ನಟಿ ನಿಧಿ ಸುಬ್ಬಯ್ಯ ಮತ್ತೆ ಬಂದಿದ್ದಾರೆ! ಅರೇ, ಮದುವೆ ನಂತರ ನಿಧಿ ಮುಂಬೈನಲ್ಲೇ ಬೀಡುಬಿಟ್ಟು, ಬಾಲಿವುಡ್‌ನತ್ತ ಚಿತ್ತ ಹರಿಸಿದ್ದ ನಿಧಿ ಸುಬ್ಬಯ್ಯ ತಾನೇ? ಎಂದು ನೀವು ಕೇಳಬಹುದು. ಈ ಪ್ರಶ್ನೆಗೆ, ಉತ್ತರ ಅದೇ ನಿಧಿ ಸುಬ್ಬಯ್ಯ ಈಗ ಕನ್ನಡಕ್ಕೆ ವಾಪಾಸ್ ಆಗಿದ್ದಾರೆ. ಹೌದು, ನಿಧಿ ಕಂಬ್ಯಾಕ್ ಮತ್ತು ಸ್ಟೇ ಬ್ಯಾಕ್. ಅಷ್ಟಕ್ಕೂ ನಿಧಿ ಸುಬ್ಬಯ್ಯ ಯಾವ ಸಿನಿಮಾ ಮೂಲಕ ವಾಪಾಸ್ ಆಗಿದ್ದಾರೆ, ಇಷ್ಟು ದಿನ ಏನೆಲ್ಲಾ ಮಾಡುತ್ತಿದ್ದರು ಎಂಬಿತ್ಯಾದಿ ಪ್ರಶ್ನೆಗಳಿಗೆ ಸ್ವತಃ ನಿಧಿ ಸುಬ್ಬಯ್ಯ ಉತ್ತರಿಸಿದ್ದಾರೆ.
ನಿಧಿ ಸುಬ್ಬಯ್ಯ ಈ ಹಿಂದೆ “5ಜಿ’ ಎಂಬ ಚಿತ್ರ ಮಾಡಿದ್ದೇ ಕೊನೆ. ಅದು ಶುರುವಾಗಿದ್ದೂ ಮೂರ್‍ನಾಲ್ಕು ವರ್ಷಗಳ ಹಿಂದೆ. ಅಲ್ಲಿಗೆ ನಿಧಿ ಸರಿ ಸುಮಾರು ಮೂರು ವರ್ಷಗಳ ಕಾಲ ಸ್ಯಾಂಡಲ್‌ವುಡ್‌ನಿಂದ ದೂರವೇ ಇದ್ದರು. ಹಾಗಂತ, ಸಿನಿಮಾ ಸಹವಾಸ ಬೇಡ ಅಂತ ಹೋಗಿರಲಿಲ್ಲ. ಅವರು ಬಾಲಿವುಡ್ ಅಂಗಳದಲ್ಲಿದ್ದರು. ಅಲ್ಲೊಂದಷ್ಟು ಸಿನಿಮಾ ಮಾಡಿದ್ದೂ ಉಂಟು. ಎಲ್ಲೋ ಕಳೆದು ಹೋದರು ಎನ್ನುವಷ್ಟರಲ್ಲೆ ನಿಧಿ ಸುಬ್ಬಯ್ಯ, “ನಾನು ಮತ್ತೆ ಬಂದೆ’ ಎನ್ನುತ್ತಿದ್ದಾರೆ.
“ನಾನೀಗ ವಾಪಾಸ್ ಆಗಿದ್ದೇನೆ. ನಾಲ್ಕು ವರ್ಷಗಳ ಬಳಿಕ ನಾನು ಮೊದಲ ಸಲ ದ್ವಾರಕೀಶ್ ಚಿತ್ರ ಬ್ಯಾನರ್‌ನಲ್ಲಿ “ಆಯುಷ್ಮಾನ್ ಭವ’ ಚಿತ್ರದ ಮೂಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದೇನೆ. ಇದೊಂಥರಾ ಪುನಃ ನಾನು ನನ್ನ “ತವರು ಮನೆ’ಗೆ ಬಂದಂತಹ ಖುಷಿ. ಇನ್ನು ಮುಂದೆ ಸಿನಿಮಾ ನಟನೆ ಕಂಟಿನ್ಯೂ ಮಾಡ್ತೀನಿ. ಸಾಯೋವರೆಗೂ ಆ್ಯಕ್ಟ್ ಮಾಡ್ತಾ ಇರಬೇಕು. ನಾನೂ ಸಿನಿಮಾರಂಗಕ್ಕೆ ಬಂದು 50 ವರ್ಷ ಆಗೋಯ್ತು ಅಂತ ಹೇಳಿಕೊಳ್ಳಬೇಕು. ಅಲ್ಲಿಯವರೆಗೂ ನಟಿಸುವ ಆಸೆ, ಕನಸು ಇದೆ’ ಎಂಬುದು ನಿಧಿ ಮಾತು.
ಇಷ್ಟಕ್ಕೂ, ಕನ್ನಡದಲ್ಲಿ ಯಾವ ಅವಕಾಶಗಳೇ ಬರಲಿಲ್ಲವೇ? ಇದಕ್ಕೆ ಉತ್ತರಿಸುವ ನಿಧಿ, “ಹಾಗಂತ ಏನೂ ಇಲ್ಲ. ನನ್ನ ಲೈಫಲ್ಲಿ ಅಪ್ ಅಂಡ್ ಡೌನ್ಸ್ ಆಗೋಯ್ತು. ಅದೇಕೋ ಆ ಟೈಮ್ ಸರಿ ಇರಲಿಲ್ಲ. ನಟಿಸಬೇಕೆಂಬ ಮನಸ್ಥಿತಿಯೂ ಇರಲಿಲ್ಲ. “ಆಯುಷ್ಮಾನ್ ಭವ’ ಅವಕಾಶ ಸಿಕ್ಕಿದ್ದೂ ಕೂಡ ಲಕ್‌ನಲ್ಲೇ. ಆರು ತಿಂಗಳ ಹಿಂದೆ ಯೋಗೀಶ್ ಅವರು ಸೌಂಡ್ ರೆಕಾರ್ಡ್ಸ್‌ಗೆಂದು ಮುಂಬೈಗೆ ಬಂದಿದ್ದರು. ಆಗ, ಭೇಟಿಯಾಗಿದ್ದೆ. “ಒಂದು ಸಿನಿಮಾ ಇದೆ ಮಾಡ್ತೀಯಾ.
ಶಿವರಾಜಕುಮಾರ್ ಕಾಂಬಿನೇಷನ್. ಪಿ.ವಾಸು ನಿರ್ದೇಶಕರು’ ಅಂದರು. ಓಕೆ ಅಂದೆ. ಒನ್‌ಲೈನ್ ಸ್ಟೋರಿ ಕೇಳಿದೆ ಇಷ್ಟವಾಯ್ತು. ಓಕೆ ಆಗೋಯ್ತು. ಹಿಂದೆ ಬಂದ ಅವಕಾಶಗಳಿಗೆಲ್ಲಾ ನೋ ಅನ್ನುತ್ತಿದ್ದೆ. ಕಾರಣ, ಒಂದು ಸಿನಿಮಾಗೆ ಮೂರು ವರ್ಷ ಕಾಂಟ್ರ್ಯಾಕ್ಟ್ ಇತ್ತು. ಹಾಗಾಗಿ ಒಪ್ಪುತ್ತಿರಲಿಲ್ಲವಷ್ಟೇ. ಅದು ಬಿಟ್ಟರೆ ಬೇರೆ ಯಾವ ಕಾರಣಗಳೂ ಇಲ್ಲ’ ಎನ್ನುತ್ತಾರೆ ನಿಧಿ. ನಿಧಿ ಈಗ ಮತ್ತೆ ನಟನೆಗೆ ರೆಡಿಯಾಗಿದ್ದಾರಂತೆ. ಎಂಥಾ ಪಾತ್ರಕ್ಕೂ ಸೈ ಅಂತೆ.
“ಈಗಲೂ ಸಹ, ಫೇಸ್‌ಬುಕ್, ಇನ್ಸ್ಟಾಗ್ರಾಂನಲ್ಲಿ ಅದೆಷ್ಟೋ ಫ್ಯಾನ್ಸ್, “ಪಂಚರಂಗಿ’ ಚಿತ್ರದ ಡೈಲಾಗ್ ಹಾಕ್ತಾರೆ, ನನಗೇ ನೆನಪಿರದ ರೋಲ್, ಡೈಲಾಗ್ ಹೇಳ್ತಾರೆ. ಅದನ್ನು ನೋಡಿ ಈಗಲೂ ನನ್ನನ್ನು ಮರೆತಿಲ್ಲವಲ್ಲ ಅನಿಸುತ್ತೆ. ಸೋ, ಎಲ್ಲರಿಗೂ ಹತ್ತಿರವಾಗುವಂತಹ ಪಾತ್ರ ಎದುರು ನೋಡುತ್ತಿದ್ದೇನೆ. ಅದು ಚೆನ್ನಾಗಿರಬೇಕು. ಒಂದಷ್ಟು ಕಥೆ ಕೇಳ್ತಾ ಇದ್ದೇನೆ. ಎಷ್ಟೋ ಸಲ, ಇಷ್ಟಪಟ್ಟು ಮಾಡಿದ ಚಿತ್ರಗಳು ಬಿಡುಗಡೆಯಾಗೋದೇ ಇಲ್ಲ.
ಕನ್ನಡದಲ್ಲಿ ಎರಡು, ಹಿಂದಿಯಲ್ಲಿ ಒಂದು ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಹಾಕಿದ ಎಫರ್ಟ್ ನೆನಪಿಸಿಕೊಂಡರೆ ಬೇಜಾರಾಗುತ್ತೆ. ಸದ್ಯಕ್ಕೆ ಬಾಲಿವುಡ್‌ನಲ್ಲಿ ನಾಲ್ಕು ಸಿನಿಮಾಗಳಾಗಿವೆ. ಈಗ ಹಿಂದಿಯಲ್ಲಿ ವೆಬ್‌ಸೀರಿಸ್ ನಡೆಯುತ್ತಿದೆ. ಸದ್ಯಕ್ಕೆ ನಾನೀಗ ಮುಂಬೈನಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದೇನೆ. ಇನ್ನು, ನಿಧಿ ಇಲ್ಲೇ ಇರ್ತಾಳೆ. ನಿರಂತರವಾಗಿ ಕನ್ನಡ ಸಿನಿಮಾಗಳನ್ನು ಮಾಡಬೇಕು ಎಂಬುದು ನನ್ನೊಳಗಿನ ಆಸೆ’ ಎಂದು ಹೇಳಿಕೊಳ್ಳುತ್ತಾರೆ ನಿಧಿ.