Advertisement

ದಿಲ್ಲಿ ಸುಲ್ತಾನನ ಚಿನ್ನಕ್ಕೆ “ನಿಧಿಭಾಗ್ಯ’, ಹತ್ತು ಸಮಸ್ತರ ಚಿನ್ನಕ್ಕೆ “ಗೋಪುರಭಾಗ್ಯ’

09:05 PM Jun 08, 2019 | mahesh |

ಉಡುಪಿ: ಶ್ರೀಕೃಷ್ಣ ಮಠದ ಗರ್ಭಗುಡಿಗೆ ಸುವರ್ಣ ಗೋಪುರ ಸಮರ್ಪಣೆಯಾಗುತ್ತಿದೆ. ಇದು ಹತ್ತು ಸಮಸ್ತರಿಂದ ಸಂಗ್ರಹಿತವಾದ ಚಿನ್ನ. ಸುಮಾರು 450 ವರ್ಷಗಳ ಹಿಂದೆ ಇಂತಹುದೇ ಒಂದಿಷ್ಟು ಚಿನ್ನ ಬಂದಿತ್ತು. ಅದೀಗ ಭೂಗರ್ಭದಲ್ಲಿದೆ. ಉಡುಪಿಯಲ್ಲಿ ಎರಡು ವರ್ಷಗಳ ಪರ್ಯಾಯ ಪೂಜೆ ಆರಂಭಿಸಿದ ಶ್ರೀ ವಾದಿರಾಜ ಸ್ವಾಮಿಗಳು (1481-1601) ಮೊದಲ ಪರ್ಯಾಯ ಪೂಜೆಯನ್ನು 1532-33ರಲ್ಲಿ ನಡೆಸಿದ ಬಳಿಕ ಉತ್ತರ ಭಾರತದಲ್ಲಿ ಪ್ರವಾಸ ಕೈಗೊಂಡರು. ಅವರ ಎರಡನೇ ಪರ್ಯಾಯ 1548-49.

Advertisement

ಈ ನಡುವೆ 1534ರಿಂದ 47ರ ವರೆಗೆ ಉತ್ತರ ಭಾರತದಲ್ಲಿ ಸಂಚಾರ ಕೈಗೊಂಡರು. ಆಗ ನಡೆದ ಘಟನೆ “ವಾದಿರಾಜಗುರುವರ ಚರಿತಾಮೃತ’ದಲ್ಲಿ ಉಲ್ಲೇಖಗೊಂಡಿರುವುದು ಇತಿಹಾಸದ ಮೇಲೆ ಬೆಳಕು ಚೆಲ್ಲುವಂತೆ ಮಾಡುತ್ತದೆ. 3ನೇ ಅಧ್ಯಾಯದಲ್ಲಿ ಇದರ ಬಗ್ಗೆ ಹೇಳಲಾಗಿದೆ. ದಿಲ್ಲಿಯ ತುರುಷ್ಕರ ರಾಜನ ಪುತ್ರ ಮೃತಪಟ್ಟಿದ್ದ. ಆತನನ್ನು ವಾದಿರಾಜರು ಬದುಕಿಸಿದರು. ಅನಂತರ ರಾಜ ಭಾರೀ ಧನಕನಕಗಳನ್ನು ಒಂಟೆಗಳ ಮೇಲೆ ಹೇರಿಸಿ ಕಳುಹಿಸಿ ಕೊಟ್ಟ. ಆದರೆ ವಿರಕ್ತರಾದ ವಾದಿರಾಜರು ಅದನ್ನು ಗಂಗಾ ನದಿಗೆ ಎಸೆದು ಬದರಿ ಕಡೆಗೆ ಪ್ರಯಾಣ ಬೆಳೆಸಿದರು. ಬದರಿಯಿಂದ ವಾಪಸು ಬರುವಾಗ ರಾಜ ಮತ್ತೆ ಮತ್ತೆ ಒತ್ತಾಯಿಸಿ ಧನಕನಕ ಕಳುಹಿಸಿಕೊಟ್ಟ. ಶ್ರೀಕೃಷ್ಣ ಮಠಕ್ಕೆ ಶ್ರೀ ವಾದಿರಾಜರು ಆ ಚಿನ್ನವನ್ನು ಹೊದಿಸ ಬೇಕೆಂದಿದ್ದರು. ಆದರೆ ಸ್ವಪ್ನ ಸೂಚನೆಯಿಂದ ಅದನ್ನು ಕೈಬಿಟ್ಟರು. ಚಿನ್ನವನ್ನು ಶ್ರೀಕೃಷ್ಣ ಮಠದ ಉತ್ತರ ಭಾಗದಲ್ಲಿದ್ದ ತಕ್ಷಕ ಪೊಟರೆಗೆ ಸುರಿದು ಅದರ ಮೇಲೆ ನಾಗನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರು. ಮುಂದಿನ ಅಧ್ಯಾಯದಲ್ಲಿ ಮಿಕ್ಕುಳಿದ ಚಿನ್ನವನ್ನು ಸೋದೆ ಮಠದಲ್ಲಿ ಹಾಕಿ ಅದರ ಮೇಲೆ ಭೂತರಾಜರು, ನಾಗನನ್ನು ಪ್ರತಿಷ್ಠಾಪಿಸಿದರು ಎಂದು ವಿವರಣೆ ಇದೆ.

ಈ ಕಥೆಯ ವಿವರಗಳುಳ್ಳ ಉಬ್ಬು ಚಿತ್ರ ಸುಬ್ರಹ್ಮಣ್ಯ ದೇವರ ಗುಡಿಯ (ತಕ್ಷಕ ಪೊಟರೆ) ಗೋಡೆಯಲ್ಲಿದೆ.
ಆದರೆ ಧನಕನಕಾದಿಗಳನ್ನು ನೀಡಿದ ಆ ರಾಜ ಯಾರು? ಎಂಬುದಕ್ಕೆ ಇತಿಹಾಸದ ಶೋಧನೆ ನಡೆಯಬೇಕಿದೆ. ಅಂದಿನ ರಾಜ ಶೇರ್‌ ಶಾ ಕಾಲದಲ್ಲಿ ಏನಾದರೂ ನಡೆದಿರಬಹುದೆ? ಆ ಕಾಲಘಟ್ಟದ ಆಧಾರ ದಲ್ಲಿ ಹುಮಾಯೂನ್‌ ಮಗ ಅಕºರ್‌ ಇರ ಬಹುದು ಎಂದು ಊಹಿಸುತ್ತಾರೆ ಬಳ್ಳಾರಿ ವೀರಶೈವ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ, ಸಂಶೋಧಕ ಡಾ| ಜಿ.ಕೆ. ನಿಪ್ಪಾಣಿ.

ದಿಲ್ಲಿಯಿಂದ ಚಿನ್ನವನ್ನು, ಅಯೋಧ್ಯೆ ಯಿಂದ ಮುಖ್ಯಪ್ರಾಣ, ಗರುಡನ ವಿಗ್ರಹವನ್ನು ತಂದದ್ದೂ, ಚಿನ್ನವನ್ನು ಭೂಗತ ಮಾಡಿದ್ದೂ ಮುಖ್ಯಪ್ರಾಣ, ಗರುಡ ವಿಗ್ರಹ ಪ್ರತಿಷ್ಠಾಪನೆ ನಡೆದದ್ದೂ ಒಂದೇ ಅವಧಿಯಲ್ಲಿ. ದಿಲ್ಲಿ ಸುಲ್ತಾನನ ಘಟನೆ ನಡೆದ ಬಳಿಕ ಬದರಿಗೆ ಹೋದಾಗ ಅಯೋಧ್ಯೆಗೂ ತೆರಳಿದರು. ಅಲ್ಲಿ ಉತVನನ ಮಾಡಿಸಿ ಹನುಮ-ಗರುಡನ ವಿಗ್ರಹವನ್ನು ತಂದು ಇದೇ ಸಮಯದಲ್ಲಿ ಪ್ರತಿಷ್ಠೆ ಮಾಡಿದರು. ವಾದಿರಾಜ ಗುರುಚರಿತಾಮೃತದಲ್ಲಿ ಹೀಗೆ ಉಲ್ಲೇಖವಿದೆ. ತ್ರೇತಾಯುಗ ದಲ್ಲಿ ದಶರಥನ ಅರಮನೆಯಲ್ಲಿ ಶ್ರೀ ರಾಮಚಂದ್ರನಿಗೆ ಪಟ್ಟಾಭಿಷೇಕವಾಗುವಾಗ ಸಿಂಹಾಸನದ ಮೆಟ್ಟಿಲಿನ ಬಲಭಾಗದಲ್ಲಿ ಹನುಮಂತ ಮತ್ತು ಎಡಭಾಗದಲ್ಲಿ ಗರುಡನ ಪ್ರತಿಮೆಗಳಿದ್ದವು. ಇದನ್ನು ದಿವ್ಯದೃಷ್ಟಿಯಿಂದ ತಿಳಿದ ವಾದಿರಾಜರು ಉತ್ಖನನ ನಡೆಸಿ ಉಡುಪಿಗೆ ತಂದು ಪ್ರತಿಷ್ಠಾಪಿಸಿದರು’. ಸೋದೆ ಮಠಾಧಿಪತಿ ಗಳಾಗಿದ್ದ ಶ್ರೀ ವಿಶೊತ್ತಮತೀರ್ಥರು ತಲೆಮಾರಿನಿಂದ ತಲೆಮಾರಿಗೆ ಕೇಳಿಬಂದ ವಿಷಯವನ್ನು ಹೀಗೆ ವಿವರಿಸುತ್ತಿದ್ದರು ಎಂದು ಡಾ| ನಿಪ್ಪಾಣಿ ಹೇಳುತ್ತಾರೆ.

ಈಗಿನ ಸನ್ನಿವೇಶವನ್ನು ಕಂಡಾಗ ಯಾವುದೇ ಪ್ರಮುಖ ಯೋಜನೆಗಳನ್ನು ಕೈಗೊಳ್ಳುವಾಗ ಅವರವರ ಪರ್ಯಾಯ ಅವಧಿಯಲ್ಲಿ ನೆರವೇರಿಸುತ್ತಾರೆ. ವಾದಿರಾಜರು ಸಂಚಾರ ಮಾಡಿರುವುದು 1534ರಿಂದ 47ರ ಅವಧಿಯೊಳಗಾದರೂ 1549-50ರ ಅವಧಿಯ ಎರಡನೇ ಪರ್ಯಾಯ ಅವಧಿಯಲ್ಲಿ ಮುಖ್ಯಪ್ರಾಣ ಗರುಡ ಪ್ರತಿಷ್ಠೆ, ತುರುಷ್ಕ ರಾಜನಿಂದ ಬಂದ ಚಿನ್ನದ ಭೂಗರ್ಭ ಮಾಡಿರಬಹುದು ಎಂದು ತರ್ಕಿಸಬಹುದು. ಇದು ನಡೆದು ಸುಮಾರು 470 ವರ್ಷಗಳ ಬಳಿಕ ಪರ್ಯಾಯ ಚಕ್ರ ಆರಂಭಗೊಳ್ಳುವ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಎರಡನೇ ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣ ಮಠದ ಸುವರ್ಣಗೋಪುರ ಸಮರ್ಪಣೆ ನಡೆಯುತ್ತಿದೆ. “ಅದು ಒಬ್ಬ ರಾಜನ ಸಂಪತ್ತಾಗಿತ್ತು, ದೇವಸ್ಥಾನವನ್ನು ಕಟ್ಟುವಾಗ ಹತ್ತು ಸಮಸ್ತರ ಸಹಾಯ ಬೇಕು ಎಂದಿದೆ. ಒಬ್ಬ ರಾಜನ ಸಂಪತ್ತಾದ್ದರಿಂದ ಅದನ್ನು ಬಳಸುವುದು ಬೇಡವೆಂಬ ಸೂಚನೆ ಶ್ರೀ ವಾದಿರಾಜರಿಗೆ ಬಂದಿರಬಹುದು. ಈಗ ವಾದಿರಾಜರ ಸನ್ನಿಧಿಯಲ್ಲಿಯೇ ಪ್ರಸಾದ ಕಂಡು ಅವರ ಸೂಚನೆಯಂತೆ ಸುವರ್ಣ ಗೋಪುರ ನಿರ್ಮಿಸಲಾಗುತ್ತಿದೆ’ ಎನ್ನುತ್ತಾರೆ ಶ್ರೀ ವಿದ್ಯಾಧೀಶತೀರ್ಥರು.

Advertisement
Advertisement

Udayavani is now on Telegram. Click here to join our channel and stay updated with the latest news.

Next