Advertisement

ನಿಫಾ: ದಕ್ಷಿಣ ಕನ್ನಡದಲ್ಲೂ ಮುಂಜಾಗ್ರತೆ

02:06 AM Jun 05, 2019 | sudhir |

ಮಂಗಳೂರು: ಶಂಕಿತ ನಿಫಾ ವೈರಸ್‌ ಲಕ್ಷಣ ಗಳು ಕಂಡುಬಂದರೆ ತತ್‌ಕ್ಷಣ ಆರೋಗ್ಯ ಇಲಾಖೆಗೆ ತಿಳಿಸಬೇಕು ಎಂಬುದಾಗಿ ಜಿಲ್ಲೆಯ ಎಲ್ಲ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ಕೇರಳದ ವಿದ್ಯಾರ್ಥಿಯೊಬ್ಬರಲ್ಲಿ ನಿಫಾ ಪತ್ತೆಯಾದ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಗಡಿಯ ದಕ್ಷಿಣ ಕನ್ನಡದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

Advertisement

ಕೇರಳದಿಂದ ಮಂಗಳೂರಿಗೆ ಪ್ರತಿದಿನ ಹಲವರು ಸಂಚರಿಸುತ್ತಿರುತ್ತಾರೆ. ಅಲ್ಲದೆ ಇಲ್ಲಿನ ಆಸ್ಪತ್ರೆಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಹಾಗಾಗಿ ಈ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ.

ರೈಲು ನಿಲ್ದಾಣದಲ್ಲಿ ಮುಂಜಾಗ್ರತೆ

ಕೇರಳದಿಂದ ಮಂಗಳೂರಿಗೆ ಬಹುತೇಕ ಮಂದಿ ರೈಲಿನಲ್ಲೇ ಆಗಮಿಸುತ್ತಾರೆ. ಹಾಗಾಗಿ ರೈಲ್ವೇ ವೈದ್ಯರು ಈ ಬಗ್ಗೆ ಗಮನಹರಿಸುತ್ತಿರಬೇಕು. ಜ್ವರ ಅಥವಾ ಇತರ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳು ಬಂದಲ್ಲಿ ಸೂಕ್ತ ತಪಾಸಣೆ ನಡೆಸಬೇಕು. ಸಿಬಂದಿ ಕೊರತೆ ಇದ್ದಲ್ಲಿ ರೋಗಿಗಳನ್ನು ವೆನ್ಲಾಕ್‌ಗೂ ಶಿಫಾರಸು ಮಾಡಬಹುದು ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ| ಪ್ರವೀಣ್‌ ತಿಳಿಸಿದ್ದಾರೆ.

ಕಳೆದ ವರ್ಷ ಕೇರಳದ ಕೋಝಿಕ್ಕೋಡ್‌ ಮತ್ತು ಮಣಪ್ಪುರಂನಲ್ಲಿ ಮಾರಣಾಂತಿಕ ನಿಫಾಕ್ಕೆ ಸುಮಾರು 15ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಆಗಲೂ ದ.ಕ.ದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಜಿಲ್ಲೆಯ ಇಬ್ಬರಲ್ಲಿ ಶಂಕಿತ ಲಕ್ಷಣ ಕಂಡುಬಂದು ಅವರ ಗಂಟಲಿನ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಎರಡೂ ಪ್ರಕರಣಗಳಲ್ಲಿಯೂ ನೆಗೆಟಿವ್‌ ವರದಿ ಬಂದಿತ್ತು.

Advertisement

ಬಾವಲಿ, ಹಂದಿಗಳಿಂದ ವೈರಸ್‌

ನಿಫಾ ವೈರಸ್‌ ಪ್ರಮುಖವಾಗಿ ಬಾವಲಿ, ಹಂದಿಗಳಿಂದ ಹರಡುತ್ತದೆ. ಸಾಕುಪ್ರಾಣಿಗಳ ಮೂಲಕವೂ ಹರಡುವ ಸಾಧ್ಯತೆ ಇದೆ. ರೋಗಿಗಳು ಕೆಮ್ಮಿದಾಗ, ಸೀನಿದಾಗ ಹರಡುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅವಶ್ಯ.

ಬಿದ್ದ ಹಣ್ಣು ತಿನ್ನಬೇಡಿ

ರೋಗಪೀಡಿತ ಬಾವಲಿ ಕಚ್ಚಿದ ಹಣ್ಣುಗಳನ್ನು ತಿಂದಲ್ಲಿ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಬಿದ್ದ ಹಣ್ಣುಗಳನ್ನು ತಿನ್ನಬಾರದು. ಹಣ್ಣುಗಳನ್ನು ಚೆನ್ನಾಗಿ ತೊಳೆದು ತಿನ್ನಬೇಕು. ಆಹಾರ ಸೇವಿಸುವ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು. ರೋಗ ಕಂಡುಬಂದಿರುವ ಪ್ರದೇಶಕ್ಕೆ ಪ್ರಯಾಣಿಸುವಾಗಲೂ ಹರಡುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಅವಶ್ಯ.

ಲಕ್ಷಣಗಳೇನು?

ಮೆದುಳು ಊತ, ಜ್ವರ, ವಾಂತಿ, ತಲೆನೋವು ಮತ್ತು ಉಸಿರಾಟದ ತೊಂದರೆ ನಿಫಾ ಜ್ವರದ ಮುಖ್ಯ ಲಕ್ಷಣಗಳು. ಅತ್ಯಧಿಕ ವೇಗದಲ್ಲಿ ಹರಡುವ ವೈರಸ್‌ ಇದಾಗಿದ್ದು, ರೋಗಿಯು 24 ಗಂಟೆಯೊಳಗೆ ಕೋಮಾಕ್ಕೆ ತೆರಳುವ ಸಾಧ್ಯತೆಗಳೂ ಇವೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ಈ ಲಕ್ಷಣಗಳು ಕಂಡು ಬಂದ ತತ್‌ಕ್ಷಣ ನಿಫಾ ಎಂದು ಆತಂಕಪಡುವ ಅಗತ್ಯವಿಲ್ಲ. ವೈದ್ಯರಲ್ಲಿ ತೋರಿಸಿ ಖಾತರಿ ಪಡಿಸಿಕೊಂಡ ಅನಂತರವಷ್ಟೇ ಔಷಧ ಪಡೆದುಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next