Advertisement

ಮಂಗಳೂರು: ಇಬ್ಬರಿಗೆ ನಿಫಾ?

06:00 AM May 23, 2018 | Team Udayavani |

ಮಂಗಳೂರು: ನೆರೆಯ ಕೇರಳದಲ್ಲಿ ಜನರ ನಿದ್ದೆಗೆಡಿಸಿರುವ “ನಿಫಾ’ ವೈರಸ್‌ ಮಂಗಳೂರಿನಲ್ಲಿ ಇಬ್ಬರಿಗೆ ತಗಲಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ನಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ ಇಬ್ಬರ ಗಂಟಲು ದ್ರವ ಮಾದರಿಯನ್ನು ಹೆಚ್ಚಿನ ತಪಾಸಣೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್‌ ತಿಳಿಸಿದ್ದಾರೆ.

Advertisement

ನಿಫಾ ವೈರಸ್‌ ಸೋಂಕು ಹರಡದಂತೆ ಜಿಲ್ಲೆಯಲ್ಲಿ ನಿಗಾ ವಹಿಸಲಾಗಿದೆ. ಪೂರಕವಾಗಿ ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಜಿಲ್ಲೆಯ ಎಲ್ಲ ಆಸ್ಪತ್ರೆಗಳಿಗೆ ಸೂಚನೆ ರವಾನಿಸಲಾಗಿದೆ. ಈ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಡಾ| ರಾಮಕೃಷ್ಣ ರಾವ್‌, ಜಿಲ್ಲೆಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಶೀತ, ಕೆಮ್ಮಿನಿಂದ ಬಳಲುತ್ತಿರುವ ಮಂಗಳೂರು ಹಾಗೂ ಕೇರಳ ಮೂಲದ ಇಬ್ಬರು ರೋಗಿಗಳು ಮಂಗಳವಾರ ಬೆಳಗ್ಗೆ ಜಿಲ್ಲಾ ವೆನ್ಲಾಕ್‌ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಇವರಿಬ್ಬರ ರೋಗ ಲಕ್ಷಣಗಳು ನಿಫಾ ಸೋಂಕಿಗೆ ಹೋಲಿಕೆಯಾಗುತ್ತಿರುವ ಕಾರಣ ಗಂಟಲಿನ ದ್ರವದ ಮಾದರಿ ಸಂಗ್ರಹಿಸಿ ಮಣಿಪಾಲದ ಎಂಸಿವಿಆರ್‌ಗೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಬಂದ ಬಳಿಕವಷ್ಟೇ ನಿಫಾ ಅಥವಾ ಅನ್ಯ ಕಾಯಿಲೆ ಎಂಬುದನ್ನು ಖಚಿತಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಹಾಸ್ಟೆಲ್‌ ವಿದ್ಯಾರ್ಥಿ ತಪಾಸಣೆ
ಮಂಗಳೂರಿನ ಹಾಸ್ಟೆಲ್‌ಗ‌ಳಲ್ಲಿ ಕೇರಳದ ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಸಾಮಾನ್ಯ ರೋಗ ಲಕ್ಷಣ ಕಂಡುಬಂದಲ್ಲಿ ತಪಾಸಣೆ ನಡೆಸಲು ವಸತಿ ನಿಲಯಗಳ ಪ್ರಮುಖರಿಗೆ ವಿನಂತಿಸಲಾಗುವುದು. ನಿಫಾ ಸೋಂಕು ಪೀಡಿತ ಪ್ರದೇಶಗಳಿಗೆ ಹೋಗದಿರುವುದೇ ಉತ್ತಮ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು. 

ವೈದ್ಯರಿಗೆ ವಾಟ್ಸಪ್‌ ಗ್ರೂಪ್‌
ನಿಫಾ ಬಗ್ಗೆ ಜಾಗೃತಿ ಮತ್ತು ಸೂಕ್ತ ಸಂವಹನದೊಂದಿಗೆ ಈ ಸೋಂಕು ಜಿಲ್ಲೆಗೆ ಬಾರದಂತೆ ತಡೆ ಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ವೈದ್ಯ ರನ್ನೊಳಗೊಂಡ ವಾಟ್ಸಪ್‌ ಗ್ರೂಪ್‌ ರಚಿಸಲಾಗುವುದು ಎಂದರು. ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ| ರಾಜೇಶ್‌, ಆರ್‌ಸಿಎಚ್‌ ಅಧಿಕಾರಿ ಡಾ| ಅಶೋಕ್‌, ಡಾ| ಸಿಕಂದರ್‌ ಪಾಷಾ, ಐಎಂಎ ಅಧ್ಯಕ್ಷ ಡಾ| ಜಿ.ಕೆ. ಭಟ್‌ ಸಂಕಬಿತ್ತಿಲು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಪಸ್ಥಿತರಿದ್ದರು.

ಬಿದ್ದ ಹಣ್ಣು ತಿನ್ನಬೇಡಿ
ಬಾವಲಿಗಳ ದೇಹದಲ್ಲಿ ನಿಫಾ ವೈರಸ್‌ ಇರುವ ಸಾಧ್ಯತೆಯಿರುತ್ತದೆ. ಬಿದ್ದ ಹಣ್ಣು, ಗಾಯವಿರುವ ಹಣ್ಣು ಸೇವಿಸಬಾರದು. ನೀರನ್ನು ಕುದಿಸಿ, ಆರಿಸಿ ಕುಡಿಯಬೇಕು. ಪ್ರಾಣಿಗಳ ಒಡನಾಟದಿಂದ ದೂರವಿರಬೇಕು. ಮೆದುಳಿನ ಉರಿಯೂತ, ಶ್ವಾಸಕೋಶ ಸಮಸ್ಯೆ, ತೀವ್ರ ಜ್ವರ, ಹೊರಳಾಟ, ಬೊಬ್ಬೆ, ಉಸಿರಾಟ ಸಮಸ್ಯೆ, ಅರೆ ನಿದ್ರೆ, ಮೂಛೆìಯಂತಹ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸ ಬೇಕು ಎಂದರು. 

Advertisement

ಕೇರಳ ಪ್ರಯಾಣಿಕರಿಗೆ ಜ್ವರ/ಶೀತವಿದ್ದರೆ ಪರೀಕ್ಷಿಸಿ
ಜಿಲ್ಲಾಡಳಿತದ ವತಿಯಿಂದ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ವೈರಸ್‌ನ ಬಗ್ಗೆ ಜನರಿಗೆ ಮಾಹಿತಿ ಹಾಗೂ ವೈರಸ್‌ ಹರಡದಂತೆ ಎಚ್ಚರಿಕೆ ವಹಿಸಲು ಎಲ್ಲ ಖಾಸಗಿ-ಸರಕಾರಿ ಆಸ್ಪತ್ರೆಗಳು ಸೂಕ್ತ ಮುಂಜಾಗ್ರತೆ ಕೈಗೊಳ್ಳುವ ಬಗ್ಗೆ ಸೂಚನೆ ರವಾನಿಸಲಾಗಿದೆ.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮಂಗಳವಾರ ಬೆಳಗ್ಗೆ ಜಿಲ್ಲಾ ವಿಚಕ್ಷಣಾ ಸಮಿತಿ ಸಭೆ ಆಯೋಜಿಸಲಾಗಿತ್ತು. ಬಳಿಕ “ಉದಯವಾಣಿ’ ಜತೆಗೆ ಮಾತ ನಾಡಿದ ಅವರು, ಆತಂಕ ಬೇಡ. ಕೇರಳ ದಿಂದ ಬಂದು-ಹೋಗುವವರ ಪೈಕಿ ಯಾರಿಗಾದರೂ ಶೀತ-ಜ್ವರ ಸಂಬಂಧಿ ಸಮಸ್ಯೆ ಇದ್ದರೆ ಸೂಕ್ತ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದರು. 

ಹೈ ಅಲರ್ಟ್‌ ಇಲ್ಲ
ಕೇರಳದ ಬಹುತೇಕ ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣದ ಮೂಲಕವೇ ಬಂದು ಹೋಗುತ್ತಾರೆ. ಆದರೆ ಸದ್ಯ ಇಲ್ಲಿ ಹೈ ಅಲರ್ಟ್‌ ಘೋಷಿಸಿಲ್ಲ. ಆರೋಗ್ಯ ಇಲಾಖೆಯ ಸೂಚನೆ ಬಂದರೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆೆ. 

ಗಾಬರಿ ಅನಗತ್ಯ
ಸದ್ಯ ಈ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರ ಸ್ಥಿತಿಯೂ ಸಹಜವಾಗಿದೆ. ಸಾರ್ವಜನಿಕರು ಗಾಬರಿಪಡುವ ಅಗತ್ಯವಿಲ್ಲ. ಮುಂದೆ ಅಪಾಯವಾಗುವುದು ಬೇಡ ಎಂಬ ಏಕೈಕ ಕಾರಣದಿಂದ ಹೆಚ್ಚಿನ ತಪಾಸಣೆಗೆ ಕಳುಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ನಿಫಾ ವೈರಸ್‌ ವ್ಯಾಪಿಸಿದೆ ಎಂಬುದಾಗಿ ಬಿಂಬಿಸಿ ಜನರಲ್ಲಿ ಆತಂಕ ಮೂಡಿಸಬಾರದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ರಾವ್‌ ಮನವಿ ಮಾಡಿದ್ದಾರೆ.
ಸೋಂಕು ದೃಢಪಟ್ಟಲ್ಲಿ ಅಂತಹ ರೋಗಿಗಳಿಗೆ ವಿಶೇಷವಾದ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುವುದು. ಚಿಕಿತ್ಸೆ ನೀಡುವ ವೈದ್ಯರು ಮತ್ತು ನರ್ಸ್‌ ಗಳು ಕೂಡ ಮುನ್ನೆಚ್ಚರಿಕೆ ಕ್ರಮಕ್ಕೆೆ ಮುಂದಾಗಬೇಕು ಎಂದು ಎಲ್ಲ ಆಸ್ಪತ್ರೆಗಳಿಗೆ ತಿಳಿಸಲಾಗಿದೆ ಎಂದು ವಿವರಿಸಿದರು.

ನರ್ಸ್‌ ಪತ್ರ ವೈರಲ್‌
 “ನಾನು ಇಹಲೋಕ ತ್ಯಜಿಸುವ ಹಂತದಲ್ಲಿದ್ದೇನೆ. ಮತ್ತೆ ನಿಮ್ಮನ್ನು ನೋಡುತ್ತೇನೆಂಬ ಭರವಸೆ ನನಗಿಲ್ಲ. ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ…’ ಮಾರಣಾಂತಿಕ ನಿಫಾ ವೈರಸ್‌ಗೆ ತುತ್ತಾಗಿ ಸೋಮವಾರ ಮೃತಪಟ್ಟ ಕೇರಳದ ನರ್ಸ್‌ ಲಿನಿ ಪುತ್ತುಶೆÏàರಿ(28) ಅವರು ತಮ್ಮ ಪತಿಗೆ ಬರೆದ ಪತ್ರದ ಸಾಲುಗಳಿವು. ಕಲ್ಲಿಕೋಟೆಯ ಪೆರಬಂರ ತಾಲೂಕು ಆಸ್ಪತ್ರೆಯಲ್ಲಿ ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡುವ ವೇಳೆ ದಾದಿ ಲಿನಿ ದೇಹಕ್ಕೂ ನಿಫಾ ಸೋಂಕು ಅಂಟಿಕೊಂಡಿತ್ತು. ಹೀಗಾಗಿ ಅವರನ್ನು ಪ್ರತ್ಯೇಕ ವಾರ್ಡ್‌ ನಲ್ಲಿ ಇರಿಸಲಾಗಿತ್ತು. ಅಲ್ಲಿಂದಲೇ ಬಹರೈನ್‌ನಲ್ಲಿರುವ ತಮ್ಮ ಪತಿಗೆ ಕೊನೆಯ ಬಾರಿಗೆ ಲಿನಿ ಪತ್ರ ಬರೆದಿದ್ದಾರೆ. ಲಿನಿ ಅವರಿಗೆ 5 ಮತ್ತು 2 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ಪತ್ರ ಈಗ ವೈರಲ್‌ ಆಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next