ನೈಜೀರಿಯಾ: ಸೋಂಕು ಪ್ರಸರಣ ಮಟ್ಟ ಕಡಿತವಾದ ಹಿನ್ನೆಲೆಯಲ್ಲಿ ನೈಜೀರಿಯಾ ತನ್ನ ಮೂರು ಪ್ರಮುಖ ರಾಜ್ಯಗಳಲ್ಲಿ ಲಾಕ್‌ಡೌನ್ ನಿಯವನ್ನು ಸಡಿಲಗೊಳಿಸಿದೆ.
ಈ ಕುರಿತು ದೇಶದ ಅಧ್ಯಕ್ಷ ಬುಹಾರಿ ಮಾಹಿತಿ ಹಂಚಿಕೊಂಡಿದ್ದು, ಮೇ 4ರ ನಂತರ ಎಫ್‌ಸಿಟಿ (ಫೆಡರಲ್ ಕ್ಯಾಪಿಟಲ್ ಟೆರಿಟರಿ ಮತ್ತು ರಾಷ್ಟ್ರ ರಾಜಧಾನಿ ಅಬುಜಾ),ಲಾಗೋಸ್, ಓಗುನ್ ನಲ್ಲಿ ಹಂತಹಂತವಾಗಿ ಲಾಕ್‌ಡೌನ್ ಕ್ರಮ ಗಳನ್ನು ಸಡಿಲಗೊಳಿಸಲು ನಿರ್ಧರಿಸಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನೈಜೀರಿಯಾ ಸುಮಾರು 20 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಆಫ್ರಿ ಕಾದ ಪ್ರಮುಖ ದೇಶ. ಇಲ್ಲಿ ಈವರೆಗೂ 1, 300 ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿದ್ದು, 40 ಮಂದಿ ಸಾವನ್ನಪ್ಪಿದ್ದಾರೆ.
ಮಾರ್ಚ್ 30 ರಂದು ಈ ದೇಶ ತನ್ನ ರಾಜಧಾನಿ ಲಾಗೋಸ್, ನೆರೆಯ ಒಗುನ್ ಮತ್ತು ಅಬುಜಾ ಸೇರಿದಂತೆ ಮುಂತಾದ ಪ್ರಮುಖ ನಗರಗಳಲ್ಲಿ ಲಾಕ್‌ಡೌನ್ ಘೋಷಿಸಿತು. ಆದರೆ ಲಾಕ್‌ಡೌನ್ ನಿಯಮಗಳಿಂದ ಸದ್ಯ ದೇಶದ ಆರ್ಥಿಕತೆ ಕುಗ್ಗಿ ಹೋಗಿದ್ದು, ಬದುಕುಳಿಯಲು ದೈನಂದಿನ ವೇತನವನ್ನು ಅವಲಂಬಿಸಿರುವ ಲಕ್ಷಾಂತರ ಅನೌಪಚಾರಿಕ ಕಾರ್ಮಿಕರು ಪರದಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಫೆಡರಲ್ ಮತ್ತು ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಲಾಕ್‌ಡೌನ್ ಸಡಿಲಿಕೆಯ ಕುರಿತು ಚರ್ಚೆ ನಡೆಸಿದ್ದು, ಸಡಿಲಿಕೆ ನಂತರದ ಸಮಯದಲ್ಲಿ ಪ್ರಜೆಗಳ ಆರೋಗ್ಯ ರಕ್ಷಣೆಗಾಗಿ ಯಾವೆಲ್ಲ ಕ್ರಮಗಳನ್ನು ಪಾಲಿಸಬೇಕು ಎಂಬುದರ ಕುರಿತು ಯೋಜನೆ ರೂಪಿಸಲಾಗಿದೆ ಎಂದು ಬುಹಾರಿ ತಿಳಿಸಿದ್ದಾರೆ. ಆದರೆ ರಾಷ್ಟ್ರವ್ಯಾಪಿ ರಾತ್ರಿ 8 ರಿಂದ 6 ಗಂಟೆಯವರೆಗೆ ಕರ್ಫ್ಯೂ ಜಾರಿ ಇರಲಿದ್ದು, ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸಬೇಕು ಮತ್ತು ವಿವಿಧ ಪ್ರದೇಶಗಳ ನಡುವೆ ಅನಗತ್ಯ ಪ್ರಯಾಣ ನಿಷೇಧ ಜಾರಿಯಲ್ಲಿರುತ್ತದೆ. ಅದರಲ್ಲಿ ಸಡಿಲಿಕೆ ಇಲ್ಲ ಎಂದು ತಿಳಿಸಿದ್ದಾರೆ.