Advertisement

Nipah ಆತಂಕ; ಗಡಿ ಭಾಗದಲ್ಲಿ ಮುನ್ನೆಚ್ಚರಿಕೆ: ಸಚಿವ ದಿನೇಶ್‌ ಗುಂಡೂರಾವ್‌

01:04 AM Sep 21, 2023 | Team Udayavani |

ಮಂಗಳೂರು: ರಾಜ್ಯದಲ್ಲಿ ಈವರೆಗೆ ಯಾವುದೇ ನಿಫಾ ಪ್ರಕರಣ ಕಂಡುಬಂದಿಲ್ಲ. ಕೇರಳಕ್ಕೆ ಹೊಂದಿಕೊಂಡಿರುವ ರಾಜ್ಯದ ಎಲ್ಲ ಗಡಿ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ದಿನೇಶ್‌ ಗುಂಡೂರಾವ್‌ ಅವರು ಹೇಳಿದರು.

Advertisement

ರಾಜ್ಯದಲ್ಲಿ ನಿಫಾ ವೈರಸ್‌ ಅನ್ನು ನಿಯಂತ್ರಿಸುವ ಮತ್ತು ತಡೆಗಟ್ಟುವ ಕುರಿತಂತೆ ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು ಮತ್ತು ಮೈಸೂರು ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿ, ಕೇರಳದಲ್ಲಿ ಸೆ.15ಕ್ಕೆ ಕೊನೆಯ ನಿಫಾ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸಂಪರ್ಕಿತ ಗಡಿ ಭಾಗಗಳಲ್ಲಿ ಅಕ್ಟೋಬರ್‌ ಎರಡನೇ ವಾರದವರೆಗೆ ಸರ್ವೆಲೆನ್ಸ್‌ ಮುಂದುವರಿಸಲಾಗುತ್ತದೆ ಎಂದು ತಿಳಿಸಿದರು.

ಚೆಕ್‌ಪೋಸ್ಟ್‌ಗಳಲ್ಲಿ ಸ್ಕ್ರೀನಿಂಗ್‌
ಚೆಕ್‌ಪೋಸ್ಟ್‌ಗಳಲ್ಲಿ ಸದ್ಯ ಸ್ಕ್ರೀನಿಂಗ್‌ ನಡೆಸಲಾಗುತ್ತಿದೆ. ಫೀವರ್‌ ಸರ್ವೇ ನಡೆಯುತ್ತಿದ್ದು, ದ.ಕ. ಜಿಲ್ಲೆಯಲ್ಲಿ 2,044, ಮೈಸೂರಿನಲ್ಲಿ 6,500, ಕೊಡಗು ಜಿಲ್ಲೆಯಲ್ಲಿ 1132 ಮಂದಿಯನ್ನು ತಪಾಸಣೆ ನಡೆಸಲಾಗಿದೆ. ಯಾರಿಗೂ ನಿಫಾ ಲಕ್ಷಣ ಕಂಡುಬಂದಿಲ್ಲ. ದ.ಕ. ಜಿಲ್ಲೆಯಿಂದ ಕೇರಳ ಭಾಗಕ್ಕೆ ಹೆಚ್ಚಿನ ಜನಸಂಚಾರ ಇರುವುದರಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದೇವೆ. ಕೇರಳದ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಂಪರ್ಕದಲ್ಲಿರುವಂತೆ ಸೂಚಿಸಲಾಗಿದೆ. ಒಂದು ವೇಳೆ ಸೋಂಕಿತ ನಿಫಾ ಲಕ್ಷಣ ಕಂಡುಬಂದರೆ ಅಂತಹವರನ್ನು ಪ್ರತ್ಯೇಕಿಸಲು ಜಿಲ್ಲಾಸ್ಪತ್ರೆಗಳಲ್ಲಿ ಐಸೋಲೇಶನ್‌ ವಾರ್ಡ್‌ ತೆರೆಯಲಾಗಿದೆ. ವರದಿಯಾಗುವ ಶಂಕಿತ ಪ್ರಕರಣಗಳ ಮಾದರಿಯನ್ನು ಪುಣೆಯಲ್ಲಿರುವ ಎನ್‌ಐವಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ರಾಜ್ಯದಲ್ಲಿ ಈ ರೀತಿಯ ಪ್ರಯೋಗಾಲಯ ತೆರೆಯುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು ಎಂದರು.

ದ.ಕ. ಜಿಲ್ಲೆ ಸೇರಿದಂತೆ ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವುದು ಸರಕಾರದ ಗಮನಕ್ಕೆ ಬಂದಿದ್ದು, ಗ್ರೂಡ್‌ ಡಿ ಹುದ್ದೆ ಹೊರಗುತ್ತಿಗೆ ಆಧಾರದಲ್ಲಿ ಸೇರ್ಪಡೆಗೆ, ಕನಿಷ್ಠ ವೇತನಕ್ಕೆ ಕ್ರಮ ವಹಿಸಲಾಗುವುದು. ವೆನ್ಲಾಕ್ ಸರ್ಜಿಕಲ್‌ ಬ್ಲಾಕ್‌ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ., ಜಿ. ಪಂ. ಸಿಇಒ ಡಾ| ಆನಂದ್‌, ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಿ ಡಾ| ತ್ರಿವೇಣಿ, ವಿಭಾಗೀಯ ಸಹ ನಿರ್ದೇಶಕಿ ಡಾ| ರಾಜೇಶ್ವರಿ ದೇವಿ, ಉಪ ನಿರ್ದೇಶಕಿ ಡಾ| ಪದ್ಮಾ ಎಂ.ಆರ್‌., ಚಾಮರಾಜನಗರದ ಜಿಲ್ಲಾ ಡಿಎಚ್‌ಒ ಡಾ| ಚಿದಂಬರ್‌, ಮೈಸೂರು ಜಿಲ್ಲಾ ಡಿಎಚ್‌ಒ ಡಾ| ಕುಮಾರ ಸ್ವಾಮಿ, ಕೊಡಗು ಜಿಲ್ಲಾ ಡಿಎಚ್‌ಒ ಡಾ| ಸತೀಶ್‌, ದ.ಕ. ಜಿಲ್ಲಾ ಡಿಎಚ್‌ಒ ಡಾ| ಕಿಶೋರ್‌ ಕುಮಾರ್‌, ರಾಜ್ಯ ಮಟ್ಟದ ಮೈಕ್ರೋ ಬಯಾಲಜಿಸ್ಟ್‌, ಸರ್ವೇಕ್ಷಣಾಧಿಕಾರಿಗಳು ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next