ಮುಂಬಯಿ : ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರವನ್ನು ಶೇ.0.25ರಷ್ಟು ಏರಿಸಿರುವ ಹಿನ್ನೆಲೆಯಲ್ಲಿ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಸ್ಥಿರತೆ ಕಂಡು ಬಂದಿರುವುದನ್ನು ಗಮನಿಸಿ ಮುಂಬಯಿ ಶೇರು ಪೇಟೆ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 206 ಅಂಕಗಳ ಉತ್ತಮ ಜಿಗಿತವನ್ನು ದಾಖಲಿಸಿದೆ.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 9,153 ಅಂಕಗಳ ಸಾರ್ವಕಾಲಿಕ ಎತ್ತರವನ್ನು ತಲುಪಿದೆ.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 172.72 ಅಂಕಗಳ ಏರಿಕೆಯೊಂದಿಗೆ 29,570.83 ಅಂಕಗಳ ಮಟ್ಟದಲ್ಲೂ, ನಿಫ್ಟಿ 58.90 ಅಂಕಗಳ ಏರಿಕೆಯೊಂದಿಗೆ 9,143.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್, ಹಣಕಾಸು, ಟೆಕ್ನಾಲಜಿ, ಆಟೋ, ಫಾರ್ಮಾ ಮತ್ತು ಮೆಟಲ್ ಕ್ಷೇತ್ರದ ಶೇರುಗಳು ಉತ್ತಮ ಖರೀದಿಯ ಬೆಂಬಲ ಪಡೆದವು. ಅಮೆರಿಕದ ಫೆಡರಲ್ ರಿಸರ್ವ್ ಶೇ.0.25ರಷ್ಟು ತನ್ನ ಬಡ್ಡಿದರವನ್ನು ಏರಿಸಿರುವುದು ಹಾಗೂ ಇಂದು ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯಲಿಕ್ಕಿರುವುದನ್ನು ಮುಂಬಯಿ ಶೇರು ಪೇಟೆ ಧನಾತ್ಮಕವಾಗಿ ಸ್ವೀಕರಿಸಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಇನ್‌ಫೋಸಿಸ್, ಎಚ್ ಡಿ ಎಪ್ ಸಿ, ಲಾರ್ಸನ್, ಟಾಟಾ ಮೋಟರ್, ಏಶ್ಯನ್ ಪೇಂಟ್ ಮತ್ತು ಟಾಟಾ ಸ್ಟೀಲ್ ಶೇರುಗಳು ಉತ್ತಮ ಮುನ್ನಡೆಯನ್ನು ದಾಖಲಿಸಿದವು.