ಮುಂಬಯಿ : ದಿನೇ ದಿನೇ ಹೊಸ ಹೊಸ ಎತ್ತರದ ದಾಖಲೆಗಳನ್ನು ಬರೆಯುವುದು ಈಗ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕಕ್ಕೆ ಅಭ್ಯಾಸವೇ ಆಗಿದೆ ಎನ್ನಬಹುದು.
ಅಂತೆಯೇ ಇಂದು ಶುಕ್ರವಾರದ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ನಿಫ್ಟಿ ಸೂಚ್ಯಂಕ ಇದೇ ಮೊದಲ ಬಾರಿಗೆ 9,900 ಅಂಕಗಳ ಗಡಿಯನ್ನು ದಾಟಿ ಹೊಸ ಎತ್ತರವನ್ನು ದಾಖಲಿಸಿತು. ಇದೇ ವೇಳೆ ಸೆನ್ಸೆಕ್ಸ್ ಸೂಚ್ಯಂಕ 32,100 ಅಂಕಗಳಿಗೆ ಏರುವ ಮೂಲಕ ಇನ್ನೂ ಒಂದ ಹೊಸ ಎತ್ತರವನ್ನು ಕಂಡ ದಾಖಲೆಯನ್ನು ಮಾಡಿತು.
ಐಟಿ ದಿಗ್ಗಜ ಇನ್‌ಫೋಸಿಸ್ ತನ್ನ 2017-18ರ ಹಣಕಾಸು ವರ್ಷಕ್ಕೆ ಹಾಕಿಕೊಂಡಿದ್ದ ಆದಾಯ ಬೆಳವಣಿಗೆ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿಯೇ ತನ್ನ ನಿರ್ವಹಣೆಯನ್ನು ಕಾಯ್ದುಕೊಂಡಿರುವುದು ಇಂದು ಮುಂಬಯಿ ಶೇರು ಪೇಟೆಯ ಅಮಿತೋತ್ಸಾಹಕ್ಕೆ ಕಾರಣವಾಯಿತು.
ಈ ಹೊಸ ಸಾಧನೆಗಳ ಹೊರತಾಗಿಯೂ ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ ತನ್ನ ಆರಂಭಿಕ ಗಳಿಕೆಯನ್ನು ಬಿಟ್ಟುಕೊಟ್ಟು 46.04 ಅಂಕಗಳ ನಷ್ಟಕ್ಕೆ ಗುರಿಯಾಗಿ 31,991.34 ಅಂಕಗಳ ಮಟ್ಟದಲ್ಲೂ, ನಿಫ್ಟಿ 18.30 ಅಂಕಗಳ ನಷ್ಟಕ್ಕೆ ಗುರಿಯಾಗಿ 9,873.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದುದು ಚೋದ್ಯದ ಸಂಗತಿ ಎನಿಸಿತು.
ಇನ್‌ಫೋಸಿಸ್, ಟಿಸಿಎಸ್, ಅರಬಿಂದೋ ಫಾರ್ಮಾ, ರಿಲಯನ್ಸ್ ಮತ್ತು ಹಿಂಡಾಲ್ಕೊ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಅರಬಿಂದೋ ಫಾರ್ಮಾ, ಇನ್‌ಫೋಸಿಸ್, ಭಾರ್ತಿ ಇನ್‌ಫ್ರಾಟೆಲ್, ಸನ್ ಫಾರ್ಮಾ, ಸಿಪ್ಲಾ; ಟಾಪ್ ಲೂಸರ್‌ಗಳು : ಟಿಸಿಎಸ್, ಟಾಟಾ ಮೋಟರ್, ಎಚ್ ಡಿ ಎಫ್ ಸಿ, ಲಾರ್ಸನ್.