡವನು. ಇಂದಲ್ಲ, ನಾಳೆಯಾದರೂ ನಮ್ಮ ಗೋಳನ್ನು ಅರ್ಥ ಮಾಡಿಕೊಂಡು ಧಾರಾಳ ಮಳೆ ಸುರಿಸಬಹುದು. ಸಸ್ಯಗಳು ಮರಳಿ ಚಿಗುರಬಹುದು. ಆ ವರೆಗೂ ಕಸವನ್ನೋ ಕಡ್ಡಿಯನ್ನೋ ತಿಂದು ಬದುಕಲು ಇಚ್ಛಿಸುತ್ತೇವಲ್ಲದೆ ಸ್ವರ್ಗದಲ್ಲಿ ಜಾಗ ಸಿಗುತ್ತದೆಂದು ಈಗಲೇ ನಿಮಗೆ ಆಹಾರವಾಗಲು ಯಾರಾದರೂ ಹಂಬಲಿಸುತ್ತಾರೆಯೆ?” ಎಂದು ಮೆಲ್ಲಗೆ ಕೇಳಿತು.
Related Articles
Advertisement
ಇದನ್ನು ಕಂಡು ಪುಟ್ಟ ಆಮೆಗೆ ತುಂಬ ಭಯವಾಯಿತು. ಸಿಂಹವು ಮಾತಿಗೆ ತಪ್ಪಿದೆ. ಇದೇ ರೀತಿ ದಿನವೂ ಹಸಿವು ನೀಗುವಷ್ಟು ಪ್ರಾಣಿಗಳನ್ನು ನುಂಗಿದರೆ ಎಲ್ಲವೂ ಅಳಿದುಹೋಗಲು ಹೆಚ್ಚು ದಿನ ಬೇಡ ಎಂದು ಲೆಕ್ಕ ಹಾಕಿತು. ಅದು ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿತ್ತು. ಅಜ್ಜಿಯೇ ಆರೈಕೆ ಮಾಡಿ ಅದನ್ನು ಬೆಳೆಸಿತ್ತು. ಮೊಮ್ಮಗುವಿನ ಮೇಲೆ ಅಜ್ಜಿಗೆ ಎಷ್ಟು ಪ್ರೀತಿ ಇತ್ತೋ ಅಜ್ಜಿಗೂ ಮೊಮ್ಮಗು ಎಂದರೆ ಪಂಚಪ್ರಾಣವಾಗಿತ್ತು. ಆಮೆ ಅಜ್ಜಿಯೊಂದಿಗೆ ಸಿಂಹದ ವಿಷಯ ಹೇಳಿತು. ಎಲ್ಲ ಕೇಳಿದ ಮೇಲೆ ಅಜ್ಜಿ, “”ಹಾಗಿದ್ದರೆ ಸಿಂಹಕ್ಕೆ ಆಹಾರವಾಗಲು ನಾಳೆ ನನ್ನ ಸರದಿ ತಾನೆ? ಒಳ್ಳೆಯದು ಮಗೂ, ಸಿಂಹದ ಸಮೀಪ ನನ್ನನ್ನು ಕರೆದುಕೊಂಡು ಹೋಗಿ ಬಿಟ್ಟು ಬಂದುಬಿಡು. ಆಮೇಲೆ ನಿನ್ನ ಆರೋಗ್ಯವನ್ನು ಚೆನ್ನಾಗಿ ನೋಡಿಕೋ. ನಾನು ಇಲ್ಲ ಎಂದು ದುಃಖದಲ್ಲಿ ಊಟ ಮಾಡದೆ ಇರಬೇಡ” ಎಂದು ಕಣ್ಣೀರು ಮಿಡಿಯಿತು.
ಮರಿ ಆಮೆ ಅಜ್ಜಿಯನ್ನು ಬಿಗಿದಪ್ಪಿಕೊಂಡಿತು. “”ಇಲ್ಲ ಅಜ್ಜಿ, ನನ್ನ ಮೇಲೆ ಇಷ್ಟು ಪ್ರೀತಿಯಿಟ್ಟಿರುವ ನಿನ್ನನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. ನಾನೊಂದು ಉಪಾಯ ಹುಡುಕಿದ್ದೇನೆ. ಕಾಡಿನಲ್ಲಿ ಒಂದು ದೊಡ್ಡ ಮರವಿದೆ. ನನ್ನ ಗೆಳೆಯರಾದ ಗಿಡುಗ ಪಕ್ಷಿಗಳಿಗೆ ಹೇಳಿ ಅದರ ತುದಿಯಲ್ಲಿರುವ ಗೂಡಿನೊಳಗೆ ನಿನ್ನನ್ನು ರಹಸ್ಯವಾಗಿ ಇಡುವಂತೆ ಹೇಳಿದ್ದೇನೆ. ದಿನವೂ ನಾನು ಆಹಾರದೊಂದಿಗೆ ಮರದ ಬಳಿಗೆ ಬರುತ್ತೇನೆ. ನೀನು ಮೇಲಿನಿಂದ ಒಂದು ಬುಟ್ಟಿಯನ್ನು ಹಗ್ಗದಲ್ಲಿ ಕೆಳಗಿಳಿಸಬೇಕು. ಅದರಲ್ಲಿ ಆಹಾರವನ್ನಿರಿಸಿದ ಬಳಿಕ ಮೇಲಕ್ಕೆಳೆದುಕೊಳ್ಳಬೇಕು. ಹೀಗೆ ನಿನ್ನನ್ನು ಕಾಪಾಡುತ್ತೇನೆ. ಸಿಂಹಕ್ಕೆ ಏನಾದರೊಂದು ಸುಳ್ಳು ಹೇಳುತ್ತೇನೆ” ಎಂದು ಸಣ್ಣ ದನಿಯಲ್ಲಿ ಹೇಳಿತು.
ಗಿಡುಗ ಪಕ್ಷಿಗಳು ಅಜ್ಜಿ ಆಮೆಯನ್ನು ಮರದ ತುದಿಯಲ್ಲಿದ್ದ ಗೂಡಿನಲ್ಲಿ ಸುರಕ್ಷಿತವಾಗಿ ಇರಿಸಿದವು. ಮರಿ ಆಮೆ ಮರುದಿನ ಕಣ್ಣೀರಿಳಿಸುತ್ತ ಸಿಂಹದ ಬಳಿಗೆ ಹೋಯಿತು. “”ಒಡೆಯಾ, ತುಂಬ ದುಃಖದ ಸುದ್ದಿ ಹೇಳಲು ತಮ್ಮ ಬಳಿಗೆ ಬಂದಿದ್ದೇನೆ. ಇಂದು ನಿಮಗೆ ಆಹಾರವಾಗಬೇಕಾಗಿದ್ದ ನನ್ನ ಅಜ್ಜಿಯು ನಿನ್ನೆ ರಾತ್ರೆಯೇ ವೃದ್ಧಾಪ್ಯದಿಂದ ತೀರಿಕೊಂಡಳು. ಪ್ರತಿಯಾಗಿ ನನ್ನ ತಾಯಿಯನ್ನು ಕರೆದುಕೊಂಡು ಬರಬಹುದೆಂದರೆ ಹುಟ್ಟಿದಾಗಲೇ ಅವಳನ್ನು ಕಳೆದುಕೊಂಡೆ. ದಯಾಳುವಾದ ತಮ್ಮ ಹಸಿವು ನೀಗಲು ನನ್ನ ದೇಹ ಮಾತ್ರ ಇದೆ. ಇದರಲ್ಲಿ ಒಂದು ಹಿಡಿ ಮಾಂಸವೂ ಇಲ್ಲ. ತಾವು ಇನ್ನೊಂದು ವರ್ಷ ಕಾದರೆ ಮೃಷ್ಟಾನ್ನ ಮಾಡುವಷ್ಟು ದೇಹ ಬಲಿಯುತ್ತದೆ. ಆಗ ತಿನ್ನಲು ಯೋಗ್ಯನಾಗುತ್ತೇನೆ” ಎಂದು ನಿವೇದಿಸಿತು. ಸಿಂಹ ಅದರ ಮಾತನ್ನು ನಂಬಿತು. “”ಹೌದಲ್ಲವೆ, ಅನಿರೀಕ್ಷಿತವಾಗಿ ಸಾವು ಬಂದರೆ ನೀನಾದರೂ ಏನು ಮಾಡಬಲ್ಲೆ? ಇಂದಿನ ಆಹಾರಕ್ಕೆ ಬೇರೆ ಏನಾದರೂ ಮಾಡುತ್ತೇನೆ. ಮುಂದಿನ ವರ್ಷ ನೀನು ಬಂದು ನನ್ನ ಹಸಿವು ನೀಗಿಸಿದರಾಯಿತು” ಎಂದು ಹೇಳಿ ಅದನ್ನು ಕಳುಹಿಸಿತು.
ಮರಿ ಆಮೆ ನಿಶ್ಚಿಂತೆಯಿಂದ ಮನೆಗೆ ಬಂದಿತು. ದಿನವೂ ರಹಸ್ಯವಾಗಿ ಅಜ್ಜಿ ನೆಲೆಸಿದ ಮರದ ಬಳಿಗೆ ಆಹಾರ ತೆಗೆದುಕೊಂಡು ಹೋಗುತ್ತಿತ್ತು. ಅಜ್ಜಿ ಹಗ್ಗದ ಮೂಲಕ ಮೇಲಿನಿಂದ ಬುಟ್ಟಿಯನ್ನು ಕೆಳಗಿಳಿಸುತ್ತಿತ್ತು. ಮರಿ ಅದರಲ್ಲಿಟ್ಟ ಅಹಾರವನ್ನು ಮೇಲಕ್ಕೆಳೆದುಕೊಳ್ಳುತ್ತಿತ್ತು. ಹೀಗೆ ಬಹು ಕಾಲ ಕಳೆಯಿತು. ಒಂದು ದಿನ ಮಾತ್ರ ಆಮೆ ಆಹಾರ ತಂದು ಬುಟ್ಟಿಯಲ್ಲಿಡುವುದನ್ನು ನರಿ ನೋಡಿತು. ಮರದ ಮೇಲೆ ಅಜ್ಜಿ ಹಾಯಾಗಿರುವುದೂ ಅದಕ್ಕೆ ಗೋಚರಿಸಿತು. ಆಮೇಲೆ ಅರೆಕ್ಷಣವೂ ತಡ ಮಾಡಲಿಲ್ಲ. ನೇರವಾಗಿ ಸಿಂಹದ ಬಳಿಗೆ ಬಂದಿತು.
“”ಒಡೆಯಾ, ದೇಹ ಇಷ್ಟು ದೊಡ್ಡದಿದ್ದರೂ ನಿಮ್ಮ ಮೆದುಳು ಬಹು ಚಿಕ್ಕದು. ದೇಹ ಸಣ್ಣದಾದರೂ ಆಮೆಯ ಜಾಣತನ ದೊಡ್ಡದು. ಅದರ ಮಾತು ನಂಬಿ ಮೋಸ ಹೋದಿರಿ” ಎಂದು ಹಂಗಿಸುತ್ತ ಈ ಸಂಗತಿಯನ್ನು ಹೇಳಿತು. ಸಿಂಹಕ್ಕೆ ತಾಳಲಾಗದಷ್ಟು ಕೋಪ ಬಂದಿತು. “”ಈಗಲೇ ನಡೆ. ಆ ಮರ ಎಲ್ಲಿದೆ ಎಂದು ತೋರಿಸು. ಮುದಿ ಆಮೆಯನ್ನು ಕೆಳಗೆ ತಂದು ಒಂದೇಟಿಗೆ ಕೊಂದುಬಿಡುತ್ತೇನೆ” ಎನ್ನುತ್ತ ನರಿಯೊಂದಿಗೆ ಮರದ ಬಳಿಗೆ ಬಂದಿತು. ಆಗ ಮರಿ ಆಮೆ ಅಜ್ಜಿಗೆ ಆಹಾರ ಕೊಡಲು ಅಲ್ಲಿಗೆ ತಲುಪಿತ್ತು. ಅದು ಸಿಂಹವನ್ನು ಕಂಡು, “”ಪ್ರಭುಗಳು ನನ್ನ ಮೋಸವನ್ನು ಕ್ಷಮಿಸ ಬೇಕು. ಅಜ್ಜಿಯ ಮೇಲಿನ ಪ್ರೀತಿಯಿಂದಾಗಿ ತಮಗೆ ಮೋಸ ಮಾಡಿಬಿಟ್ಟೆ. ತಾವು ಆಹಾರವನ್ನು ಮರದ ಮೇಲೆ ಕಳುಹಿಸುವ ಈ ಬುಟ್ಟಿಯಲ್ಲಿ ಕುಳಿತರೆ ಹಗ್ಗದಲ್ಲಿ ಮೇಲೆಳೆದು ಕೊಳ್ಳಲು ಅಜ್ಜಿಗೆ ಹೇಳುತ್ತೇನೆ. ಅಲ್ಲಿಗೆ ಹೋಗಿ ಅವಳನ್ನು ಆಹಾರವಾಗಿ ಸ್ವೀಕರಿಸಬಹುದು” ಎಂದು ಪ್ರಾರ್ಥಿಸಿತು.
ಆಮೆಯ ಮಾತು ಕೇಳಿ ಸಿಂಹ ಬುಟ್ಟಿಯಲ್ಲಿ ಕುಳಿತ ಕೂಡಲೇ ಅಜ್ಜಿ ಆಮೆ ಅದನ್ನು ಮರದ ಮೇಲೆಳೆದುಕೊಂಡು ಅಲ್ಲಿಂದ ನೇರವಾಗಿ ನೆಲಕ್ಕೆ ಧುಮುಕಿತು. ಚಿಪ್ಪು ಗಟ್ಟಿಯಿರುವ ಕಾರಣ ಅದಕ್ಕೆ ಏನೂ ತೊಂದರೆಯಾಗಲಿಲ್ಲ. ಮೊಮ್ಮಗನೊಂದಿಗೆ ಬೇಗಬೇಗನೆ ದೂರದ ನದಿಗೆ ಹೋಗಿ ಅಲ್ಲೇ ಮನೆ ಮಾಡಿತು. ಬಳಿಕ ಆಮೆಗಳಿಗೆ ನೀರೇ ಮನೆಯಾಯಿತು. ಸಿಂಹವು ಕೆಳಗಿಳಿಯಲಾಗದೆ ಮರದಲ್ಲೇ ಜೋತಾಡುತ್ತ ಇತ್ತು. ಜಿರಾಫೆ ಬಂದು ಅದನ್ನು ಕೆಳಗಿಳಿಸಿದ ಬಳಿಕ ನಾಚಿಕೆಯಿಂದ ಮುಖ ಮರೆಸಿಕೊಂಡು ಓಡಿತು.
ಪ. ರಾಮಕೃಷ್ಣ ಶಾಸ್ತ್ರಿ